ರಾಜಕೀಯ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ
ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಸಲಹೆಗಾರ ಸ್ಥಾನಕ್ಕೆ ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ರಾಜೀನಾಮೆ ನೀಡಿದ್ದಾರೆ.
ಮುಖ್ಯಮಂತ್ರಿ ಅವರಿಗೆ ಬರೆದಿರುವ ಮೂರು ಸಾಲಿನ ಪತ್ರದಲ್ಲಿ, ತಮ್ಮನ್ನು ಈ ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ಕೋರಿದ್ದಾರೆ.
ಸೂಕ್ತ ಸ್ಥಾನಮಾನ ನೀಡಿಲ್ಲ
ಪಕ್ಷದಲ್ಲಿ ಹಿರಿಯ ಸದಸ್ಯರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂಬ ಕೂಗು ಎದ್ದಾಗ, ಆರ್.ವಿ.ದೇಶಪಾಂಡೆ, ಬಸವರಾಜ ರಾಯರೆಡ್ಡಿ ಹಾಗೂ ಬಿ.ಆರ್.ಪಾಟೀಲ್ ಅವರುಗಳಿಗೆ, ತಮ್ಮ ಸಚಿವಾಲಯದಲ್ಲಿ ವಿವಿಧ ಹುದ್ದೆಗಳನ್ನು ಸೃಷ್ಟಿಸಿ ಸಲಹೆಗಾರರನ್ನಾಗಿ ಸಿದ್ದರಾಮಯ್ಯ ನೇಮಕ ಮಾಡಿದ್ದರು.
ನೇಮಕಗೊಂಡ ಇವರುಗಳಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದರೂ, ಮುಖ್ಯಮಂತ್ರಿ ಅವರು ಎಂದೂ ಇವರುಗಳ ಸಲಹೆಯನ್ನು ಪಡೆದಿರಲಿಲ್ಲ.
ನಮಗೆ ಅಧಿಕಾರ ನೀಡಲಾಗಿದೆ, ಆದರೆ, ಇಲ್ಲಿ ಮಾಡಲು ಏನೂ ಕೆಲಸವಿಲ್ಲ, ಭತ್ಯೆ ಹಾಗೂ ಸಂಬಳ ತೆಗೆದುಕೊಂಡು ಈ ಹುದ್ದೆಯಲ್ಲಿ ಮುಂದುವರೆಯುವುದರಲ್ಲಿ ಆಸಕ್ತಿ ಇಲ್ಲ ಎಂಬುದಾಗಿ ಹೇಳಿ ಬಿ.ಆರ್. ಪಾಟೀಲ್ ಸ್ಥಾನ ತೊರೆದಿದ್ದಾರೆ.
ಮತದಾರರ ಆಕ್ರೋಶ
ಇದಕ್ಕೂ ಮಿಗಿಲಾಗಿ ತಮ್ಮ ಆಳಂದ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ದೊರೆತಿಲ್ಲ, ಅನುದಾನ ಇಲ್ಲದೆ ಅಭಿವೃದ್ಧಿ ಸ್ಥಗಿತಗೊಂಡಿದೆ, ಮತದಾರರು ಆಕ್ರೋಶಗೊಂಡಿದ್ದಾರೆ.
ತಮಗಾಗಿರುವ ನೋವು ತೋಡಿಕೊಳ್ಳುವ ಮತ್ತು ಕ್ಷೇತ್ರಕ್ಕೆ ಅನುದಾನ ಪಡೆಯುವ ಉದ್ದೇಶದಿಂದ ಮುಖ್ಯಮಂತ್ರಿ ಅವರಲ್ಲಿ ನಾಲ್ಕೈದು ಬಾರಿ ಸಮಯ ಕೋರಿದ್ದರು.
ರಾಜಕೀಯ ಸಲಹೆಗಾರರಾಗಿರುವ ನನಗೇ ಸಮಯ ನೀಡಿಲ್ಲವೆಂದ ಮೇಲೆ ಈ ಸ್ಥಾನದಲ್ಲಿ ಮುಂದುವರೆಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಪಾಟೀಲ್ ರಾಜೀನಾಮೆ ನೀಡಿದ್ದಾರೆಂದು ಅವರ ಆಪ್ತ ವಲಯ ತಿಳಿಸಿದೆ.
ಜನತಾ ಪರಿವಾರ
ಪಾಟೀಲ್ ಹಾಗೂ ಸಿದ್ದರಾಮಯ್ಯ ಜನತಾ ಪರಿವಾರದಿಂದ ಒಟ್ಟಿಗೆ ಕಾಂಗ್ರೆಸ್‌ಗೆ ಬಂದವರು, ಅಲ್ಲದೆ, ಮೊದಲಿನಿಂದಲೂ ಸಿದ್ದರಾಮಯ್ಯ ಅವರನ್ನೇ ಬೆಂಬಲಿಸಿಕೊಂಡು ಬರುತ್ತಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ, ತಮಗೆ ಸಂಪುಟದಲ್ಲಿ ಅವಕಾಶ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿದ್ದರು.
ಇದು ಸುಳ್ಳಾಯಿತು, ನಂತರ ಸ್ವಲ್ಪ ದಿನಗಳಲ್ಲೇ ತಮ್ಮ ಆಕ್ರೋಶವನ್ನು ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯುವ ಮೂಲಕ ತೋಡಿಕೊಂಡಿದ್ದರು.
ಈ ಬೆಳವಣಿಗೆ ನಂತರ ಮುಖ್ಯಮಂತ್ರಿ ಅವರು ಪಾಟೀಲ್ ಸೇರಿದಂತೆ ಮೂವರು ಹಿರಿಯರಿಗೆ ವಿವಿಧ ಸಲಹೆಗಾರ ಹುದ್ದೆಗಳನ್ನು ನೀಡಿದ್ದರು.