ಬೆಂಗಳೂರು:ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿಯೊಂದಕ್ಕೆ ರೇಟ್‌ಕಾರ್ಡ್ ಫಿಕ್ಸ್ ಆಗಿದೆ, ಕಂದಾಯ ಇಲಾಖೆಯಲ್ಲಿ ಎಲ್ಲಾ ಪೋಸ್ಟ್‌ಗಳಿಗೂ ರೇಟ್ ನಿಗದಿ ಮಾಡಲಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಮಾಡಿರುವ 60% ಕಮೀಷನ್ ಆರೋಪಕ್ಕೆ
ದಾಖಲೆ ಕೇಳುವವರು, ಪರ್ಸಂಟೇಜ್ ಆರೋಪ ಮಾಡಿರುವ ಕಾಂಗ್ರೆಸ್ ಮುಖಂಡರು, ಗುತ್ತಿಗೆದಾರರನ್ನೇ ಕೇಳಲಿ, ಪರ್ಸಂಟೇಜ್ ಇಲ್ಲವೆಂದಾದರೆ, ಆರೋಪ ಏಕೆ ಮಾಡುತ್ತಿದ್ದರು, ಅವರನ್ನೇ ಕೇಳಿ ದಾಖಲೆ ಪಡೆದುಕೊಳ್ಳಲಿ ಎಂದರು.
’ಪೇ ಸಿಎಂ’ ಪೋಸ್ಟರ್ ಅಂಟಿಸಲು ಹೋಗಿದ್ದ ಮಹಾನ್ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಾವ ದಾಖಲೆ ಕೊಟ್ಟಿದ್ದಾರೆ, ’ಕೆಂಪಣ್ಣ ಹೇಳಿದರು.., ಕೆಂಪಣ್ಣ ಹೇಳಿದರು..,’ ಎಂಬುದಾಗಿ ಜನರ ಮುಂದೆ ಹೇಳುತ್ತಾರೆ, ಕೆಂಪಣ್ಣ ಅವರಿಂದಲೇ ದಾಖಲೆ ಕೇಳಬಹುದಿತ್ತಲ್ಲವೇ.
ಸರ್ಕಾರ ಈ ಆಟ ಬಿಡಬೇಕು
ಸರ್ಕಾರದ ವಿರುದ್ಧ ಕಂಟ್ರಾಕ್ಟರ್‌ಗಳೇ 60% ವಸೂಲಿ ಆರೋಪ ಮಾಡಿದ್ದಾರೆ, ಇದಕ್ಕಿಂತ ಸಾಕ್ಷಿ ಬೇಕಾ, ಸರ್ಕಾರ ಈ ಆಟ ಬಿಡಬೇಕು.
ಮಗ ಸೋತಿರುವುದಕ್ಕೆ ಹತಾಶರಾಗಿ ಕುಮಾರಸ್ವಾಮಿ 60% ಆರೋಪ ಮಾಡುತ್ತಿದ್ದಾರೆ ಎಂಬುದಾಗಿ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ, ಮಗ ಸೋತಿರುವುದಕ್ಕೆ ಹತಾಶನಾಗಿದ್ದೇನೋ, ಇಲ್ಲವೋ ಎಂಬುದು ಇರಲಿ, ಅದನ್ನು ಬಿಟ್ಟು, ಮೊದಲು ೬೦% ಕಮೀಷನ್‌ಗೆ ಉತ್ತರಿಸಲಿ.
ಕಂದಾಯ ಇಲಾಖೆ ಸತ್ಯ ಮಾರ್ಗದಲ್ಲಿ ನಡೆಯುತ್ತಿದೆಯಾ, ಬೆಂಗಳೂರು ಎಸಿ ಪೋಸ್ಟ್‌ಗೆ ಎಷ್ಟು ದುಡ್ಡು ತೆಗೆದುಕೊಳ್ಳುತ್ತಿದ್ದೀರಿ, ಎಷ್ಟು ರೇಟ್ ಫಿಕ್ಸ್ ಮಾಡಿಕೊಂಡಿದ್ದೀರಾ, ಆ ಹಣ ಯಾರ‍್ಯಾರಿಗೆ ಹೋಗುತ್ತದೆ, ಏನೇನು ದಂಧೆ ನಡೆಸುತ್ತಿದ್ದೀರಿ ಎನ್ನುವುದು ನಮಗೆ ಗೊತ್ತಿಲ್ಲವಾ.
ಸಹಿ ಮಾರಾಟಕ್ಕೆ ಇಟ್ಟಿಲ್ಲ
ನಾನು ಕೂಡ ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದೇನೆ, ನಾನು ಹರಿಶ್ಚಂದ್ರ ಎಂಬುದಾಗಿ ಎಲ್ಲೂ ಹೇಳಿಲ್ಲ, ವಿಧಾನಸಭೆಯಲ್ಲಿಯೇ ಈ ಮಾತು ಹೇಳಿದ್ದೇನೆ, ಚುನಾವಣೆ ನಡೆಸಬೇಕಾದರೆ ಇನ್ನೊಬ್ಬರ ಹತ್ತಿರ ಕೈ ಚಾಚಲೇಬೇಕು, ಆದರೆ, ನಾನು ಅಧಿಕಾರ ನಡೆಸುವಾಗ ನನ್ನ ಸಹಿಯನ್ನು ಮಾರಾಟಕ್ಕೆ ಇಟ್ಟಿರಲಿಲ್ಲ, ಈ ಸರ್ಕಾರದಲ್ಲಿ ಪ್ರತೀ ಕ್ಷಣವೂ ಮಾರಾಟ ನಡೆಯುತ್ತಿದೆ.
ಸರ್ಕಾರ ಪ್ರತಿಯೊಂದಕ್ಕೂ ಸಹಿ ಮಾರಾಟಕ್ಕಿಟ್ಟಿದೆ, ಪ್ರತಿಯೊಂದಕ್ಕೂ ಲೂಟಿ ಹೊಡೆದುಕೊಂಡು ಕೂತಿದ್ದಾರೆ, ರೇಟ್ ಕಾರ್ಡ್ ಫಿಕ್ಸ್ ಆಗಿದೆ ಎಂದು ನಾನು ಮೊದಲೇ ಹೇಳಿದ್ದೆ.
ಇಂದಿನ ರಾಜಕಾರಣಕ್ಕೆ ದುಡ್ಡು ಬೇಕು, ಪ್ರೀತಿ-ವಿಶ್ವಾಸದಿಂದ ನಾವು ಕೆಲಸ ಮಾಡಿದಾಗ ಚುನಾವಣೆ ಸಮಯದಲ್ಲಿ ಯಾರೋ ನಾಲ್ವರು ಸಹಾಯ ಮಾಡುತ್ತಾರೆ.
ಕ್ಯಾಬಿನೆಟ್ ಇರುವುದು ಏತಕ್ಕೆ
ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಶಿಷ್ಯವೇತನ ಕುರಿತು ದಲಿತ ಶಾಸಕರ ಡಿನ್ನರ್ ಪಾರ್ಟಿಯಲ್ಲಿ ಚರ್ಚೆ ಮಾಡುತ್ತಿದ್ದೇವೆ ಎಂಬುದಾಗಿ ಕೆಲವರು ಹೇಳಿದ್ದಾರೆ, ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆಯಬೇಕಾ ಅಥವಾ ಡಿನ್ನರ್ ಪಾರ್ಟಿಯಲ್ಲಿ ನಡೆಯಬೇಕಾ, ಕ್ಯಾಬಿನೆಟ್ ಇರುವುದು ಏತಕ್ಕೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಗಾದಿ ಫೈಟ್ ಆ ಪಕ್ಷದ ವಿಚಾರ, ಅವರು ಚರ್ಚೆ ಮಾಡಿಕೊಳ್ಳಲಿ ಬಿಡಿ ಎಂದರು.
ವೈಕುಂಠ ಏಕಾದಶಿಯಂದು ವೈಕುಂಠದ ಬಾಗಿಲು ತೆರೆಯುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ, ದೇವರಲ್ಲಿ ಪ್ರಾರ್ಥನೆ ಮಾಡಿ, ಎಲ್ಲರಿಗೂ ಒಳ್ಳೆಯದು ಮಾಡು ತಂದೆ ಎಂದು ಬೇಡಿಕೊಂಡೆ ಎಂದರು.