ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬಿಡಿ ನಿವೇಶನಗಳ ಹಂಚಿಕೆ ಪ್ರಕರಣವನ್ನು ಸಿಬಿಐಗೆ ವಹಿಸಲು ರಾಜ್ಯ ಹೈಕೋರ್ಟ್ ನಿರಾಕರಿಸುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ, ನೋವಿನಿಂದ ಹೊರಬಂದಿದ್ದಾರೆ.
ಮುಡಾ ವತಿಯಿಂದ ತಮ್ಮ ಕುಟುಂಬ 14 ನಿವೇಶನಗಳನ್ನು ಪಡೆದ ಪ್ರಕರಣವನ್ನು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಆದೇಶಿಸಿದ ನಂತರ ಸಿದ್ದರಾಮಯ್ಯ ವಿಚಲಿತರಾಗಿದ್ದರು.
ಅಲ್ಲದೆ, ರಾಜಭವನದ ಆದೇಶವನ್ನು ನ್ಯಾಯಾಲಯ ಎತ್ತಿಹಿಡಿದು ಲೋಕಾಯುಕ್ತ ತನಿಖೆಗೆ ಆದೇಶ ನೀಡಿದ ನಂತರ ಸ್ವಲ್ಪ ನಿರಾಳವಾದಂತೆ ಕಂಡಬಂದರು.

ನ್ಯಾಯ ದೊರೆಯದು
ಲೋಕಾಯುಕ್ತ ತನಿಖೆಯಿಂದ ತಮಗೆ ನ್ಯಾಯ ದೊರೆಯುವುದಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಹೈಕೋರ್ಟ್ ಮೆಟ್ಟಲೇರಿದರು.
ಅಂದಿನಿಂದ ಮುಖ್ಯಮಂತ್ರಿ ಅವರು ಭಾರೀ ಆತಂಕಕ್ಕೆ ಒಳಗಾಗಿ ಸಿಬಿಐ ತನಿಖೆಯ ಕುಣಿಕೆಗೆ ಬೀಳುವ ಆತಂಕಕ್ಕೆ ಸಿಲುಕಿದ್ದರು.
ಈ ಸಂದರ್ಭದಲ್ಲಿ ಪಕ್ಷದ ಶಾಸಕ ಹಾಗೂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮಾರ್ಗದರ್ಶನದಲ್ಲಿ ಸುಪ್ರೀಂಕೋರ್ಟ್‌ನ ಹಿರಿಯ ವಕೀಲರುಗಳನ್ನೇ ತಮ್ಮ ಪರ ವಾದಕ್ಕೆ ಇಳಿಸಿದರು.
ಸುಪ್ರೀಂಕೋರ್ಟ್ ವಕೀಲರ ತಂಡ
ಸುಪ್ರೀಂಕೋರ್ಟ್ ವಕೀಲರೊಂದಿಗೆ ರಾಜ್ಯ ಹಿರಿಯ ವಕೀಲರ ತಂಡ ಮುಖ್ಯಮಂತ್ರಿ ಪರ ವಕಾಲತ್ತು ವಹಿಸಿ ನ್ಯಾಯಪೀಠದ ಮುಂದೆ ಪ್ರಕರಣವನ್ನು ಎಳೆ ಎಳೆಯಾಗಿ ಬಿಡಿಸಿಡುವಲ್ಲಿ ಯಶಸ್ವಿಯಾಗಿದ್ದರು.
ಇಷ್ಟಾದರೂ ಮುಖ್ಯಮಂತ್ರಿ ಅವರು ಆಂತಕ ಮತ್ತು ಭಯದಲ್ಲಿಯೇ ಇದ್ದರು, ತಾವು ಮಾಡದ ತಪ್ಪಿಗೆ ಇಕ್ಕಟ್ಟಿಗೆ ಸಿಲುಕಿದ್ದೇನೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದರು.
ಪ್ರಕರಣ ನ್ಯಾಯಾಲಯದ ಮೆಟ್ಟಿಲು ಹತ್ತಿದ ನಂತರ ಮೊದಲ ಬಾರಿಗೆ ದೇವಾಲಯಗಳ ಮೊರೆ ಹೋಗಿದ್ದರು, ಆಡಳಿತದಲ್ಲೂ ತಮ್ಮ ಆಸಕ್ತಿ ಕಳೆದುಕೊಂಡಂತಿತ್ತು.
ಸಿಬಿಐ ಅಗತ್ಯವಿಲ್ಲ
ಕಳೆದ ಶುಕ್ರವಾರ ಹೈಕೋರ್ಟ್ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದ ನಂತರ ಮುಖ್ಯಮಂತ್ರಿ ನಿರಾಳರಾದರು.
ಕಾಲು ನೋವಿನಿಂದ ಸರ್ಕಾರಿ ನಿವಾಸದಲ್ಲಿ ಎರಡನೇ ದಿನದ ಬಜೆಟ್ ಪೂರ್ವಭಾವಿ ಸಭೆ ನಡೆಯುತ್ತಿದ್ದಾಗ, ಹೈಕೋರ್ಟ್ ತೀರ್ಪಿನ ಸುದ್ದಿ ತಲುಪುತ್ತಿದ್ದಂತೆ, ಬಿಗುವಿನ ಸ್ಥಿತಿಯಿಂದ ಉಲ್ಲಸಿತರಾದರು.
ಮೊದಲ ದಿನ ಬಿಗುವಿನಿಂದಲೇ ಮುಂಗಡಪತ್ರದ ಇಲಾಖಾ ತಯಾರಿ ನಡೆಸಿದ ಮುಖ್ಯಮಂತ್ರಿ, ಎರಡನೇ ದಿನದ ಮಧ್ಯಾನ್ಹದ ನಂತರ ಸಭೆಯ ವಾತಾವರಣವೇ ಬದಲಾಯಿತು, ಇಂದು ಮತ್ತಷ್ಟು ಉಲ್ಲಸಿತರಾಗಿ ಕಾರ್ಯಗಳಲ್ಲಿ ತೊಡಗಿಸಿಕೊಂಡರು.