ಬೆಂಗಳೂರು:ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಇನ್ನು ಮುಂದೆ ಪ್ಲ್ಯಾಸ್ಟಿಕ್ ಬಳಸದಂತೆ ರಾಜ್ಯ ಸರ್ಕಾರ ನಿಷೇಧಿಸಿದೆ.
ಈ ಸಂಬಂಧ ಸುದ್ದಿಗಾರರಿಗೆ ಮಾಹಿತಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಇಡ್ಲಿ, ವಡೆ, ಸಾಂಬಾರ್, ಕಾಫಿ, ಟೀ ಸೇರಿದಂತೆ ಪ್ಲ್ಯಾಸ್ಟಿಕ್ ಚೀಲಗಳಲ್ಲಿ ಪಾರ್ಸೆಲ್ ನೀಡುವುದೂ ಮಾರಣಾಂತಿಕ ರೋಗಕ್ಕೆ ಕಾರಣವಾಗಲಿದೆ ಎಂದಿದ್ದಾರೆ.
ಇಡ್ಲಿ ತಯಾರಿಕೆಗೆ ಪ್ಲ್ಯಾಸ್ಟಿಕ್
ಇಡ್ಲಿ ತಯಾರಿಕೆ ವೇಳೆ ಪ್ಲ್ಯಾಸ್ಟಿಕ್ ಬಳಸುತ್ತಿರುವುದು ಅನೇಕ ರೋಗಗಳಿಗೆ ಎಡೆ ಮಾಡಿದೆ, ಅದರಲ್ಲೂ, ರಸ್ತೆ ಬದಿಯ ತಿಂಡಿ ಅಂಗಡಿಗಳು ಪ್ಲ್ಯಾಸ್ಟಿಕ್ ಬಳಕೆ ಮಾಡಿ ಆಹಾರ ತಯಾರಿಕೆ ಹಾಗೂ ಪಾರ್ಸೆಲ್‌ಗಳಿಗೆ ಬಳಸುತ್ತಿರುವುದು ಅಪಾಯಕಾರಿಯಾಗಿದೆ.
ಹೋಟೆಲ್ ಇಡ್ಲಿ ಮತ್ತಿತರ ಆಹಾರಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಅಪಾಯಕಾರಿ ಪ್ಲ್ಯಾಸ್ಟಿಕ್ ಅಂಶಗಳಿರುವುದು ಪತ್ತೆಯಾಗಿದೆ.
ಪ್ರಯೋಗಾಲಯದ ಪರೀಕ್ಷೆ ವೇಳೆ ಇಡ್ಲಿ ಮತ್ತಿತರ ಆಹಾರಗಳಲ್ಲಿ ಕಾರ್ಸಿನೋಜೆನಿಕ್ ಅಂಶ ಪತ್ತೆಯಾಗಿದೆ.
ಹಾನಿಕಾರಕ ಅಂಶ ಪತ್ತೆ
ಈ ಹಾನಿಕಾರಕ ಅಂಶದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಆಗಿರುವುದು ಪತ್ತೆಯಾಗಿದೆ, ಮೊದಲು ಇಡ್ಲಿಯನ್ನು ಹತ್ತಿ ಬಟ್ಟೆ ಬಳಸಿ ಬೇಯಿಸುತ್ತಿದ್ದರು, ಆದರೆ, ನಂತರ ಸುಲಭ ವಿಧಾನ ಕಂಡುಕೊಂಡು ಹೋಟೆಲ್ ಉದ್ಯಮ ಪ್ಲ್ಯಾಸ್ಟಿಕ್ ಬಳಕೆಗೆ ಮೊರೆ ಹೋಗಿದೆ.
ಇದು ಇಡ್ಲಿ ತಯಾರಿಕೆಗೆ ಮಾತ್ರ ಸೀಮಿತವಾಗಿಲ್ಲ, ಪ್ಲ್ಯಾಸ್ಟಿಕ್ ಬಳಕೆಯಿಂದ ಆಹಾರ ಅಸುರಕ್ಷಿತ ಎಂಬುದು ಪ್ರಯೋಗಾಲದಿಂದ ದೃಢಪಟ್ಟಿದೆ.
ಪ್ಲ್ಯಾಸ್ಟಿಕ್ ಹಾಳೆ ಶಾಖಕ್ಕೆ ಒಡ್ಡಿಕೊಳ್ಳುವುದರಿಂದ ಹಾನಿಕಾರಕ ವಸ್ತು ಹೊರಸೂಸುತ್ತದೆ, ಇದು ಕ್ಯಾನ್ಸರ್ ರೋಗಕ್ಕೆ ಮೂಲ ಕಾರಣ ಎಂದು ತಜ್ಞರು ಹೇಳಿದ್ದಾರೆ.
ತಜ್ಞರು ನೀಡಿರುವ ಶಿಫಾರಸಿನ ಮೇರೆಗೆ ಆಹಾರ ಪದಾರ್ಥಗಳ ಉತ್ಪಾದನಾ ಕೇಂದ್ರ, ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಪ್ಲ್ಯಾಸ್ಟಿಕ್ ನಿಷೇಧ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗುಂಡೂರಾವ್ ತಿಳಿಸಿದರು.