ಬೆಂಗಳೂರು:ಗೋಲ್ಡನ್ ಚಾರಿಯೇಟ್ (ಸುವರ್ಣ ರಥ) ರೈಲು ಪ್ರವಾಸ ದಕ್ಷಿಣ ಭಾರತದ ಶ್ರೀಮಂತ ಸಂಸ್ಕೃತಿ, ಪರಂಪರೆ ಹಾಗೂ ಐತಿಹಾಸಿಕ ಸ್ಥಳಗಳ ಅನಾವರಣಕ್ಕೆ ಮುಕುಟಪ್ರಾಯವೆನಿಸಿದೆ ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಇಂದಿಲ್ಲಿ ತಿಳಿಸಿದ್ದಾರೆ.
ನಗರದ ಯಶವಂತಪುರ ರೈಲು ನಿಲ್ದಾಣದ ಫ್ಲಾಟ್ ಫಾರಂ ೬ ರಲ್ಲಿ ಗೋಲ್ಡನ್ ಚಾರಿಯೇಟ್ ಐಷಾರಾಮಿ ರೈಲು ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಗೋಲ್ಡನ್ ಚಾರಿಯೇಟ್ ರೈಲು ಸೇವೆಗಳು 2018 ರಿಂದ ತಾತ್ಕಾಲಿಕ ಸ್ಥಗಿತಗೊಂಡಿತ್ತು, ಈಗ ಮರುಚಾಲನೆಗೊಂಡಿದೆ.
ರೈಲಿನ ಮಾಲೀಕತ್ವವನ್ನು 50% ಭಾರತೀಯ ರೈಲ್ವೇ, 25% ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ ಹಾಗೂ ರಾಜ್ಯ ಸರ್ಕಾರದ ಕೆಎಸ್‌ಟಿಡಿಸಿ 25% ರಷ್ಟು ಷೇರುಗಳನ್ನು ಹೊಂದಿದೆ.
ಕಲಾತ್ಮಕ ಒಳಾಂಗಣ
ರೈಲಿನ ಒಳಾಂಗಣ ಕಲಾತ್ಮಕವಾಗಿ ನಿರ್ಮಿಸಲಾಗಿದೆ, 18 ಬೋಗಿಗಳಿಗೆ ಕರ್ನಾಟಕವನ್ನು ಆಳಿದ ರಾಜವಂಶಸ್ಥರುಗಳಾದ ಕದಂಬ, ಹೊಯ್ಸಳ, ವಿಜಯನಗರ ಚಾಲುಕ್ಯರ ಹೆಸರನ್ನು ಇಡಲಾಗಿದೆ.
ಊಟ, ವಸತಿಗೆ ಐಷಾರಾಮಿ ವ್ಯವಸ್ಥೆ ಕಲ್ಪಿಸಲಾಗಿದೆ, ಗೋಲ್ಡನ್ ಚಾರಿಯೇಟ್ ಪ್ರವಾಸೋದ್ಯಮ ವಿಶ್ವದ ಪ್ರಸಿದ್ಧ ಪರಂಪರೆಯ ತಾಣಗಳ ಜೊತೆಗೆ ಪಶ್ಚಿಮ ಘಟ್ಟಗಳು, ಪ್ರಾಚೀನ ಕಡಲತೀರಗಳು, ಸಾಂಸ್ಕೃತಿಕ ತಾಣಗಳಿಗೆ ಪ್ರವಾಸಿಗರನ್ನು ಕರೆದೊಯ್ಯುತ್ತದೆ.
ಹೋಟೆಲ್‌ಗಳು, ಕುಶಲಕರ್ಮಿಗಳು, ಪ್ರವಾಸ ನಿರ್ವಾಹಕರಿಗೆ ಆದಾಯ ಕಲ್ಪಿಸಿದಂತಾಗಿದೆ, ವಿಶೇಷ ರೈಲು ಪ್ರವಾಸ ವಿಶ್ವದ ಏಳು ಅತ್ಯುತ್ತಮ ಐಷಾರಾಮಿ ರೈಲು ಪ್ರಯಾಣಗಳಲ್ಲಿ ಗುರುತಿಸಲಾಗಿದ್ದು, ಹಲವು ಪ್ರಶಸ್ತಿ ಪಡೆದುಕೊಂಡಿದೆ.

ಸುಸುಜ್ಜಿತ ಕ್ಯಾಬಿನ್‌ಗಳು
ರೈಲಿಗೆ 44 ಸುಸುಜ್ಜಿತ ಕ್ಯಾಬಿನ್‌ಗಳು, ಎನ್ ಸೂಟ್ ಸ್ನಾನ ಗೃಹ, ವೈಫೈ ಸಹ ಒಳಗೊಂಡಿದೆ, ರುಚಿ ಮತ್ತು ನಳಪಾಕ ಹೆಸರಿನ ಎರಡು ಹೋಟೆಲ್‌ಗಳು ಭಾರತೀಯ ಮತ್ತು ಅಂತರರಾಷ್ಟ್ರೀಯ ಪಾಕ ಪದ್ಧತಿ ಸೇವೆ ನೀಡುತ್ತದೆ, ಲಾಂಜ್ ಬಾರ್, ಫಿಟ್ನೆಸ್ ಸೆಂಟರ್ ಇತರೆ ಸೌಕರ್ಯವನ್ನೂ ಕಲ್ಪಿಸಲಾಗಿದೆ ಎಂದರು.
ಡಿಸೆಂಬರ್ 21 ರಿಂದ 26 ರವರೆಗೆ ಬೆಂಗಳೂರಿನಿಂದ ಆರಂಭಗೊಂಡು ಮೈಸೂರು, ಕಾಂಚೀಪುರಂ, ಮಹಾಬಲಿಪುರಂ, ತಂಜಾವೂರು, ಕೊಚ್ಚಿನ್, ಮರಾರಿಕುಲಂಗೆ ತೆರಳಿ ನಂತರ ಬೆಂಗಳೂರಿಗೆ ಹಿಂದಿರುಗಲಿದೆ.
ಜೂವೆಲ್ ಆಫ್ ಸೌತ್ ರೈಲು ಪ್ರವಾಸ ಐದು ದಿನಗಳದ್ದಾಗಿದ್ದು, ಒಬ್ಬರಿಗೆ 4,07,700 ರೂ. ವೆಚ್ಚವಾಗಲಿದೆ, ಪ್ರೈಡ್ ಆಫ್ ಕರ್ನಾಟಕ ಪ್ರವಾಸ 01-02-2025 ರಿಂದ 06-02-2025 ರವರೆಗೆ ಬೆಂಗಳೂರಿನಿಂದ ನಂಜನಗೂಡು, ಮೈಸೂರು, ಹಳೇಬೀಡು, ಚಿಕ್ಕಮಗಳೂರು, ಹೊಸಪೇಟೆ, ಗೋವಾ ಬೆಂಗಳೂರು ಒಳಗೊಂಡಿದ್ದು, ವೆಚ್ಚ 2,71,800 ರೂ. ಸೋಜರ್ನ್ ಆಫ್ ಸೌತ್ ಚಾರ್ಟರ್ಡ್ ಪ್ರವಾಸ 29-12-2024 ರಿಂದ 12-02-2025 ರವರೆಗೆ ಆಯೋಜಿಸಲಾಗಿದೆ.
ದಕ್ಷಿಣ ಭಾರತದ ಪ್ರವಾಸೋದ್ಯಮವನ್ನು ಜಾಗತಿಕವಾಗಿ ಗುರುತಿಸಲು ಈ ಪ್ರವಾಸ ಹೆಚ್ಚು ಸಹಕಾರಿಯಾಗಿದೆ,2029ರ ವೇಳೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಿಸಲು ಭಾರತದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ೩ನೇ ಸ್ಥಾನ ಪಡೆಯುವ ಗುರಿ ಸಹ ಹೊಂದಿದೆ, ಪ್ರವಾಸಿ ತಾಣದ ಮಹತ್ವ ಅರಿಯಲು ಸಹಕಾರಿಯಾಗಿದೆ ಎಂದರು.