ಬೆಂಗಳೂರು:ಬೆಳಗಾವಿಯಲ್ಲಿ ನಡೆಯುತ್ತಿರುವ ಗಾಂಧಿ ಭಾರತ ಸ್ಮರಣಾರ್ಥ ’ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಅಭಿಯಾನದ ಸಲುವಾಗಿ ಏರ್ಪಡಿಸಿರುವ ಬೃಹತ್ ಕಾಂಗ್ರೆಸ್ ಸಮಾವೇಶದ ನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆ.
ಐತಿಹಾಸಿಕ ಸಮಾವೇಶದ ಪೂರ್ಣ ಉಸ್ತುವಾರಿ ವಹಿಸಿಕೊಂಡಿರುವ ಶಿವಕುಮಾರ್, ಕಳೆದ ಮೂರು ದಿನಗಳಿಂದ ಬೆಳಗಾವಿಯಲ್ಲೇ ಬಿಡಾರ ಹೂಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು, ಡಾ.ಅಂಬೇಡ್ಕರ್ ಕುರಿತು ನೀಡಿದ ಹೇಳಿಕೆ ನಂತರ ಕಾಂಗ್ರೆಸ್ ಈ ಐತಿಹಾಸಿಕ ಸಮಾವೇಶಕ್ಕೆ ’ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಎಂಬುದನ್ನು ಘೋಷವಾಕ್ಯವಾಗಿ ಬಳಸಿಕೊಳ್ಳುತ್ತಿದೆ.
ಸಾರ್ವಜನಿಕ ಸಮಾವೇಶ
ಈ ಕಾರ್ಯಕ್ರಮದ ಮೂಲಕ ರಾಷ್ಟ್ರದ ಗಮನ ಸೆಳೆಯಲು ಕಾಂಗ್ರೆಸ್ ಬೃಹತ್ ಸಾರ್ವಜನಿಕ ಸಮಾವೇಶ ಹಮ್ಮಿಕೊಂಡಿದೆ.
ಇದರ ಯಶಸ್ಸು ಕೆಪಿಸಿಸಿ ಅಧ್ಯಕ್ಷರ ಜವಾಬ್ದಾರಿಯಾಗಿದ್ದು, ಶಿವಕುಮಾರ್, ರಾಜಕೀಯ ಒತ್ತಡಗಳ ನಡುವೆಯೂ ಎಲ್ಲರನ್ನು ಒಗ್ಗೂಡಿಸಿಕೊಂಡು ಐತಿಹಾಸಿಕ ಸಮಾವೇಶ ನಡೆಸಲು ಮುಂದಾಗಿದ್ದಾರೆ.
ಸಮಾವೇಶದ ನಂತರ ಸರ್ಕಾರದ ಅಧಿಕಾರದಲ್ಲಿ ಮುಂದುವರೆದು, ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಇಂಗಿತವನ್ನು ಎಐಸಿಸಿ ಮುಖಂಡರಿಗೆ ಬೆಳಗಾವಿಯಲ್ಲೇ ತಿಳಿಸಲಿದ್ದಾರಂತೆ.
ಬೆಳಗಾವಿಗೆ ರಾಷ್ಟ್ರೀಯ ನಾಯಕರು
ಸಮಾವೇಶದಲ್ಲಿ ಪಾಲ್ಗೊಳ್ಳಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಅಧಿನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಪಕ್ಷದ ಎಲ್ಲಾ ರಾಷ್ಟ್ರೀಯ ನಾಯಕರು ನಾಳೆ ಬೆಳಗಾವಿಗೆ ಆಗಮಿಸಲಿದ್ದಾರೆ.
ಸಮಾವೇಶದ ನಂತರ ಶಿವಕುಮಾರ್ ತಮ್ಮ ರಾಜಕೀಯ ನಿರ್ಧಾರವನ್ನು ರಾಹುಲ್ ಗಾಂಧಿ ಮುಂದೆಯೇ ತಿಳಿಸಿ, ಪಕ್ಷದ ನಿರ್ಧಾರಕ್ಕೆ ಬಿಡಲಿದ್ದಾರಂತೆ.
ಪಕ್ಷದ ನಿಯಮಾವಳಿಯಂತೆ ಒಬ್ಬರು ಒಂದೇ ಹುದ್ದೆಯಲ್ಲಿ ಮುಂದುವರೆಯಬೇಕು, ಈ ಹಿನ್ನೆಲೆಯಲ್ಲಿ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಯಬೇಕೆಂದು ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೇರಿದ ಸಚಿವರು ಬಹಿರಂಗವಾಗೇ ಹೇಳಿಕೆ ನೀಡಿದ್ದರು.
ಬಹಿರಂಗ ಎಚ್ಚರಿಕೆ
ಇವರ ಹೇಳಿಕೆ ನಂತರ ಪಕ್ಷದಲ್ಲಿ ಭಾರೀ ಚರ್ಚೆಗೆ ಎಡೆ ಮಾಡಿ, ಎಐಸಿಸಿ ಅಧ್ಯಕ್ಷರೇ ಸಚಿವರುಗಳಿಗೆ ಬಾಯಿ ಮುಚ್ಚಿಕೊಂಡು ಕೊಟ್ಟಿರುವ ಕೆಲಸ ಮಾಡಿ ಎಂದು ಬಹಿರಂಗವಾಗೇ ಎಚ್ಚರಿಕೆ ನೀಡಬೇಕಾಯಿತು.
ಇದರ ಬೆನ್ನಲ್ಲೇ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಕೈಗೊಂಡಿದ್ದಾರೆ, ಆದರೆ, ಪಕ್ಷ ಇವರ ನಿರ್ಧಾರಕ್ಕೆ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಶಿವಕುಮಾರ್ ಮನವಿಯನ್ನು ಎಐಸಿಸಿ ಪುರಸ್ಕರಿಸಿದರೆ, ಆ ಸ್ಥಾನಕ್ಕೆ ವೀರಶೈವ ಸಮುದಾಯಕ್ಕೆ ಸೇರಿದ ಪಕ್ಷದ ಹಿರಿಯ ನಾಯಕ ಸಿ.ಎಸ್.ನಾಡಗೌಡ (ಅಪ್ಪಾಜಿಗೌಡ) ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತರುವ ಬಗ್ಗೆ ಭಾರೀ ಚರ್ಚೆ ನಡೆದಿದೆ.