ಬೆಂಗಳೂರು:ರಾಜ್ಯ ಕಾಂಗ್ರೆಸ್ ಸರ್ಕಾರ ಲಂಚಮಯವಾಗಿದ್ದು, ಹಿಮಾಚಲಪ್ರದೇಶ, ಕೇರಳದಂತೆ ದಿವಾಳಿಯತ್ತ ಸಾಗುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ 60 ಪರ್ಸೆಂಟ್ ಕಮಿಷನ್ ಸರ್ಕಾರ ಎಂದಿದ್ದಾರೆ, ಮೊದಲು 40 ಪರ್ಸೆಂಟ್ ಇದ್ದ ಕಮಿಷನ್ ಈಗ 60 ಪರ್ಸೆಂಟ್ ಆಗಿದೆ, ಮುಂದೆ 65 ಪರ್ಸೆಂಟ್‌ಗೆ ಏರಿಸಲು ಮಂತ್ರಿಮಂಡದಲ್ಲಿ ಚರ್ಚೆ ಆಗುತ್ತಿದೆ ಎಂದರು.
40×60 ನಿವೇಶನದಲ್ಲಿ ಮನೆ ಕಟ್ಟಲು 20 ಲಕ್ಷ ರೂ. ಲಂಚ ಕೊಡಬೇಕು, ಕಳೆದ 6 ತಿಂಗಳಿನಿಂದ ಕಾಂಗ್ರೆಸ್ ಸರ್ಕಾರದಲ್ಲಿ 60 ಪರ್ಸೆಂಟ್ ಕಮಿಷನ್ ಇದೆ, ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಎಂಬುದಾಗಿ ಆರೋಪಿಸಿದ್ದ ಗುತ್ತಿಗೆದಾರರಿಂದಲೇ 40 ಪರ್ಸೆಂಟ್‌ಗಿಂತ ಹೆಚ್ಚು ಕಮಿಷನ್ ಕೀಳುತ್ತಿದ್ದಾರೆ.
ಕಮಿಷನ್ ಸರ್ಕಾರ
ಕಮಿಷನ್‌ಗಾಗಿ ಕಾಂಗ್ರೆಸ್ ಸರ್ಕಾರ ಇಡೀ ರಾಜ್ಯವನ್ನು ಕತ್ತಲೆಗೆ ದೂಡುತ್ತಿದೆ, ಹಿಟ್ನಾಳ್ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಎಂದಿದ್ದರು, ಓಟ್ ಹಾಕುವಾಗಲೂ ಅಡ್ಜಸ್ಟ್ ಮಾಡ್ಕೊಳ್ಳಿ ಅಂತ ಹೇಳಬೇಕಿತ್ತು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಪಾಪರ್ ಮಾಡಿ ಬಿಡ್ತೀರಿ ನೀವು’ ಎಂದು ಕಾಂಗ್ರೆಸ್‌ನವರಿಗೆ ಹೇಳಿದ್ದಾರೆ, ಅಭಿವೃದ್ಧಿ ಕುಂಠಿತ ಆಗಿದೆ ಎಂಬುದಾಗಿ ರಾಜು ಕಾಗೆ ಸೇರಿದಂತೆ ಕಾಂಗ್ರೆಸ್ ಶಾಸಕರೇ ದಿನನಿತ್ಯ ಕೂಗಾಡುತ್ತಿದ್ದಾರೆ, ಕಾಂಗ್ರೆಸ್‌ನವರು ಮಾತ್ರ ಅಭಿವೃದ್ಧಿ ಆಗುತ್ತಿದ್ದಾರೆ ಎಂದರು.
ಕಮಿಷನ್ ಪ್ರಮಾಣವನ್ನು ಮುಂದಿನ ದಿನಗಳಲ್ಲಿ ಶೇ.5ರಷ್ಟು ಹೆಚ್ಚಿಸಲು ಕಾಂಗ್ರೆಸ್ ಮುಂದಾಗಿದೆ, ಗುತ್ತಿಗೆದಾರರು ಆತ್ಮಹತ್ಯೆಗೆ ಅರ್ಜಿ ಹಾಕಿಕೊಳ್ಳುವ ಕಾಲ ಬಂದಿದೆ.
ದಾಖಲೆ ಇದೆಯಾ
ರಾಜ್ಯಪಾಲರಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ, ಕಮಿಷನ್ ಕೇಳಿರುವುದಕ್ಕೆ ದಾಖಲೆ ಇದೆಯಾ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳುತ್ತಾರೆ, ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಆರೋಪ ಮಾಡಿದ್ದಾಗ ದಾಖಲೆ ಕೊಟ್ಟಿದ್ದಿರಾ, ಇದ್ಯಾವ ನ್ಯಾಯ, ಇದು 60 ಪರ್ಸೆಂಟ್ ಲೂಟಿ ಸರ್ಕಾರ ಎಂಬ ಕುಮಾರಸ್ವಾಮಿ ಹೇಳಿಕೆ ಸಮರ್ಥಿಸುತ್ತೇನೆ ಎಂದರು.
ಬಜೆಟ್‌ನಲ್ಲಿ ಸಿದ್ದರಾಮಯ್ಯ ಮೋಸ ಮಾಡಿದ್ದಾರೆ, ಬಿಜೆಪಿಗಿಂತ ಹೆಚ್ಚು ಅಭಿವೃದ್ಧಿ ಮಾಡಿದ್ದೇವೆ, ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಹೆಚ್ಚು ಅನುದಾನ ಕೊಟ್ಟಿರುವುದಾಗಿ ಹೇಳಿಕೊಂಡಿದ್ದಾರೆ, ಆದರೆ, ಗಂಗಾ ಕಲ್ಯಾಣ ಯೋಜನೆಗೆ ಬಿಜೆಪಿ 60 ಕೋಟಿ ರೂ. ಕೊಟ್ಟಿತ್ತು, ಈಗ ಮೀಸಲಿಟ್ಟಿರುವುದು ಕೇವಲ 40 ಕೋಟಿ ರೂ. ಮಾತ್ರ.
ಡಾ.ಬಿ.ಆರ್.ಅಂಬೇಡ್ಕರ್ ಸ್ವಯಂ ಉದ್ಯೋಗ ಯೋಜನೆಗೆ ಬಿಜೆಪಿ ಸರ್ಕಾರ 100 ಕೋಟಿ ರೂ. ಮೀಸಲಿಟ್ಟಿತ್ತು, ಕಾಂಗ್ರೆಸ್ 45 ಕೋಟಿ ರೂ.ಗೆ ಇಳಿಸಿದೆ, ಆದಿಜಾಂಬವ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ 100 ಕೋಟಿ ರೂ. ಕೊಟ್ಟರೆ, ಸಿದ್ದರಾಮಯ್ಯ 40 ಕೋಟಿ ರೂ. ನೀಡಿರುವುದು ದಲಿತರ ಮೇಲಿನ ಪ್ರೀತಿಯೇ, ಕಾಳಜಿಯೇ ಎಂದು ಪ್ರಶ್ನಿಸಿದರು.
ವಿಶ್ವಕರ್ಮ ಸಮುದಾಯಕ್ಕೆ ಕೇವಲ 13 ಕೋಟಿ ರೂ.
ದೇವರಾಜು ಅರಸು ಅಭಿವೃದ್ಧಿ ನಿಗಮಕ್ಕೆ ಬಿಜೆಪಿ ಸರ್ಕಾರ 190 ಕೋಟಿ ರೂ. ಕೊಟ್ಟರೆ, ಕಾಂಗ್ರೆಸ್ ಸರ್ಕಾರ ಕೊಟ್ಟಿರುವುದು 100 ಕೋಟಿ ರೂ. ಮಾತ್ರ, ವಿಶ್ವಕರ್ಮ ಸಮುದಾಯಕ್ಕೆ ಕೇವಲ 13 ಕೋಟಿ ರೂ. ನೀಡಿದ್ದು, ಸಂಗೊಳ್ಳಿರಾಯಣ್ಣ ಕ್ಷೇತ್ರ ಅಭಿವೃದ್ಧಿಗೆ 50 ಕೋಟಿ ರೂ. ಕೊಟ್ಟಿದ್ದಾರೆ.
ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ 15 ಕೋಟಿ ರೂ. ನೀಡಿದರೆ, ಕಾಂಗ್ರೆಸ್ ಸರ್ಕಾರ 5 ಕೋಟಿ ರೂ. ನೀಡಿದೆ, ವೀರಶೈವ ನಿಗಮಕ್ಕೆ 100 ಕೋಟಿ ರೂ. ಕೊಟ್ಟಿದ್ದೆವು, ಇವರು 50 ಕೋಟಿ ರೂ. ಕೊಟ್ಟಿದ್ದಾರೆ, ದೇವಾಲಯ ಹಾಗೂ ಇತರೆ ಧಾರ್ಮಿಕ ಸಂಸ್ಥೆಗಳಿಗೆ 274.68 ಕೋಟಿ ರೂ. ಕೊಟ್ಟಿದ್ದೆವು, ಕಾಂಗ್ರೆಸ್‌ನವರು 90 ಪರ್ಸೆಂಟ್ ಡಿಸ್ಕೌಂಟ್ ಮಾಡಿ, 17 ಕೋಟಿ ರೂ. ಕೊಟ್ಟಿದ್ದಾರೆ.
ಮಠ, ದೇವಾಲಯಗಳಿಗೆ, ಮುಖ್ಯಮಂತ್ರಿಗಳ ಸಹಾಯಧನಕ್ಕೆ ಬಿಜೆಪಿ ಅವಧಿಯಲ್ಲಿ 154.85 ಕೋಟಿ ರೂ. ನೀಡಿದ್ದರೆ, ಕಾಂಗ್ರೆಸ್ ಸರ್ಕಾರ 30 ಕೋಟಿ ರೂ. ಕೊಟ್ಟಿದೆ.
ಭೂಮಿಗೆಲ್ಲ ಕನ್ನ
ಕಬರ್‌ಸ್ತಾನ್ ಅಂತ ಇರೋಬರೋ ಭೂಮಿಗೆಲ್ಲ ಕನ್ನ ಹಾಕಿದ್ದಾರೆ, ಸಿದ್ದರಾಮಯ್ಯ ಹಿಂದೂಗಳಿಗೆ ಎಷ್ಟು ಕೊಟ್ಟಿದ್ದಾರೆ ಎಂಬುದನ್ನು ಗಮನಿಸಿದರೆ, ಹಿಂದೂ ರುದ್ರಭೂಮಿಗೆ 10 ಕೋಟಿ ರೂ. ಕೊಟ್ಟಿದ್ದಾರೆ, ಬಿಜೆಪಿ 15 ಕೋಟಿ ರೂ. ಕೊಟ್ಟಿತ್ತು.
ರೋಟಿ, ಕಪಡಾ, ಮಕಾನ್ ನೇಕಾರ್ ಯೋಜನೆಗೆ 125.77 ಕೋಟಿ ರೂ. ಬಿಜೆಪಿ ಕೊಟ್ಟಿದೆ, ಕಾಂಗ್ರೆಸ್ ಕೇವಲ 10 ಕೋಟಿ ರೂ. ಮಾತ್ರ ಕೊಟ್ಟಿದೆ ಎಂದು ಅಂಕಿ-ಅಂಶ ನೀಡಿದರು.