ಬೆಂಗಳೂರು:ರಾಜ್ಯದ ವಿಶ್ವವಿದ್ಯಾಲಯಗಳ ಕಾರ್ಯವೈಖರಿ ಹಾಗೂ ಆರ್ಥಿಕ ಪರಿಸ್ಥಿತಿ ಅಧ್ಯಯನಕ್ಕೆ ರಚಿಸಿರುವ ಸಚಿವ ಸಂಪುಟ ಉಪಸಮಿತಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೀರ್ಮಾನ ಕೈಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಇದರಲ್ಲಿ ಯಾವುದೇ ವೈಯಕ್ತಿಕ ಉದ್ದೇಶವಿಲ್ಲ, ವಿದ್ಯಾರ್ಥಿಗಳ ಭವಿಷ್ಯ ಮುಖ್ಯ, ಮಂಡ್ಯ, ಚಾಮರಾಜನಗರಕ್ಕೆ ಹೋಗಲು ಪ್ರಾಧ್ಯಾಪಕರು ಸಿದ್ಧರಿಲ್ಲ, ಹಿರಿತನ ಮತ್ತು ಪಿಂಚಣಿ ವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಹಿಂಜರಿಯುತ್ತಿದ್ದು, ಈ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿದ ನಂತರ ತೀರ್ಮಾನ ಮಾಡಲಾಗುವುದು.

ಪ್ರವೇಶಾತಿಯಲ್ಲಿ ಕುಸಿತ
ಮಂಡ್ಯ, ಚಾಮರಾಜನಗರ ಭಾಗದವರು ಮೈಸೂರು ವಿವಿಗೆ ಮೊದಲ ಆದ್ಯತೆ ನೀಡಿದ ಪರಿಣಾಮ ಇತರ ವಿಶ್ವವಿದ್ಯಾಲಯಗಳ ಪ್ರವೇಶಾತಿಯಲ್ಲಿ ಕುಸಿತವಾಯಿತು, ಈ ಕುರಿತು ಸಲ್ಲಿಸಲಾದ ಆಂತರಿಕ ವರದಿ ಆಧರಿಸಿ ಮುಖ್ಯಮಂತ್ರಿಗಳು ನನ್ನ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಿದರು.
ನಮಗೆ ಬಂದಿರುವ ಸಲಹೆಗಳನ್ನು ಪರಾಮರ್ಶಿಸಿ ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಿದ ನಂತರ ಸಚಿವ ಸಂಪುಟ ಸಭೆ ಮುಂದಿಟ್ಟು ಚರ್ಚಿಸಿ, ತೀರ್ಮಾನ ಮಾಡಲಾಗುವುದು ಎಂದರು.
ಜಮೀನು ನೀಡಿರಲಿಲ್ಲ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಹೊಸದಾಗಿ ಸ್ಥಾಪಿಸುವ ಪ್ರತಿ ವಿಶ್ವವಿದ್ಯಾಲಯಕ್ಕೆ 2 ಕೋಟಿ ರೂ. ಮೀಸಲಿಡಲಾಗುತ್ತಿತ್ತು, ಜಮೀನು ನೀಡಿರಲಿಲ್ಲ ಎಂದರು.
ಅನಗತ್ಯ ವಿವಿಗಳನ್ನು ಮುಚ್ಚುವಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ನಿಮ್ಮ ಮಾತಿಗೆ ತಕ್ಕಂತೆ ಕುಣಿಯಲು ಆಗುವುದಿಲ್ಲ, ನಿಮ್ಮ ಪ್ರಯತ್ನದಿಂದ ನನ್ನ ಬಾಯಲ್ಲಿ ಕೆಲವು ವಿಚಾರ ಬರುವುದಿಲ್ಲ, ಬೇರೆಯವರನ್ನು ನಿಭಾಯಿಸುವಂತೆ ನನ್ನ ಬಳಿ ಪ್ರಯತ್ನಿಸಬೇಡಿ ಎಂದು ಖಾರವಾಗಿ ನುಡಿದರು.