ಕರ್ನಾಟಕದ ಕೆಲವು ಸಚಿವರಿಗೆ ಮಲ್ಲಿಕಾರ್ಜುನ ಖರ್ಗೆ ಖಡಕ್ ಎಚ್ಚರಿಕೆ
ಬೆಂಗಳೂರು:ಪಕ್ಷಕ್ಕೆ ಮಾರಕ ಆಗುವಂತಹ ಹೇಳಿಕೆಗಳನ್ನು ನಿಲ್ಲಿಸದಿದ್ದರೆ ಮಂತ್ರಿ ಸ್ಥಾನ ತೊರೆದು ಮನೆಗೆ ಹೋಗಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದ ಕೆಲವು ಸಚಿವರುಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅಧಿಕಾರ ಹಂಚಿಕೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸದಾ ಹೇಳಿಕೆ ನೀಡಿ, ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ಮಾಡುತ್ತಿರುವ ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಡಾ.ಎಚ್.ಸಿ.ಮಹದೇವಪ್ಪ ಹಾಗೂ ಸತೀಶ್ ಜಾರಕಿಹೊಳಿ ಅವರುಗಳಿಗೆ ಖರ್ಗೆ ಈ ಸಂದೇಶ ರವಾನೆ ಮಾಡಿದ್ದಾರೆ.
ಎಐಸಿಸಿಯಿಂದ ಕಠಿಣ ಕ್ರಮ
ಸಚಿವರಿಗಷ್ಟೇ ಅಲ್ಲ, ಕೆಲವು ಶಾಸಕರಿಗೂ ಎಐಸಿಸಿಯಿಂದ ಎಚ್ಚರಿಕೆ ರವಾನೆ ಆಗಿದೆ, ಇನ್ನು ಮುಂದೆ ಯಾವುದೇ ಸಚಿವರು ಹಾಗೂ ಶಾಸಕರು ಅನಗತ್ಯ ಹೇಳಿಕೆ ನೀಡಿದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಈ ಹಿಂದೆ ಶಿವಕುಮಾರ್ ವಿರುದ್ಧ ಸತತವಾಗಿ ಹೇಳಿಕೆ ನೀಡಿದ್ದಲ್ಲದೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಶಾಸಕರ ಸಭೆ ಹಾಗೂ ಬೃಹತ್ ಸಮಾವೇಶ ನಡೆಸಲು ಮುಂದಾದಾಗಲೇ ಈ ಸಚಿವರುಗಳಿಗೆ ಖರ್ಗೆ, ಬಾಯಿ ಮುಚ್ಚಿಕೊಂಡು ಕೊಟ್ಟಿರುವ ಕೆಲಸ ಮಾಡಿ ಎಂದಿದ್ದರು.
ಮತ್ತೆ ಇದೇ ಚಾಳಿ ಪುನರಾವರ್ತನೆಯಾದಾಗ ಬೆಳಗಾವಿಯ ಎಐಸಿಸಿ ಅಧಿವೇಶನ ವೇಳೆ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಇಂತಹ ಒಂದಿಬ್ಬರು ಸಚಿವರನ್ನು ಸಂಪುಟದಿಂದ ಹೊರಹಾಕಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದರು.
ಸಚಿವರ ಗೌಪ್ಯ ಸಭೆಗಳು
ಇದಾದ ನಂತರವೂ ಡಾ.ಪರಮೇಶ್ವರ್ ಅವರ ವಿಧಾನಸೌಧದ ಕಚೇರಿಯಲ್ಲಿ ಈ ಸಚಿವರುಗಳು ಗೌಪ್ಯ ಸಭೆ ನಡೆಸಿದ್ದರು.
ಸಭೆಯ ನಂತರದ ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಸಂಬಂಧಿಸಿದಂತೆ ಈ ಸಚಿವರ ಪಡೆ ಬಹಿರಂಗವಾಗೇ ಅಪಸ್ವರ ಎತ್ತಿದ್ದವು.
ಅಷ್ಟೇ ಅಲ್ಲ, ಸಿದ್ದರಾಮಯ್ಯ ಅವರೇ ಪೂರ್ಣಾವಧಿಗೆ ಮುಖ್ಯಮಂತ್ರಿ ಆಗಿರಬೇಕು ಎಂಬ ಹೇಳಿಕೆ ನೀಡಿದ್ದಲ್ಲದೆ, ವರಿಷ್ಠರ ಮನವೊಲಿಸಲು ಈ ಸಚಿವರು ಒಬ್ಬರ ನಂತರ ಒಬ್ಬರು ದೆಹಲಿ ಯಾತ್ರೆಯನ್ನೂ ಮಾಡಿದರು.
ಸಂದೇಶ ರವಾನೆ
ಕಳೆದ ಮೂರು ದಿನಗಳಿಂದ ದೆಹಲಿಯಲ್ಲೇ ಬಿಡಾರ ಹೂಡಿದ್ದ ಡಾ.ಪರಮೇಶ್ವರ್, ವರಿಷ್ಠರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಖರ್ಗೆ ಮತ್ತು ವೇಣುಗೋಪಾಲ್ ಈ ಸಂದೇಶ ರವಾನೆ ಮಾಡಿದರು ಎನ್ನಲಾಗಿದೆ.
ನಗರಕ್ಕೆ ಹಿಂತಿರುಗುತ್ತಿದ್ದಂತೆ ಡಾ.ಪರಮೇಶ್ವರ್ ಹಾಗೂ ರಾಜಣ್ಣ, ಮುಖ್ಯಮಂತ್ರಿ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಗೌಪ್ಯ ಮಾತುಕತೆ ನಡೆಸಿದರು.
ಮುಖ್ಯಮಂತ್ರಿ ಭೇಟಿ ಮಾಡಿ ಹೊರಬಂದ ನಂತರ ಮಾಧ್ಯಮದವರ ಬಳಿ ಪಕ್ಷದ ಆಂತರಿಕ ವಿಚಾರ ಕುರಿತು ಯಾವುದೇ ಹೇಳಿಕೆ ನೀಡಲು ಇವರುಗಳು ನಿರಾಕರಿಸಿದರು.
ಬಾಯಿ ಬಿಡಲೇ ಇಲ್ಲ
ಸದಾ ವಿವಾದದಲ್ಲೇ ಇರುವ ರಾಜಣ್ಣ ಹಾಗೂ ಸತೀಶ್ ಜಾರಕಿಹೊಳಿ ಕೂಡಾ ಇಂದು ಮಾಧ್ಯಮದವರ ಮುಂದೆ ಬಾಯಿ ಬಿಡಲೇ ಇಲ್ಲ.
ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ಸಚಿವರುಗಳು, ವರಿಷ್ಠರು ನೀಡಿದ ಎಚ್ಚರಿಕೆ ಮತ್ತು ಸಂದೇಶದ ಬಗ್ಗೆಯೇ ಬಹುತೇಕ ಚರ್ಚೆ ಮಾಡಿದ್ದಾರೆನ್ನಲಾಗಿದೆ.