ಬೆಳಗಾವಿ:ಬಡತನದ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ನೀಡುವ ಬಿಪಿಎಲ್ ಪಡಿತರ ಚೀಟಿಗಳನ್ನು ಅರ್ಹರಲ್ಲದರು ಪಡೆದಿದ್ದರೆ, ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ವಿಧಾನ ಪರಿಷತ್‌ನಲ್ಲಿಂದು ಎಚ್ಚರಿಕೆ ನೀಡಿದ್ದಾರೆ.
ತಾವು ಇಲಾಖೆ ಹೊಣೆಗಾರಿಕೆ ವಹಿಸಿಕೊಂಡ ದಿನದಿಂದಲೇ ಅನರ್ಹರ ಪತ್ತೆ ಹಚ್ಚುವ ಕೆಲಸ ಮಾಡುತ್ತಿರುವುದಲ್ಲದೆ, ನ್ಯಾಯಾಲಯದ ಆದೇಶದಂತೆ ಕಾನೂನು ಕ್ರಮ ಕೈಗೊಂಡಿದ್ದೇವೆ ಎಂದರು.
ಪ್ರಶ್ನೋತ್ತರ ಅವಧಿಯಲ್ಲಿ ಟಿ.ಎನ್. ಜವರಾಯಿ ಗೌಡ, ಐವಾನ್ ಡಿಸೋಜ ಮತ್ತಿತರ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಇದುವರೆಗೂ ಅನರ್ಹರ ಚೀಟಿಗಳನ್ನು ರದ್ದುಪಡಿಸಿದ್ದೇವೆಯೇ ಹೊರತು ಅರ್ಹರ ಒಂದೂ ಚೀಟಿ ರದ್ದು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಶೇಷ ಕಾರ್ಯಾಚರಣೆ
ಅಕ್ರಮ ಪಡಿತರ ಚೀಟಿ ವಿರುದ್ಧದ ವಿಶೇಷ ಕಾರ್ಯಾಚರಣೆ ಮುಂದುವರೆದಿದೆ, ಅರ್ಹರಲ್ಲದವರು ಚೀಟಿ ಪಡೆದಿದ್ದರೆ, ಸ್ವಯಂಪೇರಿತಾಗಿ ಹಿಂತಿರುಗಿಸಿ ಎಂದು ಸರ್ಕರ ಸೂಚನೆ ನೀಡಿತ್ತು.
ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು, ನಿಯಮಾವಳಿ ಮೀರಿ ಲಕ್ಷಾಂತರ ಮಂದಿ ಬಿಪಿಎಲ್ ಪಡಿತರ ಚೀಟಿ ಪಡೆದು ಬಡವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದು ಇಂತಹವರನ್ನು ಇನ್ನು ಮುಂದೆ ಬಿಡುವುದಿಲ್ಲ ಎಂದರು.
ನಷ್ಟ ಭರಿಸಲು ಕ್ರಮ
ಜನವರಿ 2021ರಿಂದ ಮೇ 2023ರವರೆಗೆ 3,35,463 ಅನರ್ಹರು ಪಡೆದ ಆದ್ಯತಾ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲಾಗಿದೆ, ಇವರಿಗೆ 13,51,30,858 ರೂ. ದಂಡ ವಿಧಿಸುವ ಮೂಲಕ ನಷ್ಟ ಭರಿಸಲು ಸರ್ಕಾರ ಕ್ರಮ ವಹಿಸಿದೆ.
ಆಹಾರ ಇಲಾಖೆ ಉಗ್ರಾಣಗಳಿಂದ ಅಕ್ರಮವಾಗಿ ಕಾಳಸಂತೆಯಲ್ಲಿ ಅಕ್ಕಿ ಮಾರಾಟ ತಪ್ಪಿಸಲು ಸರ್ಕಾರ ಕ್ರಮ ವಹಿಸಿದೆ, ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಪಡಿತರ ಅಕ್ರಮ ಸಾಗಣೆ ಕಂಡುಬಂದಲ್ಲಿ ಕೂಡಲೇ ದಾಳಿ ನಡೆಸಿ, ಅಗತ್ಯ ವಸ್ತುಗಳ ಕಾಯ್ದೆ 1955ರಡಿ ಪ್ರಕರಣ ದಾಖಲಿಸಿ, ಅಕ್ರಮ ದಾಸ್ತಾನು ಮುಟ್ಟುಗೋಲು ಹಾಕಿಕೊಂಡು, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಮುಟ್ಟುಗೋಲು ದಾಸ್ತಾನು ವಿಲೇವಾರಿ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡಲಾಗುತ್ತಿದೆ.
2024-25ರಲ್ಲಿ 213 ಎಫ್.ಐ.ಆರ್ ದಾಖಲಿಸಿ ಒಟ್ಟು 2,68,07,872 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು, 238 ಆರೋಪಿಗಳನ್ನು ಬಂಧಿಸಲಾಗಿದೆ.
ಬಡತನ ರೇಖೆಗಿಂತ ಮೇಲೆ ಬಂದಿರುವವರ ಬಿಪಿಎಲ್ ಪಡಿತರ ಚೀಟಿಗಳನ್ನು ಆದ್ಯತೇತರ ಪಡಿತರ ಚೀಟಿಗಳನ್ನಾಗಿ ಪರಿವರ್ತಿಸಲು ಕ್ರಮ ವಹಿಸಲಾಗುತ್ತಿದೆ.
ಆಹಾರ ಇಲಾಖೆ ಸರ್ವರ್ ಹಳೆಯದಾಗಿದ್ದು, ಎನ್‌ಐಸಿಯಿಂದ ಕೆಎಸ್‌ಡಿಸಿಗೆ ಆಹಾರ ತಂತ್ರಾಂಶ ಮೈಗ್ರೇಶನ್ ಕಾರ್ಯ ಅಂತಿಮ ಹಂತದಲ್ಲಿದ್ದು, ಕಾರ್ಯಪೂರ್ಣಗೊಂಡ ನಂತರ ಆದ್ಯತಾ ಪಡಿತರ ಚೀಟಿ ನೀಡುವ ಹಾಗೂ ಪಡಿತರ ತಿದ್ದುಪಡಿ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದರು.