ಬೆಂಗಳೂರು:ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸಮರ ಸಾರಿರುವ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತವರ ತಂಡದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಪಕ್ಷ ಸಂಘಟನೆ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೈ ಬಲಪಡಿಸಲು ನಿಷ್ಠರ ಬಣ ದೇವಾಲಯಗಳ ಯಾತ್ರೆ ಆರಂಭಿಸಿದೆ.
ನಗರದಲ್ಲಿಂದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ 50ಕ್ಕೂ ಹೆಚ್ಚು ಬಿಜೆಪಿ ಮಾಜಿ ಶಾಸಕರು ಹಾಗೂ ಮುಖಂಡರು ಕಟ್ಟಾ ಅವರ ಮನೆಯಿಂದ ದೇವಾಲಯ ಯಾತ್ರೆ ಆರಂಭಿಸಿದರು.
ದೇವಾಲಯಗಳಿಗೆ ಭೇಟಿ
ಕೋಲಾರದ ಕುರುಡುಮಲೆ ಗಣೇಶ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಪಕ್ಷದ ಕಾರ್ಯಕರ್ತರ ಸಭೆ ನಡೆಸಿ, ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ಮೈಸೂರಿಗೆ ತೆರಳಿದರು.
ದೇವಾಲಯಗಳ ಯಾತ್ರೆ ತೆರಳುವುದಕ್ಕೂ ಮುನ್ನ ಕಟ್ಟಾ ಅವರ ಮನೆಯಲ್ಲಿ ಸೇರಿದ್ದ ನಿಷ್ಠರು, ವಕ್ಫ್ ಒತ್ತುವರಿ ತೆರವು ವಿರುದ್ಧದ ಹೋರಾಟ ಹೆಸರಿನಲ್ಲಿ ಬಿಜೆಪಿ ನಾಯಕತ್ವದ ವಿರುದ್ಧ ಬಂಡಾಯ ಸಾರಿರುವ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ ಜಾರಕಿಹೊಳಿ, ಅರವಿಂದ ಲಿಂಬಾವಳಿ ಸೇರಿದಂತೆ ಎಲ್ಲ ನಾಯಕರ ಪಕ್ಷ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಕಾರ್ಯಕರ್ತರ ಜೊತೆ ಹೋರಾಟ ನಡೆಸಲು ಸಭೆ ತೀರ್ಮಾನಿಸಿತು.
ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿ ಇರಬೇಕಾಗುತ್ತದೆ, ಆದರೆ, ಹಿರಿಯ ನಾಯಕರಾದ ಯತ್ನಾಳ್, ಜಾರಕಿಹೊಳಿ ಮೊದಲಾದವರು ಗೊಂದಲ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಆಪಾದಿಸಿದರು.
ಡಿ.4ರಿಂದ ರಾಜ್ಯಾದ್ಯಂತ ಪ್ರವಾಸ
ವಕ್ಫ್ ಒತ್ತುವರಿ ತೆರವು ವಿರುದ್ಧ ಜನಾಂದೋಲನ ಮೂಡಿಸಲು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷ ನಾಯಕರಾದ ಆರ್.ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಮೂರು ತಂಡಗಳು ಡಿಸೆಂಬರ್ 4ರಿಂದ ರಾಜ್ಯಾದ್ಯಂತ ಪ್ರವಾಸ ನಡೆಸಲಿವೆ, ಇದರಲ್ಲಿ ಎಲ್ಲ ಕಾರ್ಯಕರ್ತರು ಪಾಲ್ಗೊಳ್ಳಬೇಕು, ಆದರೆ, ಯತ್ನಾಳ್ ನೇತೃತ್ವದ ತಂಡ ಪರ್ಯಾಯವಾಗಿ ಯಾತ್ರೆ ಆರಂಭಿಸಿ ಗೊಂದಲ ಸೃಷ್ಟಿಸಿದೆ.
ಈ ಗೊಂದಲ ನಿವಾರಿಸುವ ದೃಷ್ಟಿಯಿಂದ ಯತ್ನಾಳ್ ಯಾತ್ರೆಗೆ ತಕ್ಷಣವೇ ಕಡಿವಾಣ ಹಾಕಬೇಕು, ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರಲಾಗುವುದು.
ಪಕ್ಷದಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳು ಗೊಂದಲಕ್ಕೆ ಕಾರಣವಾಗಿವೆ, ಆದರೆ, ಕಾರ್ಯಕರ್ತರು ಗೊಂದಲದಲ್ಲಿ ಸಿಲುಕದೆ ಪಕ್ಷದ ಅಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಮುನ್ನಡೆಯಬೇಕು ಎಂದು ಮನವಿ ಮಾಡಿದರು.