ಕುರ್ಚಿ ಖಾಲಿ ಇಲ್ಲದಿರುವಾಗ ಹೊಸ ಮುಖ್ಯಮಂತ್ರಿಯನ್ನು ಎಲ್ಲಿ ಕೂರಿಸುತ್ತೀರಿ
ಬೆಂಗಳೂರು:ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕತ್ವ ಬದಲಾವಣೆ ಪ್ರಸ್ತಾಪವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂಬ ಮಾಧ್ಯಮಗಳ ವರದಿಗೆ ಕಿಡಿಕಾರಿದ ಸಿದ್ದರಾಮಯ್ಯ, ಕುರ್ಚಿಯೇ ಖಾಲಿ ಇಲ್ಲದಿರುವಾಗ ಹೊಸ ಮುಖ್ಯಮಂತ್ರಿಯನ್ನು ಎಲ್ಲಿ ಕೂರಿಸುತ್ತೀರಿ ಎಂದು ಪ್ರಶ್ನಿಸಿದರು.
ಯಾವುದೇ ಭಿನ್ನಾಭಿಪ್ರಾಯಗಳಿಲ್ಲ
ಪಕ್ಷ ಮತ್ತು ಆಡಳಿತದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ನಾವು ಒಟ್ಟಾಗಿ ಹೋಗುತ್ತಿರುವುದನ್ನು ಸಹಿಸಲಾಗದೆ, ನೀವು ಇಂತಹ ಊಹಾಪೋಹಗಳನ್ನು ಹರಿಬಿಡುತ್ತಿದ್ದೀರಿ ಎಂದು ಸುದ್ದಿಗಾರರ ಮೇಲೆ ಹರಿಹಾಯ್ದರು.
ಊಹಾಪೋಹಗಳನ್ನು ಹರಡುವ ಬದಲು ಸತ್ಯವನ್ನು ಹೇಳಿ, ನಿಮ್ಮ ಟಿಆರ್‌ಪಿಗಾಗಿ ನಾಯಕತ್ವ ಬದಲಾವಣೆ ವಿಚಾರ ಮುಂದಿಡುತ್ತಿದ್ದೀರಿ ಎಂದು ಟೀಕಿಸಿದರು.
ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತದೆ, ಆದ್ದರಿಂದಲೇ ನಾವು ವಿಧಾನಸಭಾ ಚುನಾವಣೆಯಲ್ಲಿ ಜನತೆಗೆ ನೀಡಿದ ಭರವಸೆಗಳನ್ನು ಅಲ್ಪಾವಧಿಯಲ್ಲೇ ಅನುಷ್ಟಾನಗೊಳಿಸಿದ್ದೇವೆ.
ಬಿಜೆಪಿಗೆ ಸಹಿಸಲಾಗುತ್ತಿಲ್ಲ
ಇದು ಪ್ರತಿಪಕ್ಷ ಬಿಜೆಪಿಗೆ ಸಹಿಸಲಾಗುತ್ತಿಲ್ಲ, ಅವರ ಜೊತೆಗೆ ಮಾಧ್ಯಮದ ಒಂದು ವರ್ಗವೂ ಸೇರಿಕೊಂಡಿದೆ.
ನಮ್ಮ ಪಕ್ಷದ ಉಸ್ತುವಾರಿ ಸುರ್ಜೇವಾಲ, ಪಕ್ಷ ಸಂಘಟನೆ ಮತ್ತು ಬೆಳಗಾವಿ ಸಮಾವೇಶಕ್ಕೆ ಸಂಬಂಧಿಸಿದಂತೆ ಚರ್ಚೆಸಲು ಬಂದಿದ್ದಾರೆ.
ಭಾರತೀಯ ಸಂವಿಧಾನ, ಮಹಾತ್ಮ ಗಾಂಧಿ ಹಾಗೂ ಡಾ.ಅಂಬೇಡ್ಕರ್ ಅವರನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ನಿರಂತರವಾಗಿ ಅಪಮಾನಗೊಳಿಸುತ್ತಿರುವುದಕ್ಕೆ ಪ್ರತಿಯಾಗಿ ಸಂವಿಧಾನ ರಕ್ಷಣೆಗಾಗಿ ಕಾಂಗ್ರೆಸ್ ರಾಷ್ಟ್ರಾದ್ಯಂತ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಭೆಗಳನ್ನು ನಡೆಸುತ್ತಿದೆ ಎಂದರು.