ಬೆಂಗಳೂರು:ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಿಲುವನ್ನು ಪ್ರತಿಭಟಿಸಿ ತಮಿಳುನಾಡು ಮುಖ್ಯಮಂತ್ರಿ ಸ್ಟ್ಯಾಲಿನ್ ಕರೆದಿರುವ ಸಭೆ ಮತ್ತು ಹೋರಾಟಕ್ಕೆ ಕರ್ನಾಟಕದ ಬೆಂಬಲವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಕರ್ನಾಟಕ ಹಿತಾಸಕ್ತಿಗೆ ವಿರುದ್ಧವಾಗಿ ಪ್ರಜಾಪ್ರಭುತ್ವ ದುರ್ಬಲಗೊಳಿಸುವ, ಸಂವಿಧಾನ ಒಕ್ಕೂಟ ತತ್ವಕ್ಕೆ ವಿರುದ್ಧವಾದ ಕೇಂದ್ರ ಸರ್ಕಾರದ ಎಲ್ಲಾ ನಡೆಗಳನ್ನು ಮುಲಾಜಿಲ್ಲದೆ ಖಂಡಿಸುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ದಕ್ಷಿಣ ರಾಜ್ಯಗಳ ಸಭೆ
ತಮಿಳುನಾಡು ಅರಣ್ಯ ಸಚಿವ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯ ಅಬ್ದುಲ್ಲಾ ಇಸ್ಮಾಯಿಲ್ ಅವರು ಇಂದು ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನೀತಿ ಹಾಗೂ ದಕ್ಷಿಣ ರಾಜ್ಯಗಳನ್ನು ಹತ್ತಿಕ್ಕುವ ಕಾರ್ಯ ಖಂಡನಾ ಸಭೆಗೆ ಆಹ್ವಾನ ನೀಡಿದರು.
ಇವರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಕ್ಷೇತ್ರ ಪುನರ್ ವಿಂಗಡಣೆ ಮತ್ತಿತರ ವಿಚಾರದಲ್ಲಿ ಧ್ವನಿ ಎತ್ತುವಂತೆ ಹಾಗೂ ಪ್ರತಿಭಟನೆಗೆ ಸಹಕರಿಸುವಂತೆ ಕೋರಿದ ಮನವಿಗೆ ನನ್ನ ಬೆಂಬಲ ಸೂಚಿಸಿದ್ದೇನೆ.
ತಮಿಳುನಾಡು ಮುಖ್ಯಮಂತ್ರಿ ದೂರವಾಣಿ ಮೂಲಕ ತಮ್ಮನ್ನು ಸಂಪರ್ಕಿಸಿ ಈ ವಿಷಯ ಚರ್ಚಿಸಿದರು, ದಕ್ಷಿಣ ರಾಜ್ಯಗಳ ಪ್ರತಿರೋಧಕ್ಕೆ ತಮ್ಮದೂ ಬೆಂಬಲ ಇದೆ ಎಂಬುದನ್ನು ಅವರಿಗೆ ತಿಳಿಸಿದ್ದೇನೆ ಎಂದರು.