ಬೆಂಗಳೂರು:ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 83ನೇ ಹುಟ್ಟುಹಬ್ಬ ಸಂದರ್ಭವನ್ನು ಅವರ ಪುತ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಲಿಂಗಾಯತ ಸಮುದಾಯಕ್ಕೆ ತಮ್ಮ ತಂದೆಯೇ ನಾಯಕ ಎಂಬುದನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಇತರರು ಲಿಂಗಾಯತ ಮುಖಂಡರ ಪರ್ಯಾಯ ಸಭೆ ಕರೆದು ಯಡಿಯೂರಪ್ಪ ಕುಟುಂಬಕ್ಕೆ ಟಾಂಗ್ ನೀಡಲು ಹೊರಟಿದ್ದರು.

ವಿರೋಧಿ ಬಣಕ್ಕೆ ಎದಿರೇಟು
ಯಡಿಯೂರಪ್ಪ ಅವರ ಹುಟ್ಟುಹಬ್ಬವನ್ನು ವೇದಿಕೆಯನ್ನಾಗಿ ಬಳಸಿಕೊಂಡ ವಿಜಯೇಂದ್ರ, ಲಿಂಗಾಯತ ಸಮುದಾಯದ ಪಕ್ಷದ ಮುಖಂಡರು ಹಾಗೂ ಜನಪ್ರತಿನಿಧಿಗಳನ್ನು ಒಗ್ಗೂಡಿಸಿ, ತಮ್ಮ ವಿರೋಧಿ ಬಣಕ್ಕೆ ಎದಿರೇಟು ಕೊಡುವಲ್ಲಿ ಯಶಸ್ವಿಯಾದರು.
ಯಡಿಯೂರಪ್ಪ ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದರು, ಆದರೆ, ಇಂದು ಡಾಲರ‍್ಸ್ ಕಾಲೋನಿಯ ಅವರ ನಿವಾಸದ ಹುಲ್ಲುಹಾಸಿನ ಅಂಗಣದಲ್ಲಿ ಭರ್ಜರಿಯಾಗಿ ಆಚರಣೆ ಮಾಡುವ ಮೂಲಕ ಲಿಂಗಾಯತ ಸಮುದಾಯದಲ್ಲಿ ತಮ್ಮ ಬಣವೇ ಮೇಲುಗೈ ಎಂಬುದನ್ನು ವಿಜಯೇಂದ್ರ ಸಾಭೀತುಪಡಿಸಿದರು.
ಹಲವು ನಾಯಕರ ಉಪಸ್ಥಿತಿ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪಕ್ಷದ ಹಲವು ನಾಯಕರು ಉಪಸ್ಥಿತರಿದ್ದು, ಯಡಿಯೂರಪ್ಪ ಅವರಿಗೆ ಶುಭ ಹಾರೈಸಿದರು.
ಇದೇ ವೇಳೆ ಪಕ್ಷದ ಲಿಂಗಾಯತ ಶಾಸಕರು, ಮಾಜಿ ಶಾಸಕರಲ್ಲದೆ, ಅನೇಕ ಮುಖಂಡರು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿ, ತಮ್ಮ ನಾಯಕನಿಗೆ ಶುಭ ಹಾರೈಸಿದರು.
ಹುಟ್ಟುಹಬ್ಬವನ್ನು ರಾಜಕೀಯ ವೇದಿಕೆಯನ್ನಾಗಿ ಮಾರ್ಪಡಿಸಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಇದೇ ವೇಳೆ ಸಮುದಾಯದ ಮುಖಂಡರ ಸಭೆಯನ್ನೂ ನಡೆಸಿದರು.
ಪಕ್ಷವನ್ನು ಅಧಿಕಾರಕ್ಕೆ ತಂದವರು
ವೀರಶೈವ/ಲಿಂಗಾಯತ ಸಮುದಾಯಕ್ಕೆ ರಾಜ್ಯದಲ್ಲಿ ಯಡಿಯೂರಪ್ಪ ಒಬ್ಬರೇ ನಾಯಕರು, ಅವರು ಪಕ್ಷವನ್ನು ಅಧಿಕಾರಕ್ಕೆ ತಂದವರು.
ಕೆಲವು ದುಷ್ಟ ಶಕ್ತಿಗಳು ಸಮುದಾಯ ಒಡೆಯುವ ಕೆಲಸ ಮಾಡುತ್ತಿವೆ, ರಾಜ್ಯದಲ್ಲಿ ಲಿಂಗಾಯತ ಸಮುದಾಯಕ್ಕೆ ಯಡಿಯೂರಪ್ಪ ಅವರೇ ಪ್ರಶ್ನಾತೀತ ನಾಯಕ ಎಂಬುದಾಗಿ ಸಭೆ ನಿರ್ಣಯ ಕೈಗೊಂಡಿತು.
ಯಡಿಯೂರಪ್ಪ ರಾಜಕೀಯವಾಗಿ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ, ಆದರೆ, ಅವರನ್ನು ನಮ್ಮವರೇ ಈ ರೀತಿ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ.
ರಾಜ್ಯಾದ್ಯಂತ ಸಭೆ
ವಿರೋಧಿಗಳಿಗೆ ವಿಜಯೇಂದ್ರ ಅವರ ಶಕ್ತಿ ಏನು ಎಂಬುದನ್ನು ತೋರಿಸಲು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಭೆಗಳನ್ನು ನಡೆಸಲು ಸಭೆ ತೀರ್ಮಾನಿಸಿತು.
ಈ ಹೋರಾಟದ ಮೂಲಕ ಯಡಿಯೂರಪ್ಪ, ವಿಜಯೇಂದ್ರ ಪರವಾಗಿ ಸಮಯದಾಯ ಇದೆ ಎಂಬುದನ್ನು ತೋರಿಸುತ್ತೇವೆ, ಯಾರೋ ಒಬ್ಬಿಬ್ಬರು ಸಭೆ ನಡೆಸಿದಾಕ್ಷಣ ನಮ್ಮ ಬಲ ಕುಗ್ಗುವುದಿಲ್ಲ.
ವಿರೋಧಿಗಳ ಸಭೆಗೆ ಬಂದವರು, ಬರುವವರೂ ಲಿಂಗಾಯತರೇ ಅಲ್ಲ, ಸಮುದಾಯದ ಬೆಂಬಲ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರಿಗೆ ಮಾತ್ರ ಎಂಬುದನ್ನು ಸಭೆ ಅನುಮೋದಿಸಿತು.