ಬೆಂಗಳೂರು:ಸಾಲು ಸಾಲು ಸಂಕಷ್ಟಗಳ ನಡುವೆಯೂ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿ ನಾಲ್ಕೂವರೆ ವರ್ಷ ಅಧಿಕಾರದ ವೇಳೆ ವಿಶ್ವ ಭೂಪಟದಲ್ಲಿ ಕರ್ನಾಟಕ ರಾರಾಜಿಸುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಮುಖ್ಯಮಂತ್ರಿಯಾಗಿ ರಾಜ್ಯವನ್ನು ಅದರಲ್ಲೂ ಬೆಂಗಳೂರನ್ನು ಐಟಿ-ಬಿಟಿ ಕ್ಷೇತ್ರದಲ್ಲಿ ವಿಶ್ವದ ಸಿಲಿಕಾನ್ ಸಿಟಿಯಾಗಿ ಮೇರುಮಟ್ಟಕ್ಕೆ ಕೊಂಡೊಯ್ಯುವಲ್ಲಿ ಕಾರಣೀಭೂತರಾಗಿದ್ದಲ್ಲದೆ, ರಾಜಧಾನಿಯನ್ನು ಸಿಂಗಪೂರ್ ಮಾದರಿ ನಗರವನ್ನಾಗಿಸುವ ಕಾರ್ಯಕ್ಕೆ ಮುಂದಾಗಿದ್ದರು.
ಇವರ ಆಡಳಿತಾವಧಿಯಲ್ಲೇ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ನಾಲ್ಕು ಪಥಗಳ ಮಾರ್ಗವಾಗಿ ಮಾರ್ಪಟ್ಟಿತು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ, ಮೆಟ್ರೊ ಯೋಜನೆ, ನಗರ ಮತ್ತು ಪಟ್ಟಣ ಪ್ರದೇಶಗಳ ಮೂಲಸೌಕರ್ಯ ಕಲ್ಪಿಸುವುದೂ ಸೇರಿದಂತೆ ಅನೇಕ ಜನಪರ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದರು.
ಸತತ ಬರಗಾಲದ ನಡುವೆಯೂ ರಾಜ್ಯದ ಬೊಕ್ಕಸ ಬರಿದಾಗದಂತೆ ನೋಡಿಕೊಂಡಿದ್ದಲ್ಲದೆ, ರೈತರಿಗಾಗಿ ಯಶಸ್ವಿನಿ ವಿಮಾ ಯೋಜನೆ, ಸರ್ಕಾರಿ ಶಾಲೆಗಳಲ್ಲಿ ಮಧ್ಯಾನ್ಹದ ಬಿಸಿಯೂಟ ಯೋಜನೆ ಆರಂಭಿಸಿದ ಹೆಗ್ಗಳಿಕೆ ಇವರದ್ದಾಗಿದೆ.
ಸ್ತ್ರೀಶಕ್ತಿ ಸಸ್ವಹಾಯ ಗುಂಪುಗಳನ್ನು ಅಸ್ತಿತ್ವಕ್ಕೆ ತಂದಿಲ್ಲದೆ, ಗ್ರಾಮೀಣ ಭಾಗದಲ್ಲಿ ವಸತಿಗಳ ನಿರ್ಮಾಣಕ್ಕೆ ಒತ್ತು ನೀಡಿದರು.
ರಾಜ್ಯ ಬೊಕ್ಕಸಕ್ಕೆ ಹಣ
ಆಡಳಿತವನ್ನು ಮದ್ಯದ ದೊರೆಗಳಿಂದ ಮುಕ್ತಗೊಳಿಸಲು ಪಾನೀಯ ನಿಗಮ ಸ್ಥಾಪಿಸಿ, ಸೆಕೆಂಡ್ಸ್ ಹಾವಳಿ ತಡೆಗಟ್ಟಿ ಪಾನಪ್ರಿಯರಿಗೆ ಕಡಿಮೆ ದರದಲ್ಲಿ ಮದ್ಯ ದೊರೆಯುವಂತೆ ಮಾಡುವ ಮೂಲಕ ರಾಜ್ಯ ಬೊಕ್ಕಸಕ್ಕೂ ಹಣ ಹರಿದುಬರುವಂತೆ ಮಾಡಿದರು.
ಒಂದೇ ಸೂರಿನಡಿ ಸರ್ಕಾರಿ ಸೇವೆ ದೊರೆಯಬೇಕೆಂದು ವಿಧಾನಸೌಧದ ಪಕ್ಕದಲ್ಲೇ ವಿಕಾಸಸೌಧ, ಅದರ ಸನಿಹದಲ್ಲೇ ಉದ್ಯೋಗಸೌಧ ನಿರ್ಮಿಸಿದರು.
ರೈತರ ಜಮೀನಿಗಾಗಿ ಭೂಮಿ ಆಪ್ ತಂದಿಲ್ಲದೆ, ಬಿಡಿಎ ಮೂಲಕ ಹೊಸ ಬಡಾವಣೆಗಳನ್ನು ನಿರ್ಮಿಸಿ ಲಕ್ಷಾಂತರ ನಿವೇಶನಗಳನ್ನು ಹಂಚಿಕೆ ಮಾಡಿದರು.
ಇವರ ಆಡಳಿತಾವಧಿಯಲ್ಲಿ ಮಳೆ ಇಲ್ಲದೆ ರೈತರು ಕಂಗಾಲಾದ ಸನ್ನಿವೇಶದಲ್ಲಿ ಕಾವೇರಿ ಜಲವಿವಾದ ಉಲ್ಬಣಗೊಂಡಿತ್ತು.
ಮಂಡ್ಯದವರೆಗೆ ಪಾದಯಾತ್ರೆ
ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡುವುದಕ್ಕೂ ಮುನ್ನ ಇವರು ಬೆಂಗಳೂರಿನಿಂದ ಮಂಡ್ಯದವರೆಗೆ ಪಾದಯಾತ್ರೆ ನಡೆಸಿದರು.
ಕೆ.ಎಚ್.ರಂಗನಾಥ್, ಎಚ್.ಸಿ.ಶ್ರೀಕಂಠಯ್ಯ, ಎಂ.ವೈಘೋರ್ಪಡೆ, ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ಡಿ.ಬಿ.ಚಂದ್ರೇಗೌಡ ಸೇರಿದಂತೆ ಘಟಾನುಘಟಿಗಳು ಕೃಷ್ಣ ಮಂತ್ರಿಮಂಡಲದಲ್ಲಿ ಇದ್ದರು.
ಆದಾಗ್ಯೂ ಇವರ ಆಡಳಿತಾವಧಿಯಲ್ಲಿ ಕಾವೇರಿ ಜಲ ವಿವಾದ, ಜಿಲ್ಲಾ, ತಾಲ್ಲೂಕು ಪಂಚಾಯತ್ ಚುನಾವಣೆ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಗ್ರಾಮೀಣ ಕೃಪಾಂಕ ಸೇರಿದಂತೆ ಹಲವು ವಿಷಯಗಳಲ್ಲಿ ಹಿನ್ನಡೆ ಅನುಭವಿಸಬೇಕಾಯಿತು.
ವರನಟ ಡಾ.ರಾಜ್ ಅಪಹರಣ
ಇದರ ನಡುವೆ ಕಾಡುಗಳ್ಳ ವೀರಪ್ಪನ್‌ನಿಂದ ಕನ್ನಡದ ವರನಟ ಡಾ.ರಾಜ್‌ಕುಮಾರ್ ಅಪಹರಣ ಕೃಷ್ಣ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿತು.
ಅಂದು ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ಸಿನೆಮಾ ದಿಗ್ಗಜರು ಹಾಗೂ ಪತ್ರಕರ್ತರನ್ನು ಬಳಸಿಕೊಂಡು ಬಹಳ ಚಾಕಚಕ್ಯತೆಯಿಂದ ವೀರಪ್ಪನ್ ಬಂಧನದಿಂದ ರಾಜ್‌ಕುಮಾರ್ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಕೃಷ್ಣ ಯಶಸ್ವಿಯಾದರು.
ವೀರಪ್ಪನ್ ಇವರ ಆಡಳಿತದಲ್ಲಿ ಒಂದಲ್ಲಾ ಒಂದು ಸಮಸ್ಯೆ ಒಡ್ಡುತ್ತಲೇ ಇದ್ದ, ಮಾಜಿ ಸಚಿವ ನಾಗಪ್ಪ ಹತ್ಯೆಯೂ ಅದೇ ಸಮಯದಲ್ಲಿ ನಡೆಯಿತು.