ಬೆಂಗಳೂರು:ಜನವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಏಪ್ರಿಲ್ 7ರಿಂದ ಜನಾಕ್ರೋಶ ಯಾತ್ರೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ವಿಶ್ವಾಸದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರು, ಬಡವರು, ಜನಸಾಮಾನ್ಯರಿಗೆ ಅನ್ಯಾಯ ಮಾಡುತ್ತಿದೆ ಎಂದರು.
ಮುಂದಿನ ಚುನಾವಣೆಯಲ್ಲಿ ತಕ್ಕ ಶಾಸ್ತಿ
ಶೇಕಡಾ 40 ಕಮಿಷನ್ ಸರ್ಕಾರ ಎಂಬುದಾಗಿ ಬಿಜೆಪಿ ಆಡಳಿತದ ಮೇಲೆ ಹೊರಿಸಿದ ಆರೋಪಕ್ಕೆ ಪುರಾವೆಯೇ ಇಲ್ಲ, ಸುಳ್ಳು ಹೇಳಿ ಜನರ ದಾರಿ ತಪ್ಪಿಸಿದ ಕಾಂಗ್ರೆಸ್ ವಿರುದ್ಧ ಹೋರಾಟ ಮುಂದುವರೆಯಲಿದೆ, ಮುಂದಿನ ಚುನಾವಣೆಯಲ್ಲಿ ಜನತೆ ಈ ಸರ್ಕಾರಕ್ಕೆ ತಕ್ಕ ಶಾಸ್ತಿ ಮಾಡಲಿದೆ.
ಸಿದ್ದರಾಮಯ್ಯ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದ ಮೇಲೆ, ಆನೆ ನಡೆದಿದ್ದೇ ದಾರಿ ಎಂಬಂತೆ ವರ್ತಿಸುತ್ತಿದ್ದು, ಕಪಟ ಸಮಾಜವಾದಿಯ ಮುಖವಾಡ ಕಳಚಿ ಬಿದ್ದಿದೆ.
ಬಿಜೆಪಿ ಉತ್ತಮ ಆಡಳಿತ ನೀಡಿದರೂ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡಿದರು, ಜನರ ಒಳಿತಿಗಾಗಿ ಕೆಲಸ ಮಾಡುತ್ತಿಲ್ಲ.
ರಾಜ್ಯ ಬೊಕ್ಕಸ ಕಾಂಗ್ರೆಸ್ ಎಟಿಎಂ
ಪಕ್ಷದ ಹೈಕಮಾಂಡ್ ಕುಟುಂಬಕ್ಕೆ ಕರ್ನಾಟಕ ಅಡವಿಡಲು ಮತ್ತು ಇತರೆ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಪಕ್ಷದ ಎಟಿಎಂ ಆಗಿ ರಾಜ್ಯ ಬೊಕ್ಕಸವನ್ನು ಪರಿವರ್ತಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.
ಬಿಜೆಪಿ ಆಡಳಿತದ ಮೇಲೆ ನಡೆಸಿದ ಅಪಪ್ರಚಾರ ನಿಭಾಯಿಸುವಲ್ಲಿ ನಾವು ವಿಫಲವಾದೆವು ಎಂಬುದನ್ನು ಒಪ್ಪಿಕೊಳ್ಳುತ್ತೇನೆ, ಮುಂದೆ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತೇವೆ ಎಂದರು.
ಅಗತ್ಯ ಸಾಮಗ್ರಿಗಳ ಬೆಲೆ ತೀವ್ರ ಏರಿಕೆಯಾಗಿದೆ, ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಕಲ್ಪಿಸಿರುವುದು, ಪರಿಶಿಷ್ಟ ಜಾತಿ, ಜನಾಂಗದ ಅಭ್ಯುದಯಕ್ಕೆ ಮೀಸಲಿಟ್ಟ ಎಸ್‌ಇಪಿ/ಟಿಎಸ್‌ಪಿ ಹಣ ದುರ್ಬಳಕೆ ವಿಷಯಗಳನ್ನು ರಾಜ್ಯದ ಜನತೆ ಮುಂದೆ ತೆಗೆದುಕೊಂಡು ಹೋಗುತ್ತೇವೆ.
ಪ್ರತಿ ಜಿಲ್ಲೆಗೆ ಯಾತ್ರೆ
ರಾಜ್ಯ ಕಾಂಗ್ರೆಸ್ ಆಡಳಿತ ವಿರುದ್ಧದ ಹೋರಾಟ ಅಹೋರಾತ್ರಿ ಧರಣಿ ಮೂಲಕ ಆರಂಭವಾಗಿದ್ದು, ಏಪ್ರಿಲ್ 7ರಿಂದ ನಡೆಯಲಿರುವ ಜನಾಕ್ರೋಶ ಯಾತ್ರೆ ರಾಜ್ಯದ ಪ್ರತಿ ಜಿಲ್ಲೆಗೆ ತಲುಪಲಿದೆ.
ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮೂಲಕ ಹಣ ಲೂಟಿ ಮಾಡಿ, ಜನರ ಮೇಲೆ ತೆರಿಗೆ ಬರೆ ಎಳೆದು ಅಧಿಕಾರ ನಡೆಸುತ್ತಿರುವುದನ್ನು ಜನತೆ ಮುಂದಿಡಲಿದ್ದೇವೆ, ಸರ್ಕಾರದ ಮುಖವಾಡ ಕಳಚುವ ಕೆಲಸ ಮುಂದಿನ ಒಂದು ತಿಂಗಳು ಮಾಡಲಿದ್ದೇವೆ ಎಂದರು.
ವಕ್ಫ್ ಹೆಸರಿನಲ್ಲಿ ಆಸ್ತಿ ಮುಟ್ಟುಗೋಲು
ರಾಜ್ಯದಲ್ಲಿ ಕಾಂಗ್ರೆಸ್ಸಿಗರು ವಕ್ಫ್ ಹೆಸರಿನಲ್ಲಿ ಲಕ್ಷಾಂತರ ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದು, ವಕ್ಫ್ ತಿದ್ದುಪಡಿ ಮಸೂದೆಗೆ ಆ ಪಕ್ಷದ ವಿರೋಧ ಸಹಜ.
ವಕ್ಫ್ ಹೆಸರಿನಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇರುವ ಮಠ-ಮಾನ್ಯ, ದೇವಾಲಯಗಳ ಜಮೀನುಗಳನ್ನು ವಶಪಡಿಸಿಕೊಳ್ಳಲಾಗಿದೆ, ರೈತರ ಜಮೀನು ಕಬ್ಜಾ ಮಾಡಿಕೊಂಡಿದ್ದಾರೆ, ಇದರ ಮುಕ್ತಿಗಾಗಿಯೇ ವಕ್ಫ್ ತಿದ್ದುಪಡಿ ಮಸೂದೆ ತರಲಾಗಿದೆ ಎಂದು ಸಮರ್ಥಿಸಿಕೊಂಡರು.