ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ’ಆಲ್ ಈಸ್ ವೆಲ್’ ನಾಟಕ ಬದಿಗಿಟ್ಟು, ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದಿಲ್ಲಿ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕ್ರೋಡೀಕೃತ ಹಣ ಉಪಯೋಗ ಆಗುತ್ತಿದೆಯೇ, ದುರುಪಯೋಗ ಆಗುತ್ತಿದೆಯೇ, ಗ್ಯಾರಂಟಿಗಳಿಗೆ ನಮ್ಮ ವಿರೋಧವಿಲ್ಲ, ಅನುಷ್ಠಾನ ಆಗಲೇಬೇಕು, ಆದರೆ, ಯುವನಿಧಿ ಯೋಜನೆ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ ಎಂದರು.
ಗ್ಯಾರಂಟಿಗಳಿಗೆ ಹಣ
ಪರಿಶಿಷ್ಟ ಜಾತಿ, ಪಂಗಡದ ಹಣ ಗ್ಯಾರಂಟಿಗಳಿಗೆ ಬಳಸಲಾಗಿದೆ ಎಂಬುದಾಗಿ ಆ ಸಮಾಜದ ಮುಖಂಡರು ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದ್ದಾರೆ.
ಯೋಗ್ಯತೆಗೆ ಬೆಂಗಳೂರಿನ ಗುಂಡಿ ಮುಚ್ಚಲು ಸಾಧ್ಯವಾಗುತ್ತಿಲ್ಲ, ಭೂಗತ ಟನೆಲ್ ನಿರ್ಮಾಣದ ಮಾತುಗಳನ್ನು ಆಡುತ್ತಿದ್ದಾರೆ, ಶಾಸಕರಿಗೆ ಅಭಿವೃದ್ಧಿ ಅನುದಾನ ನೀಡುತ್ತಿಲ್ಲ, ಮುಖ್ಯಮಂತ್ರಿ ಸುಳ್ಳಿನ ಸರದಾರರಾಗಿದ್ದಾರೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಕುರ್ಚಿಗೆ ಭರ್ಜರಿ ಪೈಪೋಟಿ ನಡೆದಿದೆ, ಸಿದ್ದರಾಮಯ್ಯ ಪೂರ್ಣಾವಧಿಗೆ ಹಲವರು ಅಡ್ಡಿ ಮಾಡುತ್ತಿದ್ದಾರೆ, ಎಲ್ಲರೂ ತಮ್ಮ ಪರ ಇದ್ದಾರೆಂಬ ಭ್ರಮೆಯಿಂದ ಹೊರ ಬರಬೇಕಿದೆ.
ಹೈಕಮಾಂಡ್‌ಗೇ ಎಚ್ಚರಿಕೆ
ಒಂದೆಡೆ ಕಾಂಗ್ರೆಸ್ ಹೈಕಮಾಂಡ್ ಸುಪ್ರೀಂ ಎನ್ನುತ್ತಾರೆ, ಇನ್ನೊಂದೆಡೆ ಸಿದ್ದರಾಮಯ್ಯ ಬೆಂಬಲಿಗರು ಹೈಕಮಾಂಡ್‌ಗೇ ಎಚ್ಚರಿಕೆ ನೀಡುತ್ತಾರೆ, ತಮ್ಮ ಮಾತು ಕೇಳದಿದ್ದರೆ, ನಮ್ಮ ದಾರಿ ನಮಗೆ ಎಂಬ ಎಚ್ಚರಿಕೆ ನೀಡುತ್ತಾರೆ, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯಲಿವೆ.
ಲೋಕಸಭಾ ಚುನಾವಣೆ, ವಿಧಾನಸಭಾ ಉಪಚುನಾವಣೆ ಬಂದಾಗ ಮಾತ್ರ ಗ್ಯಾರಂಟಿ ಹಣ ಹಾಕುತ್ತಾರೆ, ಜಿಲ್ಲಾ, ತಾಲ್ಲೂಕು ಪಂಚಾಯತ್ ಚುನಾವಣೆಗಳು ಬರುತ್ತಿದ್ದು, ಆಗ ಹಣ ವರ್ಗಾವಣೆ ಮಾಡಲಿದ್ದು, ರಾಜ್ಯದ ಜನರನ್ನು ಭಿಕ್ಷುಕರಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಭೀಕರ ಬರಗಾಲದ ಸೂಚನೆಗಳು ಈಗಾಗಲೇ ಕಾಣುತ್ತಿವೆ, ಮುಖ್ಯಮಂತ್ರಿ ಹಾಗೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ, ನಿದ್ದೆಯಲ್ಲಿರುವ ಸರ್ಕಾರ ಕುಡಿಯುವ ನೀರಿನ ಸಮಸ್ಯೆಯನ್ನು ಕೂಡಲೇ ಬಗೆ ಹರಿಸಬೇಕು.
ಎಲ್ಲ ದರ ಹೆಚ್ಚಳ
ಆಸ್ತಿ ನೋಂದಣಿ ಶುಲ್ಕ ಶೇ.600ರಷ್ಟು ಹೆಚ್ಚಳವಾಗಿದೆ, ಆಸ್ತಿ ಗೈಡೆನ್ಸ್ ಮೌಲ್ಯ ಶೇ.30ರಷ್ಟು ಏರಿಕೆಯಾಗಿದೆ.
ವಾಹನಗಳ ನೋಂದಣಿ ದರ ಶೇ.10ರಷ್ಟು, ಆಸ್ಪತ್ರೆಗಳ ಸೇವಾ ಶುಲ್ಕ ಶೇ.5ರಷ್ಟು, ವಿದ್ಯುತ್ ದರ ಶೇ.14.5ರಷ್ಟು, ನೀರಿನ ದರ ಶೇ.30, ಹಾಲಿನ ದರ ಶೇ.15ರಷ್ಟು ಏರಿಕೆಯಾಗಿದೆ.
ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳ ಪ್ರಯಾಣ ದರ ಶೇ.15 ರಷ್ಟು ಹೆಚ್ಚಾಗಿದೆ, ಮೆಟ್ರೊ ರೈಲು ಪ್ರಯಾಣ ದರ ಗರಿಷ್ಠ ಏರಿಕೆ ಮಾಡಲಾಗಿದೆ, ಚೆನ್ನೈ, ಲಕ್ನೋ, ಮುಂಬೈ, ಕೊಲ್ಕತಾ ಮತ್ತು ದೆಹಲಿಯಲ್ಲಿ ಮೆಟ್ರೋ ರೈಲು ಪ್ರಯಾಣ ದರ ಏರಿಕೆ ಆಗಿಲ್ಲ, ರಾಜ್ಯ ಸರ್ಕಾರದ ಒತ್ತಾಯದ ಮೇಲೆ ಹೆಚ್ಚಳ ಮಾಡಲಾಗಿದೆ.
1.90 ಲಕ್ಷ ಕೋಟಿ ರೂ. ಸಾಲ
ಸಿದ್ದರಾಮಯ್ಯ ಸರ್ಕಾರ ಎರಡು ವರ್ಷದಲ್ಲಿ 1.90 ಲಕ್ಷ ಕೋಟಿ ರೂ. ಸಾಲ ಮಾಡಿದೆ, ವಿವಿಧ ಸರ್ಕಾರಿ ಇಲಾಖೆಗಳ ಆರು ಸಾವಿರ ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಇದ್ದು, ವಸೂಲಿಗೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿರುವುದಾಗಿ ಇಂಧನ ಸಚಿವ ಜಾರ್ಜ್ ಹೇಳಿದ್ದಾರೆ.
ಸರ್ಕಾರಿ ಸಿಬ್ಬಂದಿಗೆ ಸಂಬಳ ಕೊಡಲಾಗದ, ವಿದ್ಯುತ್ ಬಿಲ್ ಭರಿಸಲಾಗದ ದಾರುಣ ಸ್ಥಿತಿಗೆ ರಾಜ್ಯ ತಲುಪಿದ್ದು, ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಗ್ಯಾರಂಟಿಗಳಿಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ, ಬೆಂಗಳೂರಿನ ಜನತೆ ಅತಿಹೆಚ್ಚು ಆಸ್ತಿ ತೆರಿಗೆ ಕಟ್ಟುತ್ತಿದ್ದಾರೆ.
ಕೇಂದ್ರದತ್ತ ಬೊಟ್ಟು ಚಾಳಿ
ಎಲ್ಲ ಸಮಸ್ಯೆಗಳಿಗೂ ರಾಜ್ಯ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡುವ ಚಾಳಿ ಮುಂದುವರೆಸಿದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದು 2 ವರ್ಷಗಳಲ್ಲಿ 2ನೇ ಬಾರಿಗೆ ಹಾಲಿನ ದರ, ವಿದ್ಯುತ್ ದರ ಏರಿಕೆಗೆ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
ನಾಡು ಸುಭಿಕ್ಷವಾಗಿದೆ, ರಾಜ್ಯದ ಜನ ಸಂತೋಷದಲ್ಲಿದ್ದಾರೆ, ರೈತರು, ಬಡವರು ನೆಮ್ಮದಿಯಿಂದ ಇದ್ದಾರೆ, ಗ್ಯಾರಂಟಿಗಳ ಅನುಷ್ಠಾನ ಪರಿಣಾಮವಾಗಿ ಎಲ್ಲ ವರ್ಗದ ಜನತೆ ಸಂತಸದಿಂದಿದ್ದಾರೆ ಎಂಬ ಭ್ರಮೆಯಲ್ಲಿ ಮುಖ್ಯಮಂತ್ರಿ ಮಾತನಾಡುತ್ತಾರೆ.
ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂ. ಐದಾರು ತಿಂಗಳಿಂದ ಫಲಾನುಭವಿಗಳಿಗೆ ನೀಡಿಲ್ಲ, 5 ಕೆ.ಜಿ. ಅಕ್ಕಿ ಹಣವನ್ನೂ ಕೊಡುತ್ತಿಲ್ಲ.
ಈ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 7ರಂದು 16ನೇ ಬಜೆಟ್ ಮಂಡಿಸುವ ಮೂಲಕ ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದ ಕೀರ್ತಿ ಮತ್ತು ದಾಖಲೆ ನಿರ್ಮಿಸಲು ಹೊರಟಿದ್ದಾರೆ ಎಂದರು.