ಬ್ಯಾಂಕ್ ವಂಚನೆ ಪ್ರಕರಣ
ಬೆಂಗಳೂರು : ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಹಾಗೂ ಇತರರಿಗೆ ಮೂರು ವರ್ಷ ಜೈಲು ಹಾಗೂ ತಲಾ ಒಂದು ಲಕ್ಷ ರೂ. ದಂಡ ವಿಧಿಸಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ನಕಲಿ ದಾಖಲೆ ನೀಡಿ ಕೋಟ್ಯಂತರ ರೂ.ಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣಯ್ಯ ಶೆಟ್ಟಿ ಅಲ್ಲದೆ, ಎಂ.ಟಿ.ವಿ.ರೆಡ್ಡಿ, ಶ್ರೀನಿವಾಸ್, ಮುನಿರಾಜು ಅವರನ್ನು ನ್ಯಾಯಾಲಯ ಅಪರಾಧಿಗಳೆಂದು ಘೋಷಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನಗರದ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಗಜಾನನ ಭಟ್, ಶಿಕ್ಷೆ ಪ್ರಕಟಿಸಿದ್ದಾರೆ.
ನ್ಯಾಯಧೀಶರು ಶಿಕ್ಷೆ ಪ್ರಕಟಿಸುತ್ತಿದ್ದಂತೆ ಕೃಷ್ಣಯ್ಯ ಶೆಟ್ಟಿ ಪರ ವಕೀಲ ನಾಗೇಂದ್ರ ನಾಯಕ್ ಮನವಿಯಂತೆ, ಶಿಕ್ಷೆಯನ್ನು ಒಂದು ತಿಂಗಳು ಅಮಾನತಿನಲ್ಲಿಟ್ಟು ಅಪರಾಧಿಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದ್ದಲ್ಲದೆ, ಪ್ರತಿಯೊಬ್ಬರು ಐದು ಲಕ್ಷ ರೂ. ಮೌಲ್ಯದ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ನೀಡಲು ಆದೇಶಿಸಿದರು.
ಆರೋಪಿಗಳು ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಐಟಿಐ, ಎಚ್‌ಎಎಲ್, ಬಿಇಎಂಎಲ್, ಬಿಎಸ್‌ಎನ್‌ಎಲ್ ಇತ್ಯಾದಿ ಸಂಸ್ಥೆಗಳ ನಕಲಿ ವೇತನ ಸ್ಲಿಪ್ ಸಲ್ಲಿಸಿ ಬ್ಯಾಂಕಿಗೆ ಕೋಟ್ಯಂತರ ರೂ. ವಂಚಿಸಿದ್ದರು.
ಬಾಲಾಜಿ ಎಂಟರ್‌ಪ್ರೈಸೆಸ್ ಲೇಔಟ್ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ 7.17 ಕೋಟಿ ರೂ. ಸಾಲ ಪಡೆದಿದ್ದರು.
ಪ್ರಕರಣದ ಬಗ್ಗೆ ತನಿಖೆ ನಡೆಸಿದ ಸಿಬಿಐ ಈ ನಾಲ್ವರ ವಿರುದ್ಧ ಭಾರತೀಯ ದಂಡ ಸಂಹಿತೆ 120ಬಿ, 409, 419, 420, 467, 471 ಹಾಗೂ ಸಿಆರ್‌ಪಿಸಿ ಸೆಕ್ಷನ್ 13(1)ಡಿ, 13(2) ಅಡಿ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸುವ ಸಂದರ್ಭದಲ್ಲೇ ಆರೋಪಿಗಳನ್ನು ತಕ್ಷಣ ಬಂಧಿಸುವಂತೆಯೂ ಆದೇಶ ಮಾಡಿತು.
ಮಾಲೂರು ಕ್ಷೇತ್ರದಿಂದ ಬಿಜೆಪಿಯಿಂದ ವಿಧಾನಸಭೆ ಪ್ರವೇಶಿಸಿದ್ದ ಕೃಷ್ಣಯ್ಯ ಶೆಟ್ಟಿ 1993ರಲ್ಲಿ ಸಾರ್ವಜನಿಕ ಉದ್ದಿಮೆಗಳ ನೌಕರರಿಗೆ ಗೃಹ ನಿರ್ಮಾಣ ಸಾಲ ಕೊಡಿಸುವ ಆಮಿಷ ಒಡ್ಡಿ, ಹಲವು ನೌಕರರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ಸಾಲ ಪಡೆದಿದ್ದರು.
ಇದರಲ್ಲಿ 3.53 ಕೋಟಿ ರೂ. ಸಾಲ ತೀರಿಸಿಲ್ಲ ಎಂದು ತನಿಖೆ ನಡೆಸಿದ ಸಿಬಿಐ, ತನ್ನ ಆರೋಪ ಪಟ್ಟಿಯಲ್ಲಿ ತಿಳಿಸಿತ್ತು.
ಯಡಿಯೂರಪ್ಪ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಸರ್ಕಾರ ರಚನೆ ಸಂದರ್ಭದಲ್ಲೇ ಕೃಷ್ಣಯ್ಯ ಶೆಟ್ಟಿ ಮುಜರಾಯಿ ಇಲಾಖೆಯ ಸಂಪುಟ ದರ್ಜೆ ಸಚಿವರಾಗಿ ಕೆಲಸ ಮಾಡಿದ್ದರು.