ಬೆಳಗಾವಿ:ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 32,870 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುವುದೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂ ರಾವ್ ವಿಧಾನ ಪರಿತ್‌ನಲ್ಲಿ ಇಂದು ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಡಾ.ಎಂ.ಜಿ.ಮುಳೆ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಖಾಲಿ ಇರುವ ಹುದ್ದೆಗಳಲ್ಲಿ ಶೇ.30ರಷ್ಟು ಗ್ರೂಪ್ ’ಡಿ’, ಶೇ.45ರಷ್ಟು ವೈದ್ಯಕೀಯೇತರ ವರ್ಗದ ಹುದ್ದೆಗಳನ್ನು ಒಟ್ಟಾರೆ ಶೇ.75ಕ್ಕೆ ಮೀರದಂತೆ ಭರ್ತಿ ಮಾಡಲಾಗುವುದು ಎಂದರು.
ಹೊರಗುತ್ತಿಗೆ ಆಧಾರ
ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಮೊದಲು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಲಾಗುವುದು.
ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಕೆಲವು ಷರತ್ತಿಗೆ ಒಳಪಟ್ಟು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಜಿಲ್ಲಾಡಳಿತಕ್ಕೆ ಅನುಮತಿ ನೀಡಲಾಗಿದೆ.
ಇಲಾಖೆ ಮುಖಾಂತರ ಸೇವಾ ನಿರತ ಸ್ನಾತಕೋತ್ತರ ವ್ಯಾಸಂಗ ಪೂರೈಸಿ ಬರುವ ತಜ್ಞ ವೈದ್ಯರನ್ನು ಸರಿಸಮಾನ ಹುದ್ದೆಗೆ ನೇಮಿಸಲಾಗುತ್ತಿದೆ.
120 ತಜ್ಞ ವೈದ್ಯರು
ಅಲ್ಲದೆ, ಇಲಾಖೆಯಲ್ಲಿ ಖಾಲಿ ಇರುವ120 ತಜ್ಞ ವೈದ್ಯರು ಹಾಗೂ 100 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳನ್ನು ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಲಾಗುವುದು, ಇದರಿಂದ ರೋಗಿಗಳಿಗೆ ಅಡಚಣೆ ಆಗದಂತೆ ಚಿಕಿತ್ಸೆ ನೀಡಲಾಗುತ್ತಿದೆ.
ಫಾರ್ಮಸಿ ಅಧಿಕಾರಿಯ 400 ಹುದ್ದೆ, ಕಿರಿಯ ವೈದ್ಯಾಧಿಕಾರಿ, ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಯ 150 ಹುದ್ದೆ, ವಿಕಿರಣಶಾಸ್ತ್ರದ 8 ಹುದ್ದೆಗಳನ್ನು ನೇರ ನೇಮಕಾತಿಯಡಿ ಭರ್ತಿ ಮಾಡಲಾಗುವುದು.
ಅಲ್ಲದೆ, ಇಲಾಖೆಯಲ್ಲಿ ಖಾಲಿ ಇರುವ 9,871 ಅರೆ ವೈದ್ಯಕೀಯ ಹುದ್ದೆಗಳ ಭರ್ತಿಗೆ ಅನುಮತಿ ನೀಡುವಂತೆ ಆರ್ಥಿಕ ಇಲಾಖೆಯನ್ನು ಕೋರಲಾಗಿದೆ ಎಂದರು.