ಬೆಂಗಳೂರು:ಸಾರ್ವಜನಿಕರ ತೆರಿಗೆ ಹಣವನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಸರ್ಕಾರ ಹಂಚಲು ಹೊರಟಿರುವುದನ್ನು ಖಂಡಿಸಿ ಬಿಜೆಪಿ-ಜೆಡಿಎಸ್ ಸದಸ್ಯರು ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸಿ, ರಾಜ್ಯಪಾಲರ ಮಧ್ಯೆಪ್ರವೇಶಕ್ಕೆ ಒತ್ತಾಯಿಸಿದ್ದಾರೆ.
ಗ್ಯಾರಂಟಿ ಯೋಜನೆ ಅನುಷ್ಟಾನ ಖಾತ್ರಿ ನೆಪದಲ್ಲಿ ವಾರ್ಷಿಕ ನೂರಾರು ಕೋಟಿ ರೂ.ಗಳನ್ನು ಪಕ್ಷದ ಕಾರ್ಯಕರ್ತರಿಗೆ ಹಂಚಲು ಹೊರಟಿದ್ದು ಇದನ್ನು ತಡೆಯುವಂತೆ ಬಿಜೆಪಿ-ಜೆಡಿಎಸ್ ಸದಸ್ಯರು ಇಂದು ರಾಜ್ಯಪಾಲರ ಮೊರೆ ಹೋದರು.
ಕೇವಲ ಪ್ರಚಾರಕ್ಕೆ ಸೀಮಿತ
ಗ್ಯಾರಂಟಿ ಯೋಜನೆ ಅನುಷ್ಟಾನ ಮುಂದಿಟ್ಟುಕೊಂಡು ಅಭಿವೃದ್ಧಿಯನ್ನೂ ಕೈಗೊಳ್ಳದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ, ಸಂಪನ್ಮೂಲ ಕ್ರೋಡೀಕರಣಕ್ಕೂ ಒತ್ತು ನೀಡದೆ, ಕೇವಲ ಪ್ರಚಾರಕ್ಕೆ ಸೀಮಿತಗೊಂಡು ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುತ್ತಿದೆ.
ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ತನ್ನ ಪಕ್ಷದ ಕಾರ್ಯಕರ್ತರಿಗೆ ಬೊಕ್ಕಸದಿಂದ ಹಣ ಹಂಚಲು ಹೊರಟಿದ್ದಾರೆ.
ವಿಧಾನಮಂಡಲದ ಒಳಗೆ ವಿಷಯ ಪ್ರಸ್ತಾಪ ಮಾಡಿದರೂ ಬೆಲೆ ನೀಡದ ಸರ್ಕಾರ ತನ್ನ ನಿಲುವಿಗೆ ಅಂಟಿಕೊಂಡಿದ್ದು, ತಾವು ಮಧ್ಯೆಪ್ರವೇಶಿಸಿ ಇದನ್ನು ತಡೆಯಬೇಕೆಂದು ರಾಜ್ಯಪಾಲರನ್ನು ಕೋರಿದ್ದಾರೆ.

ರಾಜ್ಯಪಾಲರಿಗೆ ಮನವಿಪತ್ರ
ವಿಧಾನಮಂಡಲದ ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲುವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ, ಜೆಡಿಎಸ್‌ನ ಸಿ.ಆರ್.ಸುರೇಶ್ ಬಾಬು ಹಾಗೂ ಎಸ್.ಎಲ್.ಬೋಜೇಗೌಡ ಅವರ ನಾಯಕತ್ವದಲ್ಲಿ ಉಭಯ ಸದನಗಳ ಸದ್ಯಸರು ವಿಧಾನಸೌಧದಿಂದ ರಾಜಭವನಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಮನವಿಪತ್ರ ಸಲ್ಲಿಸಿದರು.
ರಾಜ್ಯಪಾಲರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಹಾಗೂ ಆರ್.ಅಶೋಕ್, ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷರಿಂದ ಶಾಸಕರ ಹಕ್ಕು ಮೊಟಕುಗೊಳಿಸುವ ಕಾರ್ಯ ನಡೆದಿದೆ.
ಗ್ಯಾರಂಟಿ ಅನುಷ್ಟಾನದಲ್ಲಿ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಅಧ್ಯಕ್ಷರನ್ನು ನೇಮಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಅಸಂವಿಧಾನಿಕ ನಡೆ ಇಡುತ್ತಿದೆ ಎಂಬುದನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ.
ಕಾಂಗ್ರೆಸ್ ಸಮಿತಿಗಳ ನೇಮಕ
ಜನರು ಬೆವರು ಸುರಿಸಿ ದುಡಿದು ಕಟ್ಟಿದ ತೆರಿಗೆ ಹಣವನ್ನು ಸರ್ಕಾರ ದುರುಪಯೋಗ ಮಾಡುತ್ತಿದೆ, ನಮ್ಮ ಕ್ಷೇತ್ರಗಳಲ್ಲೇ ಸೋತಿರುವ ಕಾಂಗ್ರೆಸ್ ಅಭ್ಯರ್ಥಿಗಳ ಶಿಫಾರಸಿನ ಮೇರೆಗೆ ವಿವಿಧ ಸಮಿತಿಗಳ ನೇಮಕ ಮಾಡುತ್ತಿದ್ದಾರೆ.
ಪ್ರತಿಪಕ್ಷಗಳ ಶಾಸಕರ ಹಕ್ಕನ್ನು ಮೊಟಕುಗೊಳಿಸುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ, ಸದನದಲ್ಲಿ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದರು.
ಇದಕ್ಕೂ ಮುನ್ನ, ವಿಧಾನಸೌಧದ ಮುಂಭಾಗ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಉಭಯ ಪಕ್ಷಗಳ ಸದಸ್ಯರು ಧರಣಿ ನಡೆಸಿ, ಪ್ರತಿಭಟಿಸಿ, ನಂತರ ರಾಜಭವನಕ್ಕೆ ತೆರಳಿದರು.