ಕಳೆದ ವಾರ ಪ್ರತ್ಯೇಕವಾಗಿ ದಿಲ್ಲಿಗೆ ಹೋಗಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ, ಈ ಸಂದರ್ಭದಲ್ಲಿ ಅವರು ಮೂರು ಸಂಗತಿಗಳನ್ನು ಸ್ಪಷ್ಟವಾಗಿ ಹೇಳಿದ್ದಾರೆ.
’ಮುಖ್ಯಮಂತ್ರಿ ಹುದ್ದೆಯಿಂದ ಸಿದ್ದರಾಮಯ್ಯ ಅವರನ್ನು ಯಾವ ಕಾರಣಕ್ಕೂ ಇಳಿಸಬಾರದು, ಹಾಗೊಂದು ವೇಳೆ ಅವರನ್ನು ಇಳಿಸುವುದೇ ಆದರೆ ಅವರ ಜಾಗದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ನೋಡಲು ನಾವು ತಯಾರಿಲ್ಲ ಎಂಬುದು ಒಂದಾದರೆ, ಪರ್ಯಾಯ ನಾಯಕತ್ವ ಅನಿವಾರ್ಯವಾದರೆ ನೀವು ಕರ್ನಾಟಕದ ಮುಖ್ಯಮಂತ್ರಿಯಾಗಿ, ಇಲ್ಲವೇ ನಾವು ಸೂಚಿಸಿದವರಿಗೆ ಮುಖ್ಯಮಂತ್ರಿ ಹುದ್ದೆ ಸಿಗಲಿ ಎಂಬುದು ಎರಡನೇ ಸಂಗತಿ.
ಒಂದು ವೇಳೆ ಇದಾಗದೆ ಡಿ.ಕೆ.ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಬೇಕು ಎಂದು ಹೈಕಮಾಂಡ್ ತೀರ್ಮಾನಿಸಿದರೆ ನಾವು, ಕನಿಷ್ಟ ಅರವತ್ತು ಮಂದಿ ಮಂತ್ರಿಗಳು, ಶಾಸಕರು ಪಕ್ಷ ತೊರೆಯುತ್ತೇವೆ ಎಂಬುದು ಮೂರನೇ ಸಂಗತಿ.
ಹೀಗೆ ತಮ್ಮನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ ಅವರು ಕಡ್ಡಿ ತುಂಡು ಮಾಡಿದಂತೆ ಮಾತನಾಡಿದಾಗ ಖರ್ಗೆಯವರು, ’ಈ ಕುರಿತು ಮಾತನಾಡಲು ಇನ್ನೂ ಸಮಯವಿದೆ’ ಎಂದರಂತೆ.
ಆದರೆ ಪಟ್ಟು ಬಿಡದ ಸಚಿವರು, ’ಇಲ್ಲ ಸಾರ್, ಈ ವಿಷಯದಲ್ಲಿ ನಮಗೆ ಕ್ಲಾರಿಟಿ ಬೇಕು, ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೆ ಮಾಡುವ ಒಪ್ಪಂದವಾಗಿದೆಯೇ ಎಂಬುದು ಸ್ಪಷ್ಟವಾಗಬೇಕು, ಯಾಕೆಂದರೆ ಇವತ್ತು ಸಿದ್ದರಾಮಯ್ಯ ಮತ್ತು ನಿಮ್ಮ ಕಾರಣಕ್ಕಾಗಿ ಅಹಿಂದ ವರ್ಗಗಳ ಸಾಲಿಡ್ಡು ಶಕ್ತಿ ಕಾಂಗ್ರೆಸ್ ಜತೆಗಿದೆ, ಹೀಗಾಗಿ ಒಂದೋ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು, ಇಲ್ಲ ಅವರು ಇಳಿಯಲೇಬೇಕು ಎಂದರೆ ನೀವು ಆ ಜಾಗಕ್ಕೆ ಬರಬೇಕು, ಇದು ಸಾಧ್ಯವಾಗದೆ ಹೋದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮರಳಿ ಅಧಿಕಾರಕ್ಕೆ ಬರುವುದಿರಲಿ, ಪ್ರಬಲ ಪ್ರತಿಪಕ್ಷವಾಗಿ ನೆಲೆಯೂರಲೂ ಸಾಧ್ಯವಿಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಒಕ್ಕಲಿಗ ಸಮುದಾಯದ ಸಾಲಿಡ್ಡು ಶಕ್ತಿ ಕಾಂಗ್ರೆಸ್ ಜತೆ ಇರುತ್ತದೆ ಎಂಬ ಭ್ರಮೆ ಬೇಡವೇ ಬೇಡ, ಇದು ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟವಾಗಿದೆ, ಹೀಗಿದ್ದ ಮೇಲೆ ಸಿದ್ದರಾಮಯ್ಯ ಅವರ ಜಾಗಕ್ಕೆ ಡಿ.ಕೆ.ಶಿವಕುಮಾರ್ ಬಂದರೆ ಕಾಂಗ್ರೆಸ್ಸಿಗೆ ಭವಿಷ್ಯವಿರಲು ಸಾಧ್ಯವೇ ಇಲ್ಲ’ ಎಂದು ವಿವರಿಸಿದ್ದಾರೆ.
ಸತೀಶ್ ಜಾರಕಿಹೊಳಿ ಮತ್ತು ಕೆ.ಎನ್.ರಾಜಣ್ಣ ತಮ್ಮನ್ನು ಪ್ರತ್ಯೇಕವಾಗಿ ಭೇಟಿ ಮಾಡಿದರೂ ಇಬ್ಬರ ಧ್ವನಿ ಒಂದೇ ಆಗಿರುವುದನ್ನು ಗಮನಿಸಿದ ಖರ್ಗೆಯವರು ಹೆಚ್ಚು ಮಾತನಾಡಲಿಲ್ಲವಂತೆ, ಆದರೆ ಸಿದ್ದರಾಮಯ್ಯ ಅವರು ಕೆಳಗಿಳಿದು ಅವರ ಜಾಗಕ್ಕೆ ಡಿಕೆಶಿ ಬರುವುದೇ ಆದರ, ರಾಜ್ಯ ಕಾಂಗ್ರೆಸ್ಸಿನ ಆತ್ಮಹತ್ಯಾದಳ ಪಕ್ಷ ತೊರೆಯುವುದು ಗ್ಯಾರಂಟಿ ಎಂಬುದು ಅವರಿಗೆ ಖಚಿತವಾಗಿದೆ.
ಇವತ್ತು ದೇಶದ ರಾಜಧಾನಿ ದಿಲ್ಲಿಯ ಮೇಲೆ ಅಧಿಪತ್ಯ ಸಾಧಿಸಿರುವ ಬಿಜೆಪಿ ವರಿಷ್ಠರು ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಬಡಿದು ಬಾಯಿಗೆ ಹಾಕಿಕೊಳ್ಳಲು ತಯಾರಾಗಿರುವಾಗ, ಅವರಿಗೆ ನಾವೇ ಅವಕಾಶ ಕೊಡಬಾರದು ಅಂತ ಅವರು ರಾಹುಲ್ ಗಾಂಧಿ ಅವರಿಗೆ ವಿವರಿಸಿದ್ದಾರೆ ಎಂಬುದು ಲೇಟೆಸ್ಟು ಸುದ್ದಿ.
ಕುಮಾರಣ್ಣನ ಲೇಟೆಸ್ಟು ಸಂಕಟ
ಇನ್ನು ಕೇಂದ್ರದ ಉಕ್ಕು ಮತ್ತು ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೊಸ ಸಂಕಟ ಅನುಭವಿಸುತ್ತಿದ್ದಾರೆ.
ಅವರ ಈ ಸಂಕಟಕ್ಕೆ ರಾಜ್ಯ ಸರ್ಕಾರ ಕಾರಣ, ಯಾಕೆಂದರೆ ಕರ್ನಾಟಕದಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ, ಆ ಮೂಲಕ ರಾಜ್ಯದ ಅಭಿವೃದ್ಧಿಗೆ ನೆರವಾಗುವ ಲೆಕ್ಕಾಚಾರ ಕುಮಾರಸ್ವಾಮಿ ಅವರಿಗಿದೆ.
ಆದರೆ ಈ ವಿಷಯದಲ್ಲಿ ರಾಜ್ಯ ಸರ್ಕಾರದಿಂದ ನಿರೀಕ್ಷಿತ ಸ್ಪಂದನೆ ಸಿಗುತ್ತಿಲ್ಲ ಎಂಬುದು ಅವರ ನೋವು.
ಹಾಗೆ ನೋಡಿದರೆ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಂದ ಹಿಡಿದು ಬಹುತೇಕ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಿಗೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಪ್ರಪೋಸಲ್ಲು ಕೊಡುತ್ತಿದ್ದಾರೆ.
ಈ ಪೈಕಿ ಚಂದ್ರಬಾಬು ನಾಯ್ಡು, ವೈಜಾಗ್ ಸ್ಟೀಲ್ಸ್‌ನ ಸಮಸ್ಯೆಯನ್ನು ಪರಿಹರಿಸಲು ಬೆನ್ನು ಬಿದ್ದು ಕೆಲಸ ಮಾಡುತ್ತಿದ್ದರೆ, ತೆಲಂಗಾಣದ ರೇವಂತರೆಡ್ಡಿ ತಮ್ಮ ರಾಜ್ಯದ ಸಾರಿಗೆ ಸಂಸ್ಥೆಗೆ ಜೀವ ತುಂಬಲು ಹೊಸ ಪ್ರಪೋಸಲ್ಲು ಕೊಟ್ಟು ಅದಕ್ಕೆ ಅಂಟಿಕೊಂಡಿದ್ದಾರೆ.
ಆದರೆ ಕರ್ನಾಟಕ ಸರ್ಕಾರ ಮಾತ್ರ ಹೊಸ ಪ್ರಪೋಸಲ್ಲುಗಳನ್ನೂ ಕೊಡದೆ, ಹಳೆ ಪ್ರಪೋಸಲ್ಲುಗಳಿಗೆ ಶಕ್ತಿ ತುಂಬಲೂ ಬಿಡದೆ ತಮ್ಮ ವಿರುದ್ಧ ದ್ವೇಷದ ರಾಜಕಾರಣಕ್ಕಿಳಿದಿದೆ, ಆದರೆ ಇದರಿಂದ ರಾಜ್ಯಕ್ಕೆ ಆಗುವುದೇನು ಎಂಬುದು ಕುಮಾರಸ್ವಾಮಿ ನೋವು.
ಆದರೆ ಹೀಗೆ ನೋವಾಗಿದೆ ಎಂದು ಸುಮ್ಮನೆ ಕೂರಲು ಸಾಧ್ಯವಿಲ್ಲವಲ್ಲ, ಹೀಗಾಗಿ ಸಂಕಷ್ಟದಲ್ಲಿರುವ ಕುದುರೆಮುಖ ಕಾರ್ಖಾನೆಯನ್ನು ಎನ್.ಎಂ.ಡಿ.ಸಿ.ಯಲ್ಲಿ ವಿಲೀನಗೊಳಿಸಿ ಅದಿರಿನ ಕೊರತೆಯಿಂದ ಅದನ್ನು ಬಚಾವು ಮಾಡಲು ಕುಮಾರಸ್ವಾಮಿ ಹೊರಟಿದ್ದಾರೆ.
ಇದೇ ರೀತಿ ಹೆಚ್.ಎಂ.ಟಿ ಕಾರ್ಖಾನೆಯನ್ನು ಬಿ.ಹೆಚ್.ಇ.ಎಲ್‌ನಲ್ಲಿ ವಿಲೀನಗೊಳಿಸುವ ಪ್ರಪೋಸಲ್ಲನ್ನು ಕೈಗೆತ್ತಿಕೊಂಡಿರುವ ಕುಮಾರಸ್ವಾಮಿ ಅದೇ ಕಾಲಕ್ಕೆ ಭದ್ರಾವತಿಯ ವಿ.ಐ.ಎಸ್.ಎಲ್ ಫ್ಯಾಕ್ಟರಿಯ ಪುನಶ್ಚೇತನಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ.
ಹೀಗೆ ರಾಜ್ಯ ಸರ್ಕಾರದಿಂದ ನಿರೀಕ್ಷಿತ ಸ್ಪಂದನೆ ಸಿಗದಿದ್ದರೂ, ಕೇಂದ್ರದ ಹಿಡಿತದಲ್ಲಿರುವ ರಾಜ್ಯದ ಕಾರ್ಖಾನೆಗಳಿಗೆ ಜೀವ ತುಂಬುವ ಮೂಲಕ ಸಮಾಧಾನ ಮಾಡಿಕೊಳ್ಳುವುದು ಕುಮಾರಸ್ವಾಮಿ ಅವರ ಯೋಚನೆ.
ವಿಜಯ ಯುಗ ಮುಂದುವರಿಯಲಿದೆ
ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗೆಗಿದ್ದ ಗೊಂದಲಗಳಿಗೆ ಬ್ರೇಕ್ ಹಾಕಿರುವ ವರಿಷ್ಠರು ವಿಜಯೇಂದ್ರ ಅವರನ್ನೇ ಮುಂದುವರಿಸಲು ನಿರ್ಧರಿಸಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ, ವಿಜಯೇಂದ್ರ ಅವರನ್ನು ಬದಲಿಸಿ ಬೇರೆ ಯಾರನ್ನು ಅಧ್ಯಕ್ಷ ಸ್ಥಾನಕ್ಕೆ ತರಬಹುದು ಅಂತ ವರಿಷ್ಠರು ಫೀಡ್‌ಬ್ಯಾಕ್ ಪಡೆಯತೊಡಗಿದ್ದರು.
ಅದರ ಪ್ರಕಾರ ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ ಸೇರಿದಂತೆ ಹಲವರ ಹೆಸರುಗಳು ರೇಸಿಗೆ ಬಂದಿದ್ದವು.
ಆದರೆ ಇಂತಹ ಎಲ್ಲ ಫೀಡ್‌ಬ್ಯಾಕುಗಳ ನಡುವೆಯೂ ಸಂಘಟನೆಯ ವಿಷಯದಲ್ಲಿ ವಿಜಯೇಂದ್ರ ಅವರಿಗೆ ಸಮಾನರಾದವರು ವರಿಷ್ಠರ ಕಣ್ಣಿಗೆ ಬಿದ್ದಿಲ್ಲ.
ಇವತ್ತು ಪಕ್ಷದ ಅಧ್ಯಕ್ಷರಾದವರಿಗೆ ಮಾಸ್ ಲೀಡರ್‌ಷಿಪ್ ಇರಬೇಕು, ಕ್ಲಾಸ್ ಲೀಡರ್‌ಷಿಪ್ ಸಾಲುವುದಿಲ್ಲ, ಆ ದೃಷ್ಟಿಯಿಂದ ವಿಜಯೇಂದ್ರ ಮುಂದುವರಿಯುವುದು ಅನಿವಾರ್ಯ, ಯಾಕೆಂದರೆ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಿದ ಬಹುತೇಕ ನಾಯಕರಿಗೆ ಸ್ವಯಂ ವರ್ಚಸ್ಸು ಇಲ್ಲ, ಆದರೆ ವಿಜಯೇಂದ್ರ ಅವರ ವಿಷಯ ಹಾಗಲ್ಲ, ಮೊದಲನೆಯದಾಗಿ ಅವರಿಗೆ ಯಡಿಯೂರಪ್ಪ ಎಂಬ ದೈತ್ಯ ಶಕ್ತಿಯ ನಾಮಬಲವಿದೆ, ಎರಡನೆಯದಾಗಿ ರಾಜ್ಯದ ಯಾವ ಮೂಲೆಗೆ ಹೋದರೂ ಅವರನ್ನು ಬೆಂಬಲಿಸುವ ಪಡೆ ಇದೆ, ಹೀಗಾಗಿ ಇವತ್ತಿನ ಸ್ಥಿತಿಯಲ್ಲಿ ಅವರನ್ನು ಬದಲಿಸುವುದು ಎಂದರೆ ಸುಧೀರ್ಘ ಕಾಲದ ಶೀತಲ ಸಮರಕ್ಕೆ ಅವಕಾಶ ಮಾಡಿಕೊಟ್ಟಂತೆ ಎಂಬುದು ಬಿಜೆಪಿ ವರಿಷ್ಠರ ಯೋಚನೆ.
ಹೀಗಾಗಿ ವಿಜಯೇಂದ್ರ ವಿರೋಧಿ ಪಡೆಯ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಬಾಯಿ ಮುಚ್ಚಿಸಲು ಹೊರಟಿರುವ ಬಿಜೆಪಿ ವರಿಷ್ಠರು ಯತ್ನಾಳ್ ಅವರಿಗೆ ಷೋಕಾಸ್ ನೋಟೀಸ್ ಕೊಟ್ಟಿದ್ದಾರೆ.
ಅದೇ ರೀತಿ ಕಳೆದ ವಾರ ವಿಜಯೇಂದ್ರ ಅವರನ್ನು ದಿಲ್ಲಿಗೆ ಕರೆಸಿಕೊಂಡ ವರಿಷ್ಠರು, ’ನೀವು ನೆಮ್ಮದಿಯಿಂದ ಕೆಲಸ ಮಾಡಿ, ಯತ್ನಾಳ್ ಅವರನ್ನು ಮುಂದಿನ ವಾರ ಸಸ್ಪೆಂಡ್ ಮಾಡೋಣ’ ಎಂದಿದ್ದಾರೆ.
ಇದೇ ರೀತಿ ರಾಜ್ಯ ಬಿಜೆಪಿಯ ಗೊಂದಲವನ್ನು ಬಗೆಹರಿಸಿಕೊಳ್ಳಲು ಪಕ್ಷದ ಕೋರ್ ಕಮಿಟಿ ಮತ್ತು ಪದಾಧಿಕಾರಿಗಳ ಪಟ್ಟಿಗೆ ಸರ್ಜರಿ ಅನಿವಾರ್ಯ, ಇದಕ್ಕೆ ತಯಾರಾಗಿ ಅಂತ ಹೇಳಿ ಕಳಿಸಿದ್ದಾರೆ.
ಫ್ರಂಟ್ ಲೈನಿಗೆ ಬಂದ್ರು ಗೋಪಾಲಯ್ಯ
ಇನ್ನು ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಾಜಿ ಸಚಿವ ಗೋಪಾಲಯ್ಯ ಅವರ ಹೆಸರು ಮುನ್ನೆಲೆಗೆ ಬಂದಿದೆ, ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾರಣ.
ಕಳೆದ ವಾರ ದೆಹಲಿಗೆ ಹೋದ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರನ್ನು ಭೇಟಿಯಾದ ವಿಜಯೇಂದ್ರ ನೇರವಾಗಿಯೇ ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧ ಧ್ವನಿ ಎತ್ತಿದ್ದಾರೆ.
’ಸಾರ್, ಇವತ್ತು ಅಶೋಕ್ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಕ್ಲೋಜ್ ಆಗಿದ್ದಾರೆ, ಹೀಗಾಗಿ ಸರ್ಕಾರದ ವಿರುದ್ಧ ಹೋರಾಡಲು ಅವರಿಗೆ ಶಕ್ತಿ ಕಡಿಮೆ, ಸಾಲದು ಎಂದರೆ ಪಕ್ಷದ ಬಹುತೇಕ ಶಾಸಕರಿಗೆ ಅಶೋಕ್ ಅವರ ಬಗ್ಗೆ ವಿಶ್ವಾಸವಿಲ್ಲ.
ಯಶವಂತಪುರದ ಶಾಸಕ ಎಸ್.ಟಿ.ಸೋಮಶೇಖರ್ ಇವತ್ತು ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದರೆ ಅದಕ್ಕೆ ಅಶೋಕ್ ಕಾರಣ, ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಕೃಷ್ಣಪ್ಪ ಅವರ ಲೇಟೆಸ್ಟು ಕಿರಿಕಿರಿಗಳಿಗೂ ಅಶೋಕ್ ಅವರೇ ಕಾರಣ ಅಂತ ವಿಜಯೇಂದ್ರ ವಿವರಿಸಿದಾಗ, ಅವರಿಗೆ ಪರ್ಯಾಯ ನಾಯಕ ಯಾರು ಅಂತ ನಡ್ಡಾ ಕೇಳಿದರಂತೆ.
ಆಗ ಮಾಜಿ ಸಚಿವ, ಮಲ್ಲೇಶ್ವರದ ಶಾಸಕ ಡಾ.ಅಶ್ವಥ್ಥನಾರಾಯಣ ಮತ್ತು ಮಾಜಿ ಸಚಿವ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕ ಗೋಪಾಲಯ್ಯ ಅವರ ಹೆಸರುಗಳನ್ನು ವಿಜಯೇಂದ್ರ ಸೂಚಿಸಿದ್ದಾರೆ.
ಈ ಪೈಕಿ ಅಶ್ವಥ್ಥನಾರಾಯಣ್ ಅವರು ಸಂಘಟನೆ ಮತ್ತು ಆಡಳಿತಾತ್ಮಕ ವಿಷಯಗಳಲ್ಲಿ ಅನುಭವಿ, ಇದೇ ರೀತಿ ಅಭಿವೃದ್ಧಿಯ ವಿಷಯಕ್ಕೆ ಬಂದರೆ ಗೋಪಾಲಯ್ಯ ರೋಲ್ ಮಾಡೆಲ್ ನಾಯಕ, ಸದಾ ಕಾಲ ಕೆಲಸದ ಬೆನ್ನು ಬೀಳುವ ಗೋಪಾಲಯ್ಯ ಇದೇ ಕಾರಣಕ್ಕಾಗಿ ಸರ್ಕಾರದ ಲೋಪಗಳನ್ನು ಚೆನ್ನಾಗಿ ಅರಿತಿದ್ದಾರೆ, ಹೀಗಾಗಿ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ತಂದರೆ ಒಳ್ಳೆಯದು ಅಂತ ವಿವರಿಸಿದ್ದಾರೆ.
ಅಂದ ಹಾಗೆ ಅಶೋಕ್ ಅವರ ವಿಷಯದಲ್ಲಿ ವಿಜಯೇಂದ್ರ ಅವರೇಕೆ ಇಷ್ಟು ಕೋಪ ಮಾಡಿಕೊಂಡಿದ್ದಾರೆ ಅಂತ ನೋಡಿದರೆ, ಅಶೋಕ್ ವಿಷಯದಲ್ಲಿ ಅವರಿಗೆ ತಲುಪುತ್ತಿರುವ ಫೀಡ್‌ಬ್ಯಾಕುಗಳೇ ಕಾರಣ ಎಂಬುದು ಸ್ಪಷ್ಟವಾಗುತ್ತದೆ.
ಅದರ ಪ್ರಕಾರ, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರು ಮತ್ತು ಕರ್ನಾಟಕದಲ್ಲಿ ಪಕ್ಷದ ಆಂತರಿಕ ಚುನಾವಣೆಗಳ ಉಸ್ತುವಾರಿ ಹೊತ್ತಿರುವ ಲಕ್ಷ್ಮಣ್ ಅವರಿಗೆ ನಿರಂತರವಾಗಿ ಕಂಪ್ಲೇಂಟ್ ಲೆಟರುಗಳು ಬರುತ್ತಿವೆ.
ಈ ಲೆಟರುಗಳ ಹಿಂದಿರುವ ಸೂತ್ರಧಾರ ಅಶೋಕ್ ಎಂಬುದು ವಿಜಯೇಂದ್ರ ಅವರಿಗಿರುವ ಫೀಡ್‌ಬ್ಯಾಕು, ಪರಿಣಾಮ, ಅಶೋಕ್ ಅವರನ್ನು ಶತಾಯಗತಾಯ ಕೆಳಗಿಳಿಸುವುದು ವಿಜಯೇಂದ್ರ ಅವರ ಠರಾವು.
ಆರ್.ಟಿ.ವಿಠ್ಠಲಮೂರ್ತಿ