ಶ್ರದ್ಧಾಂಜಲಿ ಸಲ್ಲಿಸದ ಮಾಹಿತಿ ತಂತ್ರಜ್ಞಾನ ವಲಯ
ಬೆಂಗಳೂರು:ರಾಜಧಾನಿ ಬೆಂಗಳೂರನ್ನು ಐಟಿ-ಬಿಟಿ ಹಬ್ ಆಗಿ ಗುರುತಿಸಿಕೊಳ್ಳಲು ಕಾರಣೀಭೂತರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಮಾಹಿತಿ ತಂತ್ರಜ್ಞಾನ ವಲಯ ಕನಿಷ್ಠ ಗೌರವವಾಗಿ ಶ್ರದ್ಧಾಂಜಲಿಯನ್ನೂ ಸಲ್ಲಿಸದೆ ಉಪಕಾರ ಸ್ಮರಣೆಯೇ ಇಲ್ಲದಂತೆ ವರ್ತಿಸಿದೆ.
ಕೃಷ್ಣ ಅವರ ನಿಧನಕ್ಕೆ ರಾಜ್ಯ ಸರ್ಕಾರ ಗೌರವಾರ್ಥವಾಗಿ ಮೂರು ದಿನಗಳ ಕಾಲ ಶೋಕಾಚರಣೆ ಹಾಗೂ ಒಂದು ದಿನ ರಜೆ ಘೋಷಣೆ ಮಾಡಿದೆ.
ಶಿಕ್ಷಣ ಸಂಸ್ಥೆಗಳು, ಬ್ಯಾಂಕಿಂಗ್ ಸೇರಿದಂತೆ ಬಹುತೇಕ ವಲಯ ರಜೆ ಘೋಷಿಸುವ ಮೂಲಕ ಗೌರವ ಸಲ್ಲಿಸಿವೆ.
ಸಾವಿರಾರು ಐಟಿ ಸಂಸ್ಥೆಗಳು
ಕೃಷ್ಣ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಂದು 0.5ರಷ್ಟಿದ್ದ ಐಟಿ-ಬಿಟಿ ವಲಯ, ಅವರು ಅಧಿಕಾರದಿಂದ ಕೆಳಗಿಳಿಯುವ ವೇಳೆಗೆ ಬೆಂಗಳೂರು ಸೇರಿದಂತೆ ರಾಜ್ಯ ವಿವಿಧ ಭಾಗಗಳಲ್ಲಿ ಸಾವಿರಾರು ಮಾಹಿತಿ ತಂತ್ರಜ್ಞಾನ ಆಧಾರಿತ ಸಂಸ್ಥೆಗಳು ತಲೆ ಎತ್ತಿದ್ದವು.
ಈ ವಲಯ ಬೆಳೆಯಲೆಂದೇ ಕೃಷ್ಣ ಸರ್ಕಾರ ಅವರಿಗೆ ಅಗತ್ಯ ಭೂಮಿ ಮತ್ತು ಮೂಲಸೌಕರ್ಯ ಕಲ್ಪಿಸಿ ಉತ್ತೇಜಿಸಿತು, ಐಟಿ ದಿಗ್ಗಜರ ಬೇಡಿಕೆಗಳಿಗೆ ತಕ್ಕಂತೆ ಸೌಲಭ್ಯಗಳನ್ನೆಲ್ಲಾ ಸರ್ಕಾರ ಒದಗಿಸಿತು.
ಇದರಿಂದಾಗಿ ಸಾವಿರಾರು ಮಾಹಿತಿ ತಂತ್ರಜ್ಞಾನ ಆಧಾರಿತ ಸಂಸ್ಥೆಗಳು ಸ್ಥಾಪನೆಗೊಂಡು 20 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿ ಕರ್ನಾಟಕ ಹಾಗೂ ಕೇಂದ್ರ ಸರ್ಕಾರಕ್ಕೆ ಲಕ್ಷಾಂತರೂ ರೂ. ತೆರಿಗೆ ರೂಪದಲ್ಲಿ ಹರಿದುಬಂದಿತು.
ವಿಶ್ವದ ಅನೇಕ ಕಂಪನಿಗಳು
ಭಾರತೀಯ ಸಂಸ್ಥೆಗಳಲ್ಲದೆ, ವಿಶ್ವದ ಅನೇಕ ಕಂಪನಿಗಳು ಕರ್ನಾಟಕದಲ್ಲಿ ಶಾಖೆಗಳನ್ನು ಆರಂಭಿಸಿದವು.
ಅಂದು ಮುಖ್ಯಮಂತ್ರಿ ಕಚೇರಿಯನ್ನು ದಿನನಿತ್ಯ ಎಡತಾಕುತ್ತಿದ್ದ ಐಟಿ ಕಂಪನಿ ಸಂಸ್ಥಾಪಕರು ಇಂದು ಕೃಷ್ಣ ಅವರ ನಿಧನದ ಗೌರವಾರ್ಥ ಒಂದು ಸಣ್ಣ ಶ್ರದ್ಧಾಂಜಲಿ ಸಭೆಯನ್ನೂ ಆಯೋಜಿಸಲಿಲ್ಲ, ಸಾಮಾಜಿಕ ಜಾಲತಾಣಗಳಲ್ಲೂ ಕೃಷ್ಣ ಅವರ ಸ್ಮರಣೆ ಮಾಡಿಲ್ಲ.
ವೀರಪ್ಪ ಮೊಯಿಲಿ ಅವರು, ಶಿಕ್ಷಣ ಸಚಿವರಾಗಿ ಉನ್ನತ ಶಿಕ್ಷಣಕ್ಕೆ ಒತ್ತುಕೊಟ್ಟು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರಗಳಿಗೆ ಬಡವರು ಮತ್ತು ಮಧ್ಯಮ ವರ್ಗಗಳವರ ಪ್ರವೇಶಾವಕಾಶಕ್ಕೆ ಸಿಇಟಿ ಸ್ಥಾಪಿಸಿದರು.
ಲಕ್ಷಾಂತರ ವಿದ್ಯಾರ್ಥಿಗಳು
ಎಸ್.ಬಂಗಾರಪ್ಪ ಆಡಳಿತದಲ್ಲಿ ಈ ನಿರ್ಣಯ ಕೈಗೊಂಡಿದ್ದರಿಂದ ಕರ್ನಾಟಕದಿಂದ ಲಕ್ಷಾಂತರ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಪದವಿ ಪಡೆದುಕೊಂಡರು.
ಇದರಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಬೇಕಾದಂತಹ ಸಂಪನ್ಮೂಲ ವ್ಯಕ್ತಿಗಳು ದೊರೆಯುವರೆಂಬ ಉದ್ದೇಶದಿಂದ ಐಟಿ-ಬಿಟಿ ವಲಯ ಕರ್ನಾಟಕದತ್ತ ಮುಖ ಮಾಡಿತು.
ದೇವೇಗೌಡ ಹಾಗೂ ಜೆ.ಎಚ್.ಪಟೇಲ್ ಆಡಳಿತ ಕಾಲದಲ್ಲಿ ಈ ವಲಯದ ಅಭಿವೃದ್ಧಿಗೆ ಅಡಿಪಾಯ ಹಾಕಲಾಯಿತು.
ಐಟಿ-ಬಿಟಿ ವಲಯಕ್ಕೆ ಉತ್ತೇಜನ
ಆದರೆ, ಬೆಳವಣಿಗೆ ಆಗಿರಲಿಲ್ಲ, ಕೃಷ್ಣ ಅವರು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಬೆಂಗಳೂರು ನಗರಕ್ಕೆ ಮೂಲಸೌಕರ್ಯ ಕಲ್ಪಿಸಿಕೊಡುವ ಜೊತೆಗೆ ಐಟಿ-ಬಿಟಿ ವಲಯಕ್ಕೆ ಉತ್ತೇಜನ ನೀಡಿದರು.
ಇಷ್ಟಾದರೂ ಬೆಂಗಳೂರಿನ ಐಟಿ-ಬಿಟಿ ವಲಯ ಕೃಷ್ಣ ಅವರ ಋಣ ತೀರಿಸಲು ಮುಂದಾಗಿಲ್ಲ.