ಬೆಂಗಳೂರು:ಪಕ್ಷದ ಕೆಲವು ಮುಖಂಡರು ವಿರೋಧ ವ್ಯಕ್ತಪಡಿಸಿದರೂ ಬಿ.ವೈ.ವಿಜಯೇಂದ್ರ ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಕೆಲವು ನಾಯಕರು ರಾಜ್ಯಾಧ್ಯಕ್ಷ ಹಾಗೂ ತಮ್ಮ ಕುಟುಂಬದ ವಿರುದ್ಧ ಅಪಸ್ವರ ಎತ್ತಿ, ಬೀದಿಗಿಳಿದಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಗಮನಕ್ಕೆ ತಂದಿದ್ದಾರೆ.
ಯಡಿಯೂರಪ್ಪ-ಅಮಿತ್ ಷಾ ಚರ್ಚೆ
ಚುನಾವಣೆ ಹಾಗೂ ವಿಜಯೇಂದ್ರ ಅವರನ್ನು ಮುಂದುವರೆಸುವ ಸಂಬಂಧ ಕಳೆದ ಬುಧವಾರ ಯಡಿಯೂರಪ್ಪ ಅವರು ಅಮಿತ್ ಷಾ ಜೊತೆ ಚರ್ಚಿಸಿದ್ದಾರೆ.
ನನಗೆಲ್ಲವೂ ತಿಳಿದಿದೆ, ವಿಜಯೇಂದ್ರ ಯುವಕ ಇದ್ದಾರೆ, ಅವರೇ ಮುಂದುವರೆಯುತ್ತಾರೆ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟಿಸಲಿ, ಉಳಿದ ವಿಚಾರದ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಹಾಗೂ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.
ವಿಜಯೇಂದ್ರಗೆ ಒಂದೆಡೆ ಷಾ ಅವರ ಒಲವು, ಮತ್ತೊಂದೆಡೆ ರಾಜ್ಯದ 39 ಜಿಲ್ಲಾಧ್ಯಕ್ಷರಲ್ಲಿ 28 ಮಂದಿ ಹಾಲಿ ರಾಜ್ಯಾಧ್ಯಕ್ಷರ ಪರ ಇರುವುದು ವಿರೋಧಿಗಳಿಗೆ ಸಹಿಸಲು ಆಗುತ್ತಿಲ್ಲ.

ಅಧಿಕಾರ ತಪ್ಪಿಸಲು ಯತ್ನ
ಚುನಾವಣೆ ನಡೆದರೂ ವಿಜಯೇಂದ್ರ ಅವರೇ ಗೆಲ್ಲುವರೆಂಬ ನಿರೀಕ್ಷೆ ಇವರದ್ದಾಗಿದ್ದು, ಹೀಗಾಗಿ, ಅವರಿಗೆ ಧಕ್ಕುವ ಅಧಿಕಾರ ತಪ್ಪಿಸಲು ಬಸನಗೌಡ ಪಾಟೀಲ್ ಯತ್ನಾಳ್ ಪಡೆ ದೆಹಲಿಯಲ್ಲಿ ಬಿಡಾರ ಹೂಡಿ ದಿನನಿತ್ಯ ಒಬ್ಬರಲ್ಲಾ ಒಬ್ಬರು ನಾಯಕರನ್ನು ಭೇಟಿ ಮಾಡಿ ರಾಜ್ಯಕ್ಕೆ ಪರ್ಯಾಯ ನಾಯಕನನ್ನು ಕೊಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್, ಆರ್‌ಎಸ್‌ಎಸ್ ನಾಯಕ ಮುಂಕುಂದ್ ಅವರನ್ನು ಭೇಟಿ ಮಾಡಿ, ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಆಗಬೇಕು ಎಂಬುದನ್ನು ಹೇಳಿದ್ದಾರೆ.
ವಿಜಯೇಂದ್ರ ರಾಜ್ಯಾಧ್ಯಕ್ಷರಾದ ನಂತರ ಅವರು ಯಾವ ರೀತಿ ಪಕ್ಷದ ಮುಖಂಡರನ್ನು ಕಡೆಗಣಿಸಿದ್ದಾರೆ, ಉಪಚುನಾವಣಾ ಫಲಿತಾಂಶ, ಸಂಘಟನೆ ವಿಷಯದಲ್ಲಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದೂ ಸೇರಿದಂತೆ ಹಲವಷ್ಟು ವಿಚಾರಗಳನ್ನು ಈ ಮುಖಂಡರು ಮುಕುಂದ್ ಮುಂದೆ ಬಿಡಿಸಿಟ್ಟಿದ್ದಾರೆ.
ಮತ್ತಷ್ಟು ಆಂತರಿಕ ಕಲಹ
ಅವರನ್ನೇ ಅಧ್ಯಕ್ಷರನ್ನಾಗಿ ಮುಂದುರೆಸಿದರೆ ಪಕ್ಷದಲ್ಲಿ ಆಂತರಿಕ ಕಲಹ ಮತ್ತಷ್ಟು ಮುಂದುವರೆಯುತ್ತದೆ, ನಿಮಗೂ ಎಲ್ಲಾ ಮಾಹಿತಿ ಇದೆ, ನೀವು ಪಕ್ಷದ ವರಿಷ್ಠರ ಗಮನಕ್ಕೆ ತಂದು ಎಲ್ಲವನ್ನೂ ಸರಿಪಡಿಸಬೇಕು ಎಂದಿದ್ದಾರೆ.
ಆದರೆ, ವಿಜಯೇಂದ್ರ ಮಾತ್ರ ತಮ್ಮ ವಿರುದ್ಧ ಸ್ವಪಕ್ಷೀಯರಿಂದಲೇ ಟೀಕಾ ಪ್ರಹಾರಗಳು ಎದುರಾದರೂ ಏನನ್ನೂ ಪ್ರತಿಕ್ರಿಯಿಸಿದೆ, ನಾನೇ ಅಧ್ಯಕ್ಷನಾಗಿ ಮುಂದುವರೆಯುತ್ತೇನೆ, ಒಂದೆರಡು ವಾರಗಳಲ್ಲಿ ಎಲ್ಲವೂ ಸರಿಹೋಗಲಿದೆ ಎಂದಿದ್ದಾರೆ.