ವರ್ಚಸ್ವೀ ನಾಯಕರ ನೇಮಕಕ್ಕೆ ಸತೀಶ್ ಜಾರಕಿಹೊಳಿ ಒತ್ತಾಯ
ಬೆಂಗಳೂರು:ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ಡಿ.ಕೆ.ಶಿವಕುಮಾರ್ ಅವರನ್ನು ಬದಲಾಯಿಸಿ, ಅವರ ಸ್ಥಾನಕ್ಕೆ ವರ್ಚಸ್ವೀ ನಾಯಕರೊಬ್ಬರನ್ನು ಪೂರ್ಣ ಪ್ರಮಾಣದ ಅಧ್ಯಕ್ಷರನ್ನಾಗಿ ನೇಮಿಸುವಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಿರುವುದಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಇಂದಿಲ್ಲಿ ತಿಳಿಸಿದ್ದಾರೆ.
ರಾಜ್ಯದ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ, ತಮ್ಮ ಅಭಿಪ್ರಾಯವನ್ನು ತಿಳಿಸಿದ್ದೇನೆ.
ಪಕ್ಷ ಸಂಘಟನೆ ದೃಷ್ಟಿಯಿಂದ ಪೂರ್ಣ ಪ್ರಮಾಣದ ಅಧ್ಯಕ್ಷರ ಅಗತ್ಯವಿದೆ, ನೀವು ಯಾರನ್ನಾದರೂ ಮಾಡಿ, ತಕ್ಷಣ ಮಾಡಿ, ನೀವು ತೆಗೆದುಕೊಳ್ಳುವ ನಿರ್ಧಾರವನ್ನು ನಮಗೆ ತಿಳಿಸಿ ಎಂದಿದ್ದೇನೆ.
ಹುದ್ದೆ ಆಕಾಂಕ್ಷಿ ಅಲ್ಲ
ನಾನು ಆ ಹುದ್ದೆಯ ಆಕಾಂಕ್ಷಿ ಅಲ್ಲ, ನಮಗೆ ಪಕ್ಷ ಸಂಘಟನೆ ಮುಖ್ಯ, ಶಿವಕುಮಾರ್ ಉಪಮಖ್ಯಮಂತ್ರಿಯಾಗಿ ಎರಡು-ಮೂರು ಅಧಿಕಾರ ಹುದ್ದೆಗಳನ್ನು ಇಟ್ಟುಕೊಂಡು ಪಕ್ಷದ ಹೊಣೆ ನಿಭಾಯಿಸುವುದು ಕಷ್ಟ.
ಪಕ್ಷದ ನಿಯಮಾವಳಿಯಂತೆ ಒಬ್ಬರಿಗೆ ಒಂದೇ ಹುದ್ದೆ, ಕರ್ನಾಟಕದಲ್ಲಿ ಸರ್ಕಾರ ರಚನೆ ಸಂದರ್ಭದಲ್ಲಿ, ನೀವು ಶಿವಕುಮಾರ್ ಅವರಿಗೆ ನೀಡಿದ ಭರವಸೆಯಂತೆ ಲೋಕಸಭೆ ಚುನಾವಣೆವರೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯುವಂತೆ ಸೂಚಿಸಿದ್ದಿರಿ.
ಚುನಾವಣೆ ಮುಗಿದು ಆರು ತಿಂಗಳು ಮುಗಿದಿದೆ, ಆದರೆ, ಬದಲಾವಣೆ ಆಗಿಲ್ಲ, ನನಗೆ ಅವರ ಬಗ್ಗೆ ವೈಯಕ್ತಿಕ ದ್ವೇಷವಿಲ್ಲ, ಬೇಕಾದರೆ ಅವರೇ ಮುಂದುವರೆಯಲಿ, ಆದರೆ, ಒಂದು ಸ್ಥಾನದಲ್ಲಿ ಮಾತ್ರ, ನೀವು ಈ ಬಗ್ಗೆ ನಮಗೆ ಸ್ಪಷ್ಟ ಸಂದೇಶ ನೀಡಬೇಕು ಎಂದು ತಿಳಿಸಿದ್ದೇನೆ.
ನನ್ನ ಅನಿಸಿಕೆಯೇ ಪಕ್ಷದ ಹಲವು ಮುಖಂಡರಲ್ಲಿದೆ, ವರಿಷ್ಠರು ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದಿದ್ದೇನೆ ಎಂದರು.