ಬೆಂಗಳೂರು:ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ರನ್ಯಾ ರಾವ್ ಮದುವೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇರುವ ಛಾಯಾಚಿತ್ರವನ್ನು ರಾಜ್ಯ ಬಿಜೆಪಿ ಬಿಡುಗಡೆ ಮಾಡಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇದು ಬಿಜೆಪಿ ಗೇಮ್‌ಪ್ಲ್ಯಾನ್ ಎಂದು ಟೀಕಿಸಿದ್ದಾರೆ.
ಮದುವೆ ಚಿತ್ರ ಸಮೇತ ಟ್ವೀಟ್ ಮಾಡಿರುವ ಬಿಜೆಪಿ ಗೋಲ್ಡ್ ಸ್ಮಗ್ಲರ್ ರನ್ಯಾ ರಾವ್ ಜೊತೆ ನಂಟಿರುವ ಸಚಿವರು ಯಾರೆಂಬುದನ್ನು ಕರ್ನಾಟಕ ಕಾಂಗ್ರೆಸ್ ಬಹಿರಂಗ ಪಡಿಸುವುದೇ ಎಂದು ಪ್ರಶ್ನಿಸಿದೆ.
ಕೇವಲ ಊಹಾಪೋಹ
ಇದಕ್ಕೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷರು, ರನ್ಯಾ ರಾವ್ ಪ್ರಕರಣದಲ್ಲಿ ಸಚಿವರ ಕೈವಾಡ ಇದೆ ಎಂಬುದು ಕೇವಲ ಊಹಾಪೋಹ, ಇದು ಬಿಜೆಪಿಯ ಗೇಮ್‌ಪ್ಲ್ಯಾನ್ ಎಂದರು.
ಯಾವ ಸಚಿವರ ಹೆಸರಿದೆ, ಯಾರಾದರೂ ನೋಡಿದ್ದಾರಾ, ಕೇಳಿದ್ದಾರಾ, ನಾವು ಮದುವೆ ಸೇರಿದಂತೆ ಶುಭ ಕಾರ್ಯಕ್ರಮಗಳಿಗೆ ಹೋಗುತ್ತಿರುತ್ತೇವೆ, ಅಲ್ಲಿ ಅನೇಕರು ನಮ್ಮ ಜತೆ ಫೋಟೋ ತೆಗೆಸಿಕೊಳ್ಳುತ್ತಾರೆ, ಯಾರೋ ನನ್ನ ಪಕ್ಕ ಬಂದು ನಿಂತುಕೊಂಡ ತಕ್ಷಣ ನನಗೂ ಅವರಿಗೂ ಸಂಬಂಧ ಇದೆ ಎಂದು ಭಾವಿಸಲು ಸಾಧ್ಯವೇ.
ನಮ್ಮ ಜತೆ ಫೋಟೋ ತೆಗೆಸಿಕೊಂಡವರು ಅಪರಾಧ ಮಾಡಿದರೆ, ನಾವು ಅದಕ್ಕೆ ಬೆಂಬಲ ನೀಡಿದ್ದೇವೆ ಎಂದು ಹೇಳಲು ಸಾಧ್ಯವೇ, ನಿರ್ದಿಷ್ಟ ಸಚಿವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಇದ್ದರೆ ಚರ್ಚೆ ಮಾಡಿ ಎಂದು ಸವಾಲು ಹಾಕಿದರು.
ಶಿಷ್ಟಾಚಾರ ಉಲ್ಲಂಘನೆ ತನಿಖೆ
ಅಪರಾಧ ಮಾಡುವಂತೆ ಯಾವ ಮಂತ್ರಿಯೂ ಬೆಂಬಲಿಸುವುದಿಲ್ಲ, ಈ ಪ್ರಕರಣದಲ್ಲಿ ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ಮುಖ್ಯಮಂತ್ರಿ ಆಂತರಿಕ ತನಿಖೆಗೆ ಆದೇಶಿಸಿದ್ದಾರೆ.
ನಾನು ಇತ್ತೀಚೆಗೆ ದುಬೈಗೆ ತೆರಳಿದ್ದಾಗ ನನ್ನ ಉಂಗುರ, ಬೆಲ್ಟ್, ವಾಚ್‌ಗಳನ್ನು ತೆಗೆಸಿದ್ದರು, ಇಷ್ಟೊಂದು ಭದ್ರತೆ ಮಧ್ಯೆ 14 ಕೆ.ಜಿ ಚಿನ್ನ ಕಳ್ಳಸಾಗಾಣೆ ಹೇಗೆ ಸಾಧ್ಯ ಎಂಬುದು ನನಗೂ ಅಚ್ಚರಿಯಾಗಿದೆ ಎಂದರು.