ಹುಬ್ಬಳ್ಳಿ:ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಶಾಸಕ ಸಿ.ಟಿ.ರವಿ ಅಶ್ಲೀಲ ಪದ ಬಳಿಕೆ ಮಾಡಿದ್ದಾರೆ ಎಂಬ ಆರೋಪ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ.
ಅಶ್ಲೀಲ ಪದ ಬಳಕೆ ಆರೋಪದ ಜೊತೆಗೆ, ವಿಧಾನ ಪರಿಷತ್ ಆವರಣದಲ್ಲೇ ತಮ್ಮ ಕೊಲೆಗೆ ಪ್ರಯತ್ನ ನಡೆದಿತ್ತು ಎಂಬ ರವಿ ಅವರು ನೀಡಿರುವ ದೂರಿನ ಬಗ್ಗೆಯೂ ತನಿಖೆ ಆಗಲಿದೆ.
ಸಭಾಪತಿ ರೂಲಿಂಗ್
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ರವಿ ಅವರು ಸಚಿವೆ ವಿರುದ್ಧ ಅಶ್ಲೀಲ ಪದ ಬಳಸಿದ್ದಾರೆ ಎಂಬ ವಿಷಯದ ಮೇಲೆ ಈಗಾಗಲೇ ರೂಲಿಂಗ್ ನೀಡಲಾಗಿದೆ, ಪೋಲಿಸ್‌ನವರು, ಪರಿಷತ್ ಅಂಗಳಕ್ಕೆ ಪ್ರವೇಶ ಮಾಡಿದ್ದಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮಾಹಿತಿ ನೀಡಿದ್ದೇನೆ ಎಂದು ವಿಷಯಕ್ಕೆ ತರೆ ಎಳೆದಿದ್ದರು.
ಸಭಾಪತಿ ಅವರ ನಿರ್ಧಾರ ಪ್ರಕಟವಾಗುತ್ತಿದ್ದಂತೆ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿ ಮೂರು ತಿಂಗಳೊಳಗಾಗಿ ತನಿಖಾ ವರದಿ ನೀಡುವಂತೆ ಸೂಚಿಸಿದೆ.
ಹಲವು ವ್ಯಾಖ್ಯಾನ
ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವರ ವಿರುದ್ಧ ರವಿ ಅವರು ಬಳಸಿದ ಪದಕ್ಕೆ ಸಂಬಂಧಿಸಿದಂತೆ ಹಲವು ವ್ಯಾಖ್ಯಾನಗಳು ಕೇಳಿಬರುತ್ತಿವೆ, ಇಬ್ಬರೂ ಒಬ್ಬರ ಮೇಲೊಬ್ಬರು ಆರೋಪ ಮಾಡಿದ್ದಾರೆ, ಠಾಣೆಯಲ್ಲಿ ದೂರು ದಾಖಲಾಗಿದೆ, ಹೀಗಾಗಿ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಸರ್ಕಾರ ತನಿಖೆಗೆ ಆದೇಶಿಸಿದೆ ಎಂದರು.
ಲಕ್ಷ್ಮೀ ಹೆಬ್ಬಾಳ್ಕರ್ ಅವರು ನಿನ್ನೆ ಪತ್ರಿಕಾಗೋಷ್ಠಿ ನಡೆಸಿ, ರವಿ ಅವರಿಗೆ ಶಿಕ್ಷೆ ಆಗುವವರೆಗೂ ತಾವು ವಿಶ್ರಮಿಸುವುದಿಲ್ಲ, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಭಾಪತಿ ಅವರನ್ನು ಕೋರುವುದಾಗಿ ತಿಳಿಸಿದ್ದರು.
ಇದರ ನಡುವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು, ತಮ್ಮ ಹತ್ಯೆಗೆ ಸಂಚು ರೂಪಿಸಿದ್ದರು ಮತ್ತು ಹಲ್ಲೆ ನಡೆಸಿದ್ದಾರೆಂದು ರವಿ ಅವರು ನೀಡಿದ ದೂರು ದಾಖಲುಗೊಂಡಿದೆ.
ಅಶ್ಲೀಲ ಪದ ಬಳಸಿದ ಆರೋಪದ ದಿನವೇ ರವಿ ಅವರನ್ನು ಬೆಳಗಾವಿ ಪೋಲಿಸರು ಬಂಧಿಸಿದ್ದರು, ಮರುದಿನವೇ ಹೈಕೋರ್ಟ್ ಜಾಮೀನು ನೀಡಿ ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿತ್ತು.