ಬೆಂಗಳೂರು:ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ನಂತರ ಭ್ರಷ್ಟ, ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಆರಂಭವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾಕ್ರೋಶ ಯಾತ್ರೆ 4 ಹಂತಗಳಲ್ಲಿ ನಡೆಯಲಿದೆ, ಇಂದು ಮೈಸೂರು, ನಾಳೆ ಮಂಡ್ಯ, ಹಾಸನ, ನಾಡಿದ್ದು ಮಡಿಕೇರಿ, ಮಂಗಳೂರು, ಹೀಗೆ ಪ್ರತಿ ಜಿಲ್ಲಾ ಕೇಂದ್ರಗಳಿಗೆ ಜನಾಕ್ರೋಶ ಯಾತ್ರೆ ತೆರಳುತ್ತದೆ ಎಂದರು.
ಜನವಿರೋಧಿ ನೀತಿ
ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ, ಮುಸ್ಲಿಮರಿಗೆ ಸರ್ಕಾರಿ ಕಾಮಗಾರಿಗಳಲ್ಲಿ ಶೇಕಡ 4ರಷ್ಟು ಮೀಸಲಾತಿ, ದಲಿತರ ಅಭ್ಯುದಯಕ್ಕೆ ಎಸ್‌ಇಪಿ/ಟಿಎಸ್‌ಪಿ ಕಾರ್ಯಕ್ರಮದಡಿ ಮೀಸಲಿಟ್ಟ ಹಣ ದುರುಪಯೋಗ, ಜನವಿರೋಧಿ ನೀತಿಯನ್ನು ರಾಜ್ಯದ ಜನರಿಗೆ ತಲುಪಿಸಲಾಗುವುದು.
ಬಿಜೆಪಿ-ಜೆಡಿಎಸ್ ಮಧ್ಯೆ ಒಡಕಿಲ್ಲ, ಜನಾಕ್ರೋಶ ಯಾತ್ರೆ ನಮ್ಮ ಪಕ್ಷದ ಹೋರಾಟ, ಹೋರಾಟಕ್ಕೆ ಆಡಳಿತ ಪಕ್ಷ ಗೌರವ ಕೊಡಬೇಕೆಂಬ ನಿರೀಕ್ಷೆ ಮಾಡುವಷ್ಟು ದಡ್ಡರು ನಾವಲ್ಲ.
ಕಾಂಗ್ರೆಸ್ ಪಕ್ಷಕ್ಕೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿದೆ, ಬಿಜೆಪಿ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿದೆ, ದೇಶದಲ್ಲಿ ಒಂದು ಕಾಲದಲ್ಲಿ 400ಕ್ಕೂ ಹೆಚ್ಚು ಸಂಸದರನ್ನು ಹೊಂದಿದ್ದ ಕಾಂಗ್ರೆಸ್ ಇಂದು ಅಧೋಗತಿಗೆ ಇಳಿದಿದೆ, ಬಿಜೆಪಿ ಸುಭದ್ರವಾಗಿದೆ ಎಂದರು.