ಬೆಂಗಳೂರು:ಕಾಂಗ್ರೆಸ್ಸಿಗರ ಮಿಡ್‌ನೈಟ್ ಮೀಟಿಂಗ್ ನಡುವೆ ಕರ್ನಾಟಕ ಬಡವಾಗುತ್ತಿದೆ, ಜನರು ಪರಿತಪಿಸುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷದ ಕಾನೂನು ಪ್ರಕೋಷ್ಠದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಗಿನಿಂದ ಬಂದವರು ಎಂಬುದು ಆಡಳಿತ ಪಕ್ಷದಲ್ಲಿನ ಕೆಲವರಿಗೆ ಅನಿಸಿದೆ, ಒಮ್ಮೆ 5 ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ಮಾಡಿ, ಎರಡನೇ ಬಾರಿಗೆ 2 ವರ್ಷ ಪೂರೈಸಿದ್ದು, ಅಧಿಕಾರ ಬಿಟ್ಟುಕೊಡಬೇಕೆಂಬ ಚರ್ಚೆ ಕಾಂಗ್ರೆಸ್ಸಿನಲ್ಲಿ ಆರಂಭವಾಗಿದೆ ಎಂದರು.
ಅಧಿಕಾರ ಒದ್ದು ಕಿತ್ಕೋಬೇಕು
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಹಳ ಮುಕ್ತವಾಗಿ ಮಾತನಾಡಿ, 25 ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿ ತಮ್ಮನ್ನು ಮಂತ್ರಿಮಂಡಲಕ್ಕೆ ತೆಗೆದುಕೊಂಡಿರಲಿಲ್ಲ, ಆಗ ತಮ್ಮ ಗುರುಗಳು ‘ಅಧಿಕಾರ ಸಿಗಲಿಲ್ಲ ಅಂದ್ರೆ ಅಧಿಕಾರವನ್ನು ಒದ್ದು ಕಿತ್ಕೋಬೇಕು’ ಎಂದಿದ್ದನ್ನು ತಿಳಿಸಿದ್ದರು.
ಅಧಿಕಾರವನ್ನು ಒದ್ದು ಕಿತ್ಕೊಳ್ಳುವಲ್ಲಿ ಯಶಸ್ವಿಯೂ ಆಗಿದ್ದರು, 25 ವರ್ಷಗಳ ನಂತರ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡುವರೋ ಇಲ್ಲವೋ ಎಂಬ ಅನುಮಾನ ಅವರನ್ನು ಕಾಡುತ್ತಿದೆ, ಈ ಹಿನ್ನೆಲೆಯಲ್ಲಿಯೇ ಅಧಿಕಾರವನ್ನು ಒದ್ದು ಕಿತ್ತುಕೊಳ್ಳುವ ವಿಷಯ ನೆನಪು ಮಾಡಿಕೊಂಡಿದ್ದಾರೆ.
ಶಿವಕುಮಾರ್ ಹಠವಾದಿ, ಒದ್ದು ಕಿತ್ಕೊಳ್ಳುವ ವಿಷಯದಲ್ಲಿ ನಿಸ್ಸೀಮರು, ಆ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ, ಒಂದು ಕಡೆ ಸಿದ್ದರಾಮಯ್ಯ ಅವರಿಗೆ ಅಧಿಕಾರ ಬಿಟ್ಟು ಕೊಡಲು ಮನಸ್ಸು ಬರುತ್ತಿಲ್ಲ, ಸಚಿವರ ನೇತೃತ್ವದಲ್ಲಿ ಶಿವಕುಮಾರ್ ಇಲ್ಲದ ವೇಳೆ ಡಿನ್ನರ್ ಮೀಟಿಂಗ್ ಪ್ರಾರಂಭಿಸಿದ್ದಾರೆ.
ಸದ್ಯದ ರಾಜಕೀಯ ಪರಿಸ್ಥಿತಿ
ಇನ್ನೊಂದೆಡೆ ಶಿವಕುಮಾರ್ ಲೇಟ್‌ನೈಟ್ ಮೀಟಿಂಗ್ ಶುರು ಮಾಡಿದ್ದಾರೆ, ಇದು ರಾಜ್ಯದಲ್ಲಿನ ಸದ್ಯದ ರಾಜಕೀಯ ಪರಿಸ್ಥಿತಿ.
ಆಡಳಿತ ಪಕ್ಷ ಕಾಂಗ್ರೆಸ್‌ನ ಸರಣಿ ಸಭೆಗಳು, ಆಡಳಿತ ಶಾಸಕರ ಡಿನ್ನರ್ ಮೀಟಿಂಗ್, ಮಿಡ್‌ನೈಟ್ ಮೀಟಿಂಗ್‌ಗಳ ವಿಚಾರ ಮಾಧ್ಯಮಗಳಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ.
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಹೈಕಮಾಂಡ್ ಮಟ್ಟದಲ್ಲಿ ಅಧಿಕಾರದ ಒಪ್ಪಂದ ಸೂತ್ರ ಏರ್ಪಟ್ಟಿದೆ, ಅಭಿವೃದ್ಧಿ ಬಗ್ಗೆ ಒಪ್ಪಂದವಾಗಿಲ್ಲ, ಆದರೆ, ಅಧಿಕಾರ ಹಂಚಿಕೆ ಕುರಿತು ಒಪ್ಪಂದವಾದಂತಿದೆ ಎಂದು ವ್ಯಂಗ್ಯವಾಡಿದರು.
ಹಿಂದೆ ಟೆಸ್ಟ್ ಮ್ಯಾಚ್ ನೋಡುತ್ತಿದ್ದಿರಿ, ಬಳಿಕ ಏಕದಿನ ಪಂದ್ಯ ಬಂತು, ನಂತರ ಟಿ-20 ಮ್ಯಾಚ್‌ಗಳು ಜನಪ್ರಿಯವಾದವು.
ಅಧಿಕಾರ ಹಂಚಿಕೆ ಕಿತ್ತಾಟ
ರಾಜ್ಯದ ಜನ ಆಶೀರ್ವಾದ ಮಾಡಿ, ಸ್ಪಷ್ಟ ಬಹುಮತ ಕೊಟ್ಟರೆ, ಇವರಿಗೆ ಪರಸ್ಪರ ಅಧಿಕಾರ ಹಂಚಿಕೆ ಕಿತ್ತಾಟ ಮುಖ್ಯವಾಗಿದೆಯೇ ಹೊರತು, ರಾಜ್ಯದ ಅಭಿವೃದ್ಧಿ ವಿಚಾರ ಪ್ರಮುಖವಾಗಿಲ್ಲ.
ಆಡಳಿತದ ಬೇಜವಾಬ್ದಾರಿಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು, ನವಜಾತ ಶಿಶುಗಳ ಸರಣಿ ಸಾವು ಸಂಭವಿಸುತ್ತಿದೆ, ಭ್ರಷ್ಟಾಚಾರ ಮಿತಿ ಮೀರಿದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದು 2 ವರ್ಷ ಕಳೆದರೂ ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ನೋಡಲು ಸಾಧ್ಯವಾಗದ ಸ್ಥಿತಿ ಇದೆ.
ಚುನಾವಣೆ ಹೊರತುಪಡಿಸಿ ಬೇರೆ ದಿನಗಳಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ರಾಜ್ಯ ಪ್ರವಾಸ ಮಾಡುತ್ತಿಲ್ಲ, ಅವರುಗಳ ಪ್ರವಾಸ ಕೇವಲ ಬೆಂಗಳೂರಿಗೆ ಸೀಮಿತವಾಗಿದೆ.
ಆನೆ ನಡೆದಿದ್ದೇ ದಾರಿ
ರಾಜ್ಯ ಹಾಗೂ ಬೆಂಗಳೂರು ಮಹಾನಗರದಲ್ಲಿ ರಸ್ತೆಗುಂಡಿ ಮುಚ್ಚಿಸುವ ಕೆಲಸವೂ ಆಗುತ್ತಿಲ್ಲ, ಬೆಂಗಳೂರಿನಲ್ಲಿ 50 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಅಂಡರ್‌ಗ್ರೌಂಡ್ ಟನಲ್ ಮಾಡಲು ಶಿವಕುಮಾರ್ ಹೊರಟಿದ್ದಾರೆ, ಈ ಕುರಿತು ಯಾರ ಜೊತೆಗೂ ಚರ್ಚೆ ಮಾಡಿಲ್ಲ, ಆನೆ ನಡೆದಿದ್ದೇ ದಾರಿ ಎಂಬಂತೆ ಮನ ಬಂದಂತೆ ಸರ್ಕಾರ ನಡೆಸುತ್ತಿದ್ದಾರೆ.
ಕಾಂಗ್ರೆಸ್‌ನವರಿಗೆ ಅಧಿಕಾರ ಮದ, ದರ್ಪ ಹೆಚ್ಚಾಗಿದೆ, ಯಾರೂ ಸರ್ಕಾರವನ್ನು ಟೀಕಿಸಬಾರದೆಂಬ ಧೋರಣೆ ಇವರದು, ವಿರೋಧಪಕ್ಷದವರನ್ನು ಬೆದರಿಸುತ್ತಿದ್ದು, ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಎನ್ನಲು ಸಾಧ್ಯವೇ.
ಹಿಂದೂ ವಿರೋಧಿ ನೀತಿ ವಿರುದ್ಧ ಧ್ವನಿ ಎತ್ತಿದ ಕಾರ್ಯಕರ್ತರ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸುತ್ತಿದ್ದಾರೆ, ಪೊಲೀಸ್ ಕೇಸ್ ಹಾಕಿ, ಬೆದರಿಕೆ ಒಡ್ಡಿ ದಬ್ಬಾಳಿಕೆ ಮಾಡಲಾಗುತ್ತಿದೆ, ಇದೇ ಆಡಳಿತ ಪಕ್ಷದ ಘನಂದಾರಿ ಕೆಲಸ.
ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ರಕ್ಷಣೆ ಪಕ್ಷದ ಕಾನೂನು ಪ್ರಕೋಷ್ಠದ ಆದ್ಯ ಕರ್ತವ್ಯವಾಗಿದೆ ಎಂದರು.