ಬೆಂಗಳೂರು:ಕರ್ನಾಟಕದ ಮೇಲೆ ವಿಶ್ವಾಸವಿಟ್ಟು ಹೂಡಿಕೆದಾರರು ಉದ್ಯಮ ಸ್ಥಾಪಿಸುವ ಹೂಡಿಕೆದಾರರು ಬರಿಗೈಯಲ್ಲಿ ಹೋಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಭರವಸೆ ನೀಡಿದ್ದಾರೆ.
ಹೂಡಿಕೆದಾರರು ಕರ್ನಾಟಕದಲ್ಲಿ ಸೋಲುವ ಭಯವಿಲ್ಲ, ರಾಜ್ಯದ ಮೇಲೆ ವಿಶ್ವಾಸವಿಡಬಹುದು, ಭಾರತವನ್ನು ಇಡೀ ಜಗತ್ತು ಬೆಂಗಳೂರು ಹಾಗೂ ಕರ್ನಾಟಕದ ಮೂಲಕ ನೋಡುತ್ತಿದೆ.
ಕರ್ನಾಟಕ ಹಾಗೂ ದೇಶದ ಭವಿಷ್ಯಕ್ಕಾಗಿ ಬಂಡವಾಳ ಹೂಡಿಕೆ ಮಾಡಬೇಕು, ಬಂಡವಾಳ ಹೂಡಿಕೆ ಉದ್ಯೋಗ ಸೃಷ್ಟಿಗೆ ಮಾತ್ರವಲ್ಲ ಪ್ರಗತಿ ಸಾಧಿಸುವ ಗುರಿ ಹೊಂದಿದೆ.

10 ಲಕ್ಷ ಕೋಟಿ ರೂ. ಹೂಡಿಕೆ ಗುರಿ
ಸಮಾವೇಶದ ಮೂಲಕ 10 ಲಕ್ಷ ಕೋಟಿ ರೂ. ಹೂಡಿಕೆ ಗುರಿ ಹೊಂದಿದ್ದು, ನೂತನ ಕೈಗಾರಿಕಾ ನೀತಿ ಬೆಂಗಳೂರು ಅಲ್ಲದೆ, ರಾಜ್ಯದ ಇತರ ಪ್ರದೇಶಗಳಲ್ಲಿ ಬಂಡವಾಳ ಹೂಡಿಕೆದಾರರಿಗೂ ಹೆಚ್ಚಿನ ಪ್ರೋತ್ಸಾಹ ನೀಡಲಿದೆ.
ಎಂಎಸ್‌ಎಂಇಗಳು ರಾಜ್ಯದ ಏರೋಸ್ಪೇಸ್ ಕ್ಷೇತ್ರದ ದೊಡ್ಡ ಶಕ್ತಿಯಾಗಿವೆ, ಬಾಹ್ಯಾಕಾಶ ಕ್ಷೇತ್ರದಲ್ಲಿನ ಸಾಧನೆಗೆ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ತಯಾರಾದ ರಾಕೆಟ್‌ಗಳೇ ಸಾಕ್ಷಿಯಾಗಿವೆ.
ಕರ್ನಾಟಕದ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ದೇಶದ ಇತರ ನಗರಗಳ ಜೊತೆ ಸ್ಪರ್ಧೆಗಾಗಿ ಅಲ್ಲ, ಬದಲಿಗೆ ಇದು ಜಾಗತಿಕ ಮಟ್ಟದ ಸ್ಪರ್ಧೆಯಾಗಿದೆ ಎಂದರು.

ದೊಡ್ಡ ಕಂಪನಿಗಳು ಹೂಡಿಕೆ
ಇನ್ವೆಸ್ಟ್ ಕರ್ನಾಟಕ-2025ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ದಿನಗಳ ಸಮಾವೇಶದಲ್ಲಿ ಅನೇಕ ಒಪ್ಪಂದ, ಚರ್ಚೆಗಳು ನಡೆದಿವೆ, ದಿಗ್ಗಜ ಉದ್ಯಮಿಗಳಾದ ಸಜ್ಜನ್ ಜಿಂದಾಲ್, ಆನಂದ್ ಮಹೀಂದ್ರಾ ಮಾತು, ಯೋಶೋಗಾಥೆ ಕೇಳಿದ್ದೀರಿ, ರಾಜ್ಯದ ಕೈಗಾರಿಕಾ ನೀತಿ, ಸ್ನೇಹ-ಸಂಬಂಧ ಮೆಚ್ಚಿ ದೇಶದ ದೊಡ್ಡ ಕಂಪನಿಗಳು ಹೂಡಿಕೆ ಮಾಡಿವೆ ಎಂದರು.
ಪ್ರವಾಸೋದ್ಯಮ ಕ್ಷೇತ್ರದಲ್ಲೂ ಹೊಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ರಾಜ್ಯ 300 ಕಿ.ಮೀ. ಕರಾವಳಿ ಪ್ರದೇಶ, ಐತಿಹಾಸಿಕ ಸ್ಥಳಗಳನ್ನೂ ಹೊಂದಿದೆ.
ದೇಶದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆರಂಭವಾಗಿದ್ದೇ ಕರ್ನಾಟಕದಲ್ಲಿ, ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಆಡಳಿತ ಕಾಲದಲ್ಲಿ.
ವರ್ಷವಿಡೀ ಸ್ವಾಗತ
ವರ್ಷದ ಎಲ್ಲಾ 365 ದಿನಗಳು ಹೂಡಿಕೆದಾರರಿಗಾಗಿ ರಾಜ್ಯದ ಬಾಗಿಲು ತೆರೆದಿರುತ್ತದೆ, ಅಗತ್ಯ ನೆರವು ನೀಡಿ ಕರ್ನಾಟಕ ಹಾಗೂ ದೇಶದ ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ.
ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಸಮಾವೇಶ ಯಶಸ್ವಿಯಾಗಿದ್ದು, ಶ್ರಮಿಸಿದ ಎಲ್ಲರನ್ನೂ ಅಭಿನಂದಿಸುವುದಾಗಿ ತಿಳಿಸಿದರು.