ಬೆಂಗಳೂರು:ಸಮರ್ಥ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವಲ್ಲಿ ವೈಫಲ್ಯ ಮತ್ತು ತೆರಿಗೆ ಪಾಲಿನಲ್ಲಿ ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯದ ವಿರುದ್ಧ ದನಿ ಎತ್ತಲಾಗದ ಬಗ್ಗೆ ಆಕ್ರೋಶಗೊಂಡಿರುವ ಜನರ ಮನಸ್ಸು ಅರಿಯಲು ಬಿಜೆಪಿ ನಾಯಕರಿಗೆ ಜನಾಕ್ರೋಶ ಯಾತ್ರೆ ನೆರವಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಇಷ್ಟೊಂದು ಅಸಮರ್ಥ, ನಿರ್ಲಜ್ಜ ಮತ್ತು ಜನವಿರೋಧಿ ವಿರೋಧ ಪಕ್ಷವನ್ನು ರಾಜ್ಯ ಎಂದೂ ಕಂಡಿಲ್ಲ, ಸ್ವಪಕ್ಷೀಯರೇ ಆರೋಪಿಸುವಂತೆ ‘ಪೇಮೆಂಟ್ ಸೀಟ್’ನಲ್ಲಿ ಕುಳಿತಿರುವ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸರ್ಕಾರವನ್ನು ಪ್ರಶ್ನಿಸುವ ನೈತಿಕತೆ ಇಲ್ಲ ಎಂದಿದ್ದಾರೆ.
ಆರೋಪಗಳಿಗೆ ಉತ್ತರಿಸಲಿ
ನಮ್ಮನ್ನು ಪ್ರಶ್ನಿಸುವ ಮೊದಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅವರ ಶಾಸಕ ಮಿತ್ರರು ಕಳೆದ ಎರಡು ವರ್ಷಗಳಿಂದ ಮಾಡುತ್ತಿರುವ ಗಂಭೀರ ಸ್ವರೂಪದ ಆರೋಪಗಳಿಗೆ ಉತ್ತರಿಸುವ ದಮ್ಮು, ತಾಕತ್ ತೋರಿಸಲಿ.
ಸ್ವಪಕ್ಷೀಯರು ಮಾಡುತ್ತಿರುವ ಭ್ರಷ್ಟಾಚಾರ ಆರೋಪಗಳು ಹೈಕಮಾಂಡ್‌ಗೂ ಮನವರಿಕೆಯಾದಂತಿದೆ, ಆರೋಪಗಳಿಂದ ಆಗುವ ಮುಜುಗರ ತಪ್ಪಿಸಿಕೊಳ್ಳಲು ಯತ್ನಾಳ್ ಅವರನ್ನು ಪಕ್ಷದಿಂದ ಹೊರಗೆ ಹಾಕಿ, ಇನ್ನಷ್ಟು ಆರೋಪ ಮಾಡಿಸುತ್ತಿದ್ದು, ಅಂತಿಮವಾಗಿ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವುದೇ ಇದರ ಹಿಂದಿನ ಉದ್ದೇಶವಾಗಿದೆ.
ತಮ್ಮ ಕುರ್ಚಿ ಉಳಿಸಿಕೊಳ್ಳಲು ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದ್ದಾರೆಯೇ ಹೊರತು, ಬೇರೆ ಯಾವ ಸಾರ್ವಜನಿಕ ಹಿತಾಸಕ್ತಿಯ ಸದುದ್ದೇಶ ಖಂಡಿತ ಇಲ್ಲ, ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರದ್ದು ಮಾತ್ರವಲ್ಲ ರಾಜ್ಯದ ಜನತೆಯ ವಿಶ್ವಾಸವನ್ನೂ ಅವರು ಕಳೆದುಕೊಂಡಿದ್ದಾರೆ.
ಜನ ಪ್ರಜ್ಞಾವಂತರು
ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಬೀದಿಗೆ ಬಂದು ನಮ್ಮ ಪರ ಘೋಷಣೆ ಹಾಕದಿರಬಹುದು, ಅವರೆಲ್ಲರ ಆಶೀರ್ವಾದ ನಮ್ಮ ಸರ್ಕಾರದ ಪರವಾಗಿದೆ, ಮೊದಲ ದಿನದಿಂದಲೂ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿರುವ ಭಾರತೀಯ ಜನತಾ ಪಕ್ಷದ ಬಡವರು ಮತ್ತು ಮಹಿಳಾ ವಿರೋಧಿ ಧೋರಣೆ ಅರ್ಥಮಾಡಿಕೊಳ್ಳುವಷ್ಟು ಜನ ಪ್ರಜ್ಞಾವಂತರಾಗಿದ್ದಾರೆ.
ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಜೊತೆ ಶಾಮೀಲಾಗಿ ನ್ಯಾಯಬದ್ಧವಾಗಿ ಸಿಗಬೇಕಾದ ತೆರಿಗೆ ಪಾಲು ಮತ್ತು ಅನುದಾನಕ್ಕೆ ಕತ್ತರಿ ಹಾಕಿಸಿದ್ದಾರೆ, ರಾಜ್ಯದ ಜನರು ನೀಡುತ್ತಿರುವ ಐದು ಲಕ್ಷ ಕೋಟಿ ರೂ. ತೆರಿಗೆಯಲ್ಲಿ ಕೇವಲ 60,000 ಕೋಟಿ ರೂ. ಮಾತ್ರ ವಾಪಸು ನೀಡುತ್ತಿರುವ ಅನ್ಯಾಯದ ಬಗ್ಗೆ ಆಕ್ರೋಶಗೊಂಡಿದ್ದಾರೆ, ಬಿಜೆಪಿ ಯಾತ್ರೆ ಸಮಯದಲ್ಲಿ ಈ ಆಕ್ರೋಶದ ಬಿಸಿ ನಾಯಕರಿಗೆ ತಟ್ಟಲಿದೆ.
ಗುಲಾಮರಂತೆ ವರ್ತನೆ
ಜನರ ಹಿತರಕ್ಷಣೆ ಕಾಳಜಿ ಕಿಂಚಿತ್ತಾದರೂ ಇದ್ದರೆ ಪ್ರಧಾನಮಂತ್ರಿ ನಿವಾಸದ ಎದುರು ಪ್ರತಿಭಟನೆ ನಡೆಸಬೇಕು, ತೆರಿಗೆ ಪಾಲು, ಅನುದಾನ ಹಂಚಿಕೆಯಲ್ಲಿನ ಅನ್ಯಾಯ ಮಾತ್ರವಲ್ಲದೆ ಇದೀಗ ಸಂಸತ್‌ನಲ್ಲಿ ಕರ್ನಾಟಕದ ದನಿ ಕುಗ್ಗಿಸುವ ಉದ್ದೇಶದಿಂದ ಕ್ಷೇತ್ರ ಮರುವಿಂಗಡಣೆ ಮಾಡಲು ಹೊರಟಿರುವುದರ ಕುರಿತು ರಾಜ್ಯ ಬಿಜೆಪಿ ಸಂಸದರು ಬಾಯಿಗೆ ಬೀಗ ಹಾಕಿಕೊಂಡು ಗುಲಾಮರಂತೆ ವರ್ತಿಸುತ್ತಿದ್ದಾರೆ.
ರಚನಾತ್ಮಕ ಕಾರ್ಯನಿರ್ವಹಿಸುವ ವಿರೋಧ ಪಕ್ಷ ಇರಬೇಕೆಂದು ಬಯಸುವೆ, ರಾಜ್ಯ ಬಿಜೆಪಿ ಮುಕ್ತ ಆಗಬೇಕೆಂದು ಬಯಸುವಷ್ಟು ಕೆಟ್ಟ ಮನಸ್ಸು ನನಗಿಲ್ಲ, ನಮ್ಮ ಆಡಳಿತದಲ್ಲಿ ತಿಳಿದೋ, ತಿಳಿಯದೆಯೋ ತಪ್ಪುಗಳಾಗಿದ್ದರೆ ಅದನ್ನು ಗಮನಕ್ಕೆ ತರುವುದು ವಿರೋಧ ಪಕ್ಷದ ಮುಖ್ಯ ಕರ್ತವ್ಯ, ಆದರೆ ವಿರೋಧ ಪಕ್ಷ ಒಳಜಗಳ ಮತ್ತು ಅಸಾಮರ್ಥ್ಯದಿಂದ ನಗೆಪಾಟಲಿಗೆ ಈಡಾಗಿದೆ ಎಂದು ಟೀಕಿಸಿದ್ದಾರೆ.