ಬೆಂಗಳೂರು:ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬದಲಾವಣೆ ಮಾಡಿ ಹೊಸಬರಿಗೆ ಅವಕಾಶ ಮಾಡಿ ಎಂದು ಪಕ್ಷದ ಹಿರಿಯ ನಾಯಕ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಆಡಳಿತ ತೊಲಗಿಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ತಕ್ಷಣವೇ ರಾಜ್ಯ ನಾಯಕತ್ವ ಬದಲಾವಣೆ ಮಾಡಿ ವಂಶಾಡಳಿತ ಕೊನೆಗೊಳಿಸಿ ಎಂದಿದ್ದಾರೆ.
ಸಮರ್ಥ ನಾಯಕನ ಕೂರಿಸಿ
ಪಕ್ಷದ ನಾಯಕತ್ವ ವಿರುದ್ಧ ಹೇಳಿಕೆ ನೀಡಿದ ಸಂಬಂಧ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿ ನೀಡಿದ ನೋಟಿಸ್‌ಗೆ ಐದು ಪುಟಗಳ ಉತ್ತರ ನೀಡಿ, ಅದರಲ್ಲಿ ನಾಯಕತ್ವ ಬದಲಿಸಿ, ಸಮರ್ಥ ನಾಯಕನನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿ ಎಂದಿದ್ದಾರೆ.
ನಾನು ಯಾವುದೇ ಬಣ ರಾಜಕೀಯ ಮಾಡಿಲ್ಲ, ಪಕ್ಷ ಚೌಕಟ್ಟಿನಲ್ಲಿ ಹೋರಾಟ ಮಾಡಿದ್ದೇನೆ, ಕಾಂಗ್ರೆಸ್ ಮುಖಂಡರ ಜೊತೆ ಕೈಜೋಡಿಸಿರುವ ಪಕ್ಷದ ನಾಯಕರ ಬಣ್ಣ ಬಯಲು ಮಾಡಿದ್ದೇನೆ, ಇದು ತಪ್ಪೇ ಎಂದು ಪ್ರಶ್ನಿಸಿದ್ದಾರೆ.
ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸ್ವಜನಪಕ್ಷಪಾತ ಮಾಡುತ್ತಿದ್ದಾರೆ, ಹಿರಿಯರನ್ನು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ್ದರಿಂದ ಪಕ್ಷಕ್ಕೆ ವಿಧಾನಸಭಾ ಉಪಚುನಾವಣೆಯಲ್ಲಿ ಭಾರೀ ಹಿನ್ನಡೆಯಾಗಿದೆ.
ಸರ್ಕಾರದ ಭ್ರಷ್ಟಾಚಾರ
ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ, ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ, ಮುಖ್ಯಮಂತ್ರಿಯವರೇ ಹಲವು ಹಗರಣಗಳಲ್ಲಿ ಸಿಲುಕಿದ್ದಾರೆ.
ರೈತರು, ಗುತ್ತಿಗೆದಾರರು, ಅಧಿಕಾರಿಗಳ ಸರಣಿ ಆತ್ಮಹತ್ಯೆ ನಡೆಯುತ್ತಿದೆ, ಇಷ್ಟಾದರೂ ವಿಜಯೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸದೆ ತಮ್ಮ ಅಸಮರ್ಥತೆ ತೋರಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕೆಂದಿದ್ದರೆ, ತಕ್ಷಣವೇ ವಿಜಯೇಂದ್ರ ಅವರ ಸ್ಥಾನಕ್ಕೆ ಸಮರ್ಥರೊಬ್ಬರನ್ನು ನೇಮಕ ಮಾಡಿ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.