ಬೆಂಗಳೂರು:ಅಧಿಕಾರದಲ್ಲಿ ಮುಂದುವರೆಯುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೇ ಅನುಮಾನ ಕಾಡುತ್ತಿದೆ.
ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದ ದಿನಗಳಲ್ಲಿ ಯಾವುದೇ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಮಯ ನೀಡುತ್ತಿಲ್ಲ.
ಸರ್ಕಾರಿ ಕಾರ್ಯಗಳನ್ನು ಹೊರತುಪಡಿಸಿ ಉಳಿದ ಯಾವುದೇ ಖಾಸಗಿ ಕಾರ್ಯಕ್ರಮಗಳಿಗೆ ಸಮಯ ನಿಗದಿ ಮಾಡಬೇಡಿ ಎಂದು ತಮ್ಮ ಸಚಿವಾಲಯಕ್ಕೆ ಮೌಖಿಕ ಆದೇಶ ನೀಡಿದ್ದಾರೆ.
ಬೇರೆ ವ್ಯವಸ್ಥೆ ಮಾಡಿಕೊಳ್ಳಿ
ಖಾಸಗಿ ಸಮಾರಂಭಗಳಿಗೆ ಆಹ್ವಾನಿಸಲು ಭೇಟಿಗೆ ಬಂದಿದ್ದ ಆಯೋಜಕರಿಗೆ, ನೀವು ನಿಗದಿಪಡಿಸಿಕೊಂಡಿರುವ ಸಮಯದ ವೇಳೆಗೆ ನಾನು ಅಧಿಕಾರದಲ್ಲಿ ಇರುತ್ತೇನೋ, ಇಲ್ಲವೋ ಗೊತ್ತಿಲ್ಲ, ಆದ್ದರಿಂದ ನೀವುಗಳು ಬೇರೆ ವ್ಯವಸ್ಥೆ ಮಾಡಿಕೊಳ್ಳಿ ಎಂದಿದ್ದಾರೆ.
ಜನವರಿ 2 ಅಥವಾ 3ನೇ ವಾರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತೀಯ ವಿದ್ಯಾಭವನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಎರಡು ದಿನಗಳ ಕರ್ನಾಟಕ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಸಹಕಾರಿ ಪತ್ತಿನ ಸಂಘವೊಂದು ತನ್ನ 75ನೇ ವರ್ಷಾಚರಣೆಗೆ ಕರ್ನಾಟಕ ಭೇಟಿ ವೇಳೆ ರಾಷ್ಟ್ರಪತಿ ಅವರಿಗೆ ಆಹ್ವಾನ ನೀಡಿದ್ದಾರೆ.
ಆಹ್ವಾನಗಳ ನಿರಾಕರಣೆ
ಈ ಸಮಾರಂಭದಲ್ಲಿ ತಾವೂ ಭಾಗವಹಿಸಬೇಕೆಂದು ಮುಖ್ಯಮಂತ್ರಿ ಅವರಿಗೆ ಆಹ್ವಾನ ನೀಡಿದ ಸಂದರ್ಭದಲ್ಲಿ ಅವರು ಸ್ಪಷ್ಟವಾಗಿ ಆಹ್ವಾನ ನಿರಾಕರಿಸಿ, ಅಧಿಕಾರದಲ್ಲಿ ಮುಂದುವರೆಯುವ ಅನುಮಾನವನ್ನು ಆಹ್ವಾನಕ್ಕೆ ಬಂದವರ ಸಮಕ್ಷಮದಲ್ಲೇ ವ್ಯಕ್ತಪಡಿಸಿದ್ದಾರೆ.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ, ಪಕ್ಷ ಸಂಘಟನೆಗಾಗಿ ಸಚಿವರು ಅಧಿಕಾರ ತ್ಯಾಗ ಮಾಡಲು ಸಿದ್ಧವಿರಬೇಕು ಎಂಬ ಕಿವಿಮಾತು ಹೇಳಿದ್ದರು.
ಶಿವಕುಮಾರ್ ಹೇಳಿಕೆ ನಂತರ ಹಲವು ಹಿರಿಯ ಸಚಿವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ಸಂಪುಟ ಪುನರ್ ರಚನೆ ಬಗ್ಗೆಯೂ ಹೇಳಿಕೆಗಳನ್ನು ನೀಡಿದ್ದಾರೆ.
18 ತಿಂಗಳ ಆಡಳಿತಾವಧಿ
ಬರುವ ಡಿಸೆಂಬರ್‌ಗೆ 18 ತಿಂಗಳ ಆಡಳಿತಾವಧಿ ಪೂರೈಸಲಿರುವ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ಹಲವು ಭ್ರಷ್ಟಾಚಾರ ಆರೋಪಗಳ ಸುಳಿಗೆ ಸಿಲುಕಿದ್ದಾರೆ.
ಒಂದೆರಡು ಪ್ರಕರಣಗಳಲ್ಲಿ ಎಸ್‌ಐಟಿ ಮತ್ತು ಲೋಕಾಯುಕ್ತ ತನಿಖೆಯೂ ನಡೆಯುತ್ತಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವತಿಯಿಂದ ತಮ್ಮ ಕುಟುಂಬಕ್ಕೆ 14 ಬಿಡಿ ನಿವೇಶನಗಳನ್ನು ಪಡೆದ ಸಂಬಂಧದ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಕೆಲವು ಸಾಮಾಜಿಕ ಕಾರ್ಯಕರ್ತರು ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದು, ಇವರ ಅರ್ಜಿಗಳು ವಿಚಾರಣೆ ಹಂತದಲ್ಲಿವೆ.
ಡಿಸೆಂಬರ್ ಮಧ್ಯದ ವೇಳೆಗೆ ಸಿಬಿಐಗೆ ವಹಿಸುವ ಅಥವಾ ಇಲ್ಲವೇ ತಿರಸ್ಕರಿಸುವ ಸಂಬಂಧ ನ್ಯಾಯಾಲಯ ತನ್ನ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.
ಹೈಕೋರ್ಟ್‌ಗೆ ಅಂತಿಮ ವರದಿ
ಮತ್ತೊಂದೆಡೆ ಮುಡಾ ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ, ತನ್ನ ಅಂತಿಮ ವರದಿಯನ್ನು ಡಿಸೆಂಬರ್‌ನಲ್ಲಿ ಹೈಕೋರ್ಟ್‌ಗೆ ಸಲ್ಲಿಸುವ ಸಾಧ್ಯತೆ ಇದೆ.
ಭ್ರಷ್ಟಾಚಾರ ಆರೋಪಗಳಿಂದ ಮುಜುಗರಕ್ಕೆ ಒಳಗಾಗಿರುವ ಮುಖ್ಯಮಂತ್ರಿ ಅವರು, ನ್ಯಾಯಾಲಯದ ತೀರ್ಪಿನ ನಿರೀಕ್ಷೆಯಲ್ಲಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಅನಿಸಿಕೆಗಳನ್ನು ಬಹಿರಂಗವಾಗೇ ತಿಳಿಸುತ್ತಿದ್ದಾರೆ.
ಈ ಮಧ್ಯೆ ಮುಖ್ಯಮಂತ್ರಿ ಅವರು ದೆಹಲಿಗೆ ತೆರಳಿದ್ದಾರೆ, ನಾಳೆ, ಶುಕ್ರವಾರ ಕಾಂಗ್ರೆಸ್ ವರಿಷ್ಠರನ್ನು ಕೆಪಿಸಿಸಿ ಅಧ್ಯಕ್ಷರ ಜೊತೆಗೂಡಿ ಭೇಟಿ ಮಾಡಲಿದ್ದಾರೆ.