ಬೆಂಗಳೂರು:ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ರನ್ಯಾ ರಾವ್ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ, ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದೆ.
ದೆಹಲಿಯಿಂದ ಬಂದ ಇಬ್ಬರು ಅಧಿಕಾರಿಗಳು ರಾಜ್ಯದಲ್ಲಿನ ಸಿಬಿಐ ಕೇಂದ್ರ ಕಚೇರಿ ಸಿಬ್ಬಂದಿ ಜೊತೆಗೂಡಿ ನಿನ್ನೆ ರಾತ್ರಿ ನಗರದ ಲ್ಯಾವೆಲ್ಲಿ ರಸ್ತೆಯಲ್ಲಿನ ಅವರ ಫ್ಲ್ಯಾಟ್ ಮತ್ತು ವಿಕ್ಟೋರಿಯಾ ಲೇಔಟ್‌ನಲ್ಲಿನ ಕಚೇರಿ ಪರಿಶೀಲಿಸಿದರು.
ಎಚ್ಚೆತ್ತ ಸರ್ಕಾರ
ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಸರ್ಕಾರ ರನ್ಯಾ ರಾವ್ ತಂದೆ, ಪೋಲಿಸ್ ಮಹಾನಿರ್ದೇಶಕ ರಾಮಚಂದ್ರ ರಾವ್ ಪಾತ್ರ ಕುರಿತು ತನಿಖೆಗೆ ಆದೇಶಿಸಿತು.
ಮತ್ತೊಂದೆಡೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜ್ಯ ಪೋಲಿಸರ ವೈಫಲ್ಯದ ಬಗ್ಗೆಯೂ ತನಿಖೆ ನಡೆಸುವಂತೆ ಸಿಐಡಿಗೆ ಸೂಚಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ತೀವ್ರಗೊಳಿಸುತ್ತಿದ್ದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಕರೆಸಿಕೊಂಡು ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿದಂತೆ ವಿವರ ಪಡೆದಿದ್ದಾರೆ.
ರಹಸ್ಯ ಮಾತುಕತೆ
ವಿಧಾನಸಭೆ ಕಲಾಪದಲ್ಲಿ ಭಾಗವಹಿಸಿದ್ದ ಡಾ.ಪರಮೇಶ್ವರ್ ಅವರನ್ನು ಮೊಗಸಾಲೆಯಲ್ಲಿನ ತಮ್ಮ ಕಚೇರಿಗೆ ಕರೆಸಿಕೊಂಡ ಮುಖ್ಯಮಂತ್ರಿ ರಹಸ್ಯ ಮಾತುಕತೆ ನಡೆಸಿದರು.
ಚಿನ್ನ ಕಳ್ಳಸಾಗಣೆಯಲ್ಲಿ ಇಬ್ಬರು ಸಚಿವರ ಪಾತ್ರ ಇದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ಹಾಗೂ ಹಿರಿಯ ಪೋಲಿಸ್ ಅಧಿಕಾರಿಗಳ ಜೊತೆಗೆ ಕೆಲವು ಉದ್ದಿಮೆದಾರರು ಕೈಜೋಡಿಸಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವರ ಜೊತೆ ಮುಖ್ಯಮಂತ್ರಿ ಚರ್ಚಿಸಿದರೆನ್ನಲಾಗಿದೆ.
ಪ್ರಕರಣದಲ್ಲಿ ಸಚಿವರ ಪಾತ್ರ ಇದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಮುಖ್ಯಮಂತ್ರಿ ಅವರು ನಿನ್ನೆಯೇ ಹಿರಿಯ ಪೋಲಿಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರಾದರೂ, ಗೃಹ ಸಚಿವರ ಜೊತೆ ಸಮಾಲೋಚನೆ ನಡೆಸಿರಲಿಲ್ಲ.
ಆಪ್ತರೊಂದಿಗೆ ಸಮಾಲೋಚನೆ
ಸಿಬಿಐ ರಂಗಪ್ರವೇಶ ಮಾಡುತ್ತಿದ್ದಂತೆ ಮುಖ್ಯಮಂತ್ರಿ ಅವರು, ಗೃಹ ಸಚಿವರೊಂದಿಗೆ ಮಾಹಿತಿ ಪಡೆದಿದ್ದಲ್ಲದೆ, ತಮ್ಮ ಕೆಲವು ಆಪ್ತ ಸಚಿವರೊಂದಿಗೆ ಸಮಾಲೋಚನೆ ಮಾಡಿದ್ದಾರೆ.
ದುಬೈನಿಂದ ಚಿನ್ನ ತಂದು ವಿಮಾನ ನಿಲ್ದಾಣದಲ್ಲಿ ವಿಐಪಿ ದ್ವಾರದ ಮೂಲಕ ಹೊರಬರುತ್ತಿದ್ದ ರನ್ಯಾ ರಾವ್ ಅವರನ್ನು ಕೇಂದ್ರ ಕಂದಾಯ ಗುಪ್ತಚರ ವಿಭಾಗ ವಶಕ್ಕೆ ಪಡೆದು ತನಿಖೆ ನಡೆಸಿತ್ತು.
ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸುವಲ್ಲಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆಯಲ್ಲಿ ತೊಡಗಿದ್ದ ಮಾಹಿತಿ ಕಲೆ ಹಾಕಿದ್ದಲ್ಲದೆ, ಆರೋಪಿಗೆ ಪ್ರಭಾವೀ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಹಾಗೂ ಉದ್ದಮೆದಾರರ ಸಂಪರ್ಕ ಇರುವುದು ತನಿಖೆಯಿಂದ ಬೆಳಕಿಗೆ ಬಂದಿತು.
ರಾಷ್ಟ್ರವ್ಯಾಪಿ ಹಬ್ಬಿದೆ
ಚಿನ್ನ ಕಳ್ಳಸಾಗಣೆ ಕೇವಲ ಬೆಂಗಳೂರಿಗೆ ಸೀಮಿತವಾಗದೆ, ರಾಷ್ಟ್ರವ್ಯಾಪಿ ಹಬ್ಬಿದೆ, ಅಲ್ಲದೆ, ದುಬೈ ವಿಮಾನ ನಿಲ್ದಾಣದಲ್ಲೂ ಆರೋಪಿಗೆ ಸಹಾಯ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ.)ಕ್ಕೆ ಕಂದಾಯ ಗುಪ್ತಚರ ವಿಭಾಗ ನೀಡಿತು.
ಕರ್ನಾಟಕದಲ್ಲಿ ಸಿಬಿಐ ತನಿಖೆಗೆ ಮುಕ್ತ ಅವಕಾಶವನ್ನು ರಾಜ್ಯ ಸರ್ಕಾರ ಕೊಡುವುದಿಲ್ಲ ಎಂಬ ಹಿನ್ನೆಲೆಯಲ್ಲಿ ಗುಪ್ತಚರ ವಿಭಾಗದ ದೂರನ್ನೇ ಸಿಬಿಐ ಸ್ವಯಂ ಪ್ರೇರಿತವಾಗಿ ದೆಹಲಿಯಲ್ಲಿ ದಾಖಲೆ ಮಾಡಿಕೊಂಡು ತನಿಖೆ ಕೈಗೆತ್ತಿಕೊಂಡಿದೆ.
