ಬೆಳಗಾವಿ:ರಾಜ್ಯದಲ್ಲಿ ನಡೆಯಲಿರುವ 2028 ರ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ’ಗಾಂಧಿ ಭಾರತ’ ಕಾರ್ಯಕ್ರಮ ಮುನ್ನುಡಿಯಾಗಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಡಿಸೆಂಬರ್ 26, 27ರಂದು ನಡೆಯಲಿರುವ ’ಗಾಂಧಿ ಭಾರತ’ ರಾಷ್ಟ್ರಮಟ್ಟದ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, 26ರ ಸಭೆಯಲ್ಲಿ ಪಕ್ಷದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು, 40 ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, 150 ಸಂಸದರು, ಶಾಸಕರು ಹಾಗೂ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ.
ಬೆಳಗಾವಿ ಇತಿಹಾಸ ಪುಟ
ಮಹಾತ್ಮ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ದೇಶದ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ಬೆಳಗಾವಿ ಅಧಿವೇಶನಕ್ಕೆ ಶತಮಾನ ತುಂಬಿದೆ, ನೂರು ವರ್ಷಗಳ ಬಳಿಕ ಮತ್ತೆ ಬೆಳಗಾವಿಯಲ್ಲಿ ನಾವು ಕಾಂಗ್ರೆಸ್ ಕಾರ್ಯಕ್ರಮ ಮಾಡುತ್ತಿದ್ದೇವೆ. ’ಗಾಂಧಿ ಭಾರತ’ ಮೂಲಕ ಬೆಳಗಾವಿ ಇತಿಹಾಸದ ಪುಟ ಸೇರಲಿದೆ ಎಂದರು.
ಅಂದು ಗಾಂಧಿ ಸ್ವೀಕರಿಸಿದ್ದ ಹುದ್ದೆಯಲ್ಲಿ ಪ್ರಸ್ತುತ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಇದ್ದು, ಈ ಸಂದರ್ಭದಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ಮತ್ತೊಂದು ವಿಶೇಷ.
ಕಾರ್ಯಕ್ರಮಕ್ಕೆ ಖರ್ಗೆ ಸೇರಿದಂತೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಎಲ್ಲಾ ರಾಷ್ಟ್ರೀಯ ನಾಯಕರು ಆಗಮಿಸಲಿದ್ದಾರೆ.
ಗ್ಯಾರಂಟಿ ದೇಶಕ್ಕೆ ಮಾದರಿ
ಬೆಳಗಾವಿಯ ಗಾಂಧಿ ಬಾವಿಯಲ್ಲಿ ನೀರು ತೆಗೆದು ಇಲ್ಲಿನ ಜಾಗ ಸ್ವಚ್ಛ ಮಾಡಿ, ನಮ್ಮ ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ಅಧಿಕಾರಕ್ಕೆ ಬಂದಿದ್ದೇವೆ, ಈ ಜಾಗದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದು, ಇದೇ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ, ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ, ಇದು ಕಾಂಗ್ರೆಸ್ ಪಕ್ಷದ ಶಕ್ತಿ.
27ರ ಬೆಳಗ್ಗೆ 11 ಗಂಟೆಗೆ ಪಕ್ಷದ ಕಾರ್ಯಕರ್ತರ ಬೃಹತ್ ಸಭೆ ನಡೆಯಲಿದ್ದು, ರಾಜ್ಯಾದ್ಯಂತ ಕಾರ್ಯಕರ್ತರು ಆಗಮಿಸಲಿದ್ದಾರೆ, ಪಂಚಾಯತ್ ಮಟ್ಟದಿಂದ ಎಲ್ಲಾ ಹಂತದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆದ್ದವರು, ಪರಾಜಿತರು, ಕಾಂಗ್ರೆಸ್ ಪಕ್ಷದ ಸದಸ್ಯರು ಸೇರಿ ಎಲ್ಲರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ.
ನಿಮ್ಮ ಜವಾಬ್ದಾರಿ ಶಕ್ತಿ ಪ್ರದರ್ಶನ ಮಾಡುವುದು, ಕಾರ್ಯಕ್ರಮಕ್ಕೆ ಹಣ ಕೊಟ್ಟು ಜನರನ್ನು ಕರೆತರಬಾರದು, ಸ್ವಇಚ್ಛೆಯಿಂದ ಕಾರ್ಯಕರ್ತರನ್ನು ಕರೆತರಬೇಕು, ಪ್ರತಿ ಕ್ಷೇತ್ರದಿಂದ ಕನಿಷ್ಠ 5 ಸಾವಿರ ಜನರನ್ನು ಕರೆತರಬೇಕು, ಸುತ್ತಮುತ್ತಲ ಜಿಲ್ಲೆಯಿಂದ ಹೆಚ್ಚು ಜನರನ್ನು ಕರೆತನ್ನಿ, ಬೆಂಗಳೂರು ಹಾಗೂ ಇತರೆ ಭಾಗಗಳಿಂದ ಜನರ ಕರೆತರುವ ಜವಾಬ್ದಾರಿ ನನ್ನದು.
ಬೆಳಗಾವಿ ದೀಪಾಲಂಕಾರ
ಕಾರ್ಯಕ್ರಮ ಮತ್ತೊಂದು ಇತಿಹಾಸಕ್ಕೆ ಮುನ್ನುಡಿ ಬರೆಯಬೇಕು, 7 ರಿಂದ 8 ಕೋಟಿ ರೂ. ಖರ್ಚು ಮಾಡಿ ಬೆಳಗಾವಿಯಲ್ಲಿ ಮೈಸೂರು ದಸರಾ ಮಾದರಿ ದೀಪಾಲಂಕಾರ, 1 ರಿಂದ 2 ಕೋಟಿ ರೂ. ವೆಚ್ಚದಲ್ಲಿ ಫ್ಲೆಕ್ಸ್ ಹಾಕಿಸಲಾಗುತ್ತಿದೆ, ಇದನ್ನು ನೋಡಿ ಜನ ಕಣ್ತುಂಬಿಕೊಳ್ಳಬೇಕು.
ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವನ್ನು ಗುಜರಾತ್, ದೆಹಲಿ ಹಾಗೂ ಬೇರೆ ರಾಜ್ಯಗಳಲ್ಲಿ ಮಾಡಬೇಡಿ, ಕಾರ್ಯಕ್ರಮದ ಜವಾಬ್ದಾರಿ ನಾನು ವಹಿಸಿಕೊಳ್ಳುತ್ತೇನೆ ಎಂದು ದೆಹಲಿ ನಾಯಕರನ್ನು ಒಪ್ಪಿಸಿದ್ದೇನೆ.
ಮಹಾತ್ಮ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡು ದೇಶದ ಸ್ವಾತಂತ್ರ್ಯಕ್ಕೆ ನೀಡಿದ ಸ್ಪೂರ್ತಿಯನ್ನು ನಾವೆಲ್ಲರೂ ಮತ್ತೆ ಈ ಭೂಮಿಯಿಂದ ಪಡೆಯಬೇಕು ಎಂದರು.
ಗಾಂಧಿ ಪ್ರೇರಣೆ
ಇದು ಕಾಂಗ್ರೆಸ್ ಭವಿಷ್ಯ, ದೇಶದ ಹಬ್ಬ, ಸ್ವಾತಂತ್ರ್ಯ ಬಂದ ನಂತರ ಪ್ರಜಾಪ್ರಭುತ್ವ ಸಂವಿಧಾನ ಜಾರಿಯಾಗಿದೆ, ಇದನ್ನು ಉಳಿಸಲು ಮತ್ತೊಮ್ಮೆ ಗಾಂಧಿ ಪ್ರೇರಣೆ ತೆಗೆದುಕೊಳ್ಳಲು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದೆ.
’ಒಂದು ದೇಶ, ಒಂದು ಚುನಾವಣೆ’ ಹುನ್ನಾರ ಬಿಜೆಪಿ ಮಾಡುತ್ತಿದೆ, ಕಾಂಗ್ರೆಸ್ ಶಕ್ತಿ, ಇತಿಹಾಸದ ಮುಂದೆ ಬೇರೆಯವರು ಏನು ಇಲ್ಲ.
ಕಾರ್ಯಕ್ರಮದ ನಂತರ ಗಾಂಧೀಜಿ ಭೇಟಿ ನೀಡಿದ ಸ್ಥಳಗಳಿಗೆ ಹಾಗೂ ಸುವರ್ಣಸೌಧಕ್ಕೆ ಪ್ರವಾಸ ಮಾಡಬಹುದು.
ರಾಜ್ಯದಾದ್ಯಂತ 100 ಕಾಂಗ್ರೆಸ್ ಕಚೇರಿ ನಿರ್ಮಾಣ ಮಾಡಲಾಗುವುದು, ಇದರ ಜವಾಬ್ದಾರಿ ಶಾಸಕರದ್ದು, ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸಹಕಾರ ನೀಡದ ಸಚಿವರು ಹಾಗೂ ಶಾಸಕರ ಕುರಿತು ನನಗೆ ಪತ್ರ ಬರೆಯಿರಿ ಎಂದರು.
