ಶಿವಮೊಗ್ಗ:ಭಾರತೀಯ ಜನತಾ ಪಾರ್ಟಿಯಲ್ಲಿನ ಆಂತರಿಕ ಪ್ರಜಾಪ್ರಭುತ್ವ ಯಾವುದೇ ರಾಜಕೀಯ ಪಕ್ಷದಲ್ಲಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಪಕ್ಷದಲ್ಲಿ ಎಲ್ಲಾ ಮಟ್ಟದಲ್ಲೂ ವ್ಯವಸ್ಥಿತ ಸಂಘಟನಾ ಚುನಾವಣೆ ನಡೆಯುತ್ತದೆ, ಈ ವ್ಯವಸ್ಥೆ ಬಿಜೆಪಿಯಲ್ಲಿ ಮಾತ್ರ ಸಾಧ್ಯ.
ವರಿಷ್ಠರ ನಿರ್ಧಾರದಂತೆ ಚುನಾವಣೆ
ಪಕ್ಷದ ಕೇಂದ್ರ ವರಿಷ್ಠರ ನಿರ್ಧಾರದಂತೆ ಮಂಡಲ ಮಟ್ಟದಿಂದ ಜಿಲ್ಲಾ ಮಟ್ಟ, ರಾಜ್ಯಾಧ್ಯಕ್ಷ ಮತ್ತು ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿವೆ ಎಂದರು.
ಹಿರಿಯ ಮುಖಂಡ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಬಣ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಚುನಾವಣೆಗೆ ಸ್ಪರ್ಧಿಸುವ ತಯಾರಿ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯಾಧ್ಯಕ್ಷನಾಗಿ ಕಳೆದ ಒಂದು ವರ್ಷದಿಂದ ಏನು ಮಾಡಿದ್ದೇನೆಂಬ ಬಗ್ಗೆ ರಾಜ್ಯದ ಜನತೆಗೂ ಗೊತ್ತಿದೆ, ಕಾರ್ಯಕರ್ತರಿಗೂ ಗೊತ್ತಿದೆ, ಪಕ್ಷದ ಹಿರಿಯರು ಹಾಗೂ ಶಾಸಕರಿಗೂ ಗೊತ್ತಿದೆ ಎಂದರು.
ಒಗ್ಗಟ್ಟಾಗಿ ನಿರಂತರ ಹೋರಾಟ
ರಾಜ್ಯದಲ್ಲಿನ ಭ್ರಷ್ಟ ಹಾಗೂ ದುಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಎಲ್ಲಾ ಕಾರ್ಯಕರ್ತರು, ಪಕ್ಷದ ಹಿರಿಯರೊಂದಿಗೆ ಒಗ್ಗಟ್ಟಾಗಿ ನಿರಂತರ ಹೋರಾಟ ಮಾಡುತ್ತಿದ್ದೇವೆ.
ಎಲ್ಲರ ಸಹಕಾರದೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿದು ಪಕ್ಷ ಬಲಪಡಿಸುವ ಕೆಲಸ ಮಾಡುತ್ತೇನೆ ಎಂಬ ಪೂರ್ಣ ವಿಶ್ವಾಸ ನನಗಿದೆ ಎಂದರು.