ಬೆಂಗಳೂರು:ರಾಜ್ಯ ಸರ್ಕಾರ ಗ್ಯಾರಂಟಿಗಳ ಭ್ರಮೆಯಿಂದ ಹೊರಬಂದು ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿರುವ ನಾಡಿನ ರೈತರ ಸಂಕಷ್ಟ ನಿವಾರಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ರೈತರ ಪಂಪ್‌ಸೆಟ್‌ಗಳಿಗೆ ಆರೇಳು ಗಂಟೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಸರ್ಕಾರದಿಂದ ಆಗುತ್ತಿಲ್ಲ, ಯಾವಾಗ ಕರೆಂಟ್ ಬರುತ್ತದೆ, ಯಾವಾಗ ಇರುವುದಿಲ್ಲ ಎಂಬ ಮಾಹಿತಿಯೇ ಇಲ್ಲ.
ರಾತ್ರಿ 12 ಗಂಟೆಯಾದರೂ ವಿದ್ಯುತ್ ಇಲ್ಲ
ರಾತ್ರಿ 10 ಗಂಟೆಯಿಂದ ವಿದ್ಯುತ್ ಕೊಡುವುದಾಗಿ ಆಶ್ವಾಸನೆ ನೀಡುತ್ತಾರೆ, ಆದರೆ, ರೈತರು ಹೊಲದಲ್ಲಿ ರಾತ್ರಿ 12 ಗಂಟೆವರೆಗೆ ಕಾಯ್ದರೂ ವಿದ್ಯುತ್ ಬರುವುದಿಲ್ಲ.
ಸರ್ಕಾರ ರೈತರನ್ನು ಸಂಕಷ್ಟಕ್ಕೆ ದೂಡುತ್ತಿದೆ, ವಿದ್ಯುತ್ ಅಭಾವ ನೀಗಿಸಲು ಹೊರರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡಬೇಕಿದೆ ಎಂದರು.
ಇನ್ನು ಬೆಂಗಳೂರು ಅಭಿವೃದ್ಧಿ ವಿಷಯದಲ್ಲಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಡಿ.ಕೆ.ಶಿವಕುಮಾರ್, ಭಗವಂತನೇ ಭೂಮಿಗೆ ಅವತರಿಸಿ ಬಂದರೂ ಬೆಂಗಳೂರನ್ನು ಉದ್ಧಾರ ಮಾಡಲು ಆಗುವುದಿಲ್ಲ ಎಂದಿರುವುದು, ಸರ್ಕಾರದ ಆಡಳಿತ ವೈಖರಿಗೆ ಸಾಕ್ಷಿಯಾಗಿದೆ.
ಜಗತ್ತು ಭಾರತವನ್ನು ಬೆಂಗಳೂರಿನ ಮೂಲಕ ನೋಡುತ್ತದೆ ಎನ್ನುವವರು, ಈಗ ಇಂತಹ ಹೇಳಿಕೆ ನೀಡುತ್ತಿರುವುದು ಸಹಜವಾಗಿ ಜನರಿಗೆ ಬೇಸರ ತಂದಿದೆ.
ನಾಚಿಕಗೇಡಿನ ಸಂಗತಿ
ಬೆಂಗಳೂರನ್ನು ಸಿಂಗಾಪುರ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದವರು, ಈಗ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ನಾಚಿಕಗೇಡಿನ ಸಂಗತಿ.
ಕಾಂಗ್ರೆಸ್ ಸರ್ಕಾರದ ಯೋಗ್ಯತೆಗೆ ಬೆಂಗಳೂರು ಮಹಾನಗರದಲ್ಲಿ ಗುಂಡಿ ಮುಚ್ಚಲು ಸಾಧ್ಯವಾಗುತ್ತಿಲ್ಲ, ಅಭಿವೃದ್ಧಿ ಆಗುತ್ತಿಲ್ಲ, ಶಾಸಕರಿಗೆ ಹಣ ಕೊಡುತ್ತಿಲ್ಲ, ಇವರು ಅಭಿವೃದ್ಧಿ ಬಗ್ಗೆ ಮಾತನಾಡುವುದೇ ಒಂದು ದುರಂತ ಎಂದರು.
ಎಬಿವಿಪಿ ಆಯೋಜಿಸಿದ್ದ ದುಂಡು ಮೇಜಿನ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣಕಾಸಿನ ಮುಗ್ಗಟ್ಟಿನಿಂದ 9 ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ಕಾಂಗ್ರೆಸ್ ಸರ್ಕಾರ ನುಚ್ಚುನೂರು ಮಾಡಿದೆ ಎಂದು ಟೀಕಿಸಿದರು.
9 ವಿವಿ ಮುಚ್ಚುವ ನಿರ್ಧಾರ
ಮಂಡ್ಯ, ಚಾಮರಾಜನಗರ, ಕೊಡಗು ಸೇರಿದಂತೆ 9 ಸರ್ಕಾರಿ ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ತೀರ್ಮಾನ ಕೈಗೊಳ್ಳಲಾಗಿದೆ.
ಈ ವಿವಿಗಳ ಅಭಿವೃದ್ಧಿ ಮತ್ತು ಮೂಲಸೌಕರ್ಯಕ್ಕೆ ಮುಂದಿನ ಐದು ವರ್ಷಗಳಲ್ಲಿ 350 ಕೋಟಿ ರೂ.ಗಳನ್ನು ಸರ್ಕಾರ ಭರಿಸಬೇಕಿತ್ತು, ಆದರೆ, ಇವರ ಬಳಿ ಹಣವಿಲ್ಲದ ಕಾರಣ ಸಬೂಬುಗಳನ್ನು ಮುಂದಿಟ್ಟುಕೊಂಡು ಗ್ರಾಮೀಣ ವಿವಿಗಳನ್ನು ಮುಚ್ಚುವ ಕೆಲಸಕ್ಕೆ ಕೈಹಾಕಿದೆ.
ಸಂಪುಟ ಉಪಸಮಿತಿ ಕೊಟ್ಟ ವರದಿ ಹಿನ್ನೆಲೆಯಲ್ಲಿ ವಿವಿಗಳನ್ನು ಮುಚ್ಚುವುದು ಅವೈಜ್ಞಾನಿಕ ಹಾಗೂ ಅವಿವೇಕತನದ ನಿರ್ಧಾರ ಎಂದರು.
ಹೊಸದಾಗಿ 10 ವಿವಿ
ಹಿಂದಿನ ಬಿಜೆಪಿ ಆಡಳಿತದಲ್ಲಿ ಅಂದಿನ ಶಿಕ್ಷಣ ಸಚಿವರಾಗಿದ್ದ ಡಾ.ಅಶ್ವತ್ಥನಾರಾಯಣ್, ಜಿಲ್ಲೆಗೊಂದು ವಿಶ್ವವಿದ್ಯಾಲಯ ಎಂಬ ಘೋಷಣೆಯೊಂದಿಗೆ ಹೊಸದಾಗಿ 10 ವಿವಿಗಳನ್ನು ಆರಂಭಿಸಿದ್ದರು.
ಅವು ತಮ್ಮ ಜಿಲ್ಲಾ ಕೇಂದ್ರಗಳಲ್ಲಿ ಶಿಕ್ಷಣ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವು, ಆದರೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಏಕಾಏಕಿ, ಬೀದರ್ ಹೊರತುಪಡಿಸಿ ಉಳಿದ 9 ವಿವಿಗಳನ್ನು ಮುಚ್ಚಲು ತೀರ್ಮಾನಿಸಿದೆ.
ಸರ್ಕಾರದ ನಿರ್ಧಾರದ ವಿರುದ್ಧ ನಾವು ಹೋರಾಟ ಮಾಡುತ್ತೇವೆ, ಯಾವುದೇ ಕಾರಣಕ್ಕೂ ವಿವಿಗಳನ್ನು ಮುಚ್ಚಲು ಬಿಡುವುದಿಲ್ಲ.
ಮಕ್ಕಳ ಶಿಕ್ಷಣ ಕನಸಿಗೆ ಕಲ್ಲು
ಪಕ್ಷಾತೀತವಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ, ಗ್ರಾಮೀಣ ಮಕ್ಕಳ ಉನ್ನತ ಮಟ್ಟದ ಶಿಕ್ಷಣದ ಕನಸಿಗೆ ಕಲ್ಲು ಹಾಕಲು ಬಿಡುವುದಿಲ್ಲ.
ವಿದ್ಯಾರ್ಥಿ ಪರಿಷತ್ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ರಾಜಕೀಯೇತರ ನೆಲೆಯಿಂದ ಮಾಡುವ ಹೋರಾಟವನ್ನು ಬಿಜೆಪಿ ಬೆಂಬಲಿಸುತ್ತದೆ ಎಂದರು.