ಬೆಂಗಳೂರು:ಅಗತ್ಯ ಸಾಮಗ್ರಿಗಳ ಬೆಲೆ ಏರಿಕೆ ವಿರುದ್ಧ ಆಡಳಿತ ಮತ್ತು ಪ್ರತಿಪಕ್ಷಗಳೆರಡೂ ಬೀದಿಗಳಿದು ಹೋರಾಟಕ್ಕೆ ನಿಂತಿವೆ.
ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಕೇಂದ್ರದ ವಿರುದ್ಧ ಹೋರಾಟಕ್ಕಿಳಿದರೆ, ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ನಿರಂತರ ದರ ಹೆಚ್ಚಳ ಖಂಡಿಸಿ ಬೀದಿಗಿಳಿದಿವೆ.
ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಈಗಾಗಲೇ ಬಿಜೆಪಿ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ನಡೆಸುತ್ತಿದ್ದರೆ, ಜೆಡಿಎಸ್ ಶನಿವಾರ ವಿನೂತನವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದೆ.
’ಸಾಕಪ್ಪಾ ಸಾಕು, ಕಾಂಗ್ರೆಸ್ ಸರ್ಕಾರ’ ಘೋಷಣೆಯೊಂದಿಗೆ ಬೀದಿಗಿಳಿದು ಜನರ ಮನ ಸೆಳೆಯುವ ಪ್ರಯತ್ನ ಮಾಡಲಿದೆ.
ಬೆಲೆ ಏರಿಕೆಯಿಂದ ಜನಸಾಮಾನ್ಯರು ಬೇಸತ್ತು ಹೋಗಿದ್ದಾರೆ, ’ಸಾಕಪ್ಪಾ ಸಾಕು ಕಾಂಗ್ರೆಸ್ ಸರ್ಕಾರ’ ಎಂದು ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರದ ಕೊನೆ ಯಾವಾಗ
ರಾಜ್ಯದ ಮೂಲೆ ಮೂಲೆಯಲ್ಲೂ ’ಈ ಸರ್ಕಾರದ ಕೊನೆ ಯಾವಾಗ’ ಎಂಬುದಾಗಿ ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ.
ಒಂದೆಡೆ ಗ್ಯಾರಂಟಿ ನೀಡಿ ಮತ್ತೊಂದೆಡೆಯಿಂದ ಅದಕ್ಕೆ ಎರಡರಷ್ಟು ಹಣವನ್ನು ಸಿದ್ದರಾಮಯ್ಯ ಸರ್ಕಾರ ಜನರಿಂದ ದೋಚುತ್ತಿದೆ ಎಂದು ಆರೋಪಿಸಿ ಜಿಡಿಎಸ್ ಬೀದಿಗಿಳಿದಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಯುವಜನತಾ ದಳ ರಾಜ್ಯಾದ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜನ ವಿರೋಧಿ ಸರ್ಕಾರ ತನ್ನ ಎಲ್ಲಾ ಬಾಹುಗಳಿಂದ ಜನರ ಬದುಕನ್ನೇ ಕಿತ್ತು ತಿನ್ನುತ್ತಿದೆ ಎಂದಿದ್ದಾರೆ.
ಕಾಂಗ್ರೆಸ್‌ನ ದುರಾಡಳಿತ
ಕಾಂಗ್ರೆಸ್‌ನ ದುರಾಡಳಿತಕ್ಕೆ ದಿಟ್ಟ ಉತ್ತರ ನೀಡಬೇಕಿದೆ, ನಮ್ಮ ನಾಳೆಯ ಈ ಹೋರಾಟಕ್ಕೆ ಸಾರ್ವಜನಿಕರು ಕೈಜೋಡಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಸಮೀಪಿಸುತ್ತಿದೆ, ಇದರ ನಡುವೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ದಿನನಿತ್ಯ ಜನರು ಬಳಸುವ 61 ಪದಾರ್ಥಗಳ ದರ ಹೆಚ್ಚಿಸಿದೆ, ಇಲ್ಲವೇ ತೆರಿಗೆ ವಿಧಿಸಿದೆ.
ಹಾಲು, ಮೊಸರು, ವಿದ್ಯುತ್ ದರವನ್ನು ಆಗಿಂದಾಗ್ಯೆ ಹೆಚ್ಚಿಸುತ್ತಲೇ ಇದೆ, ಇದನ್ನು ಕೇಳುವವರೇ ಇಲ್ಲವಾಗಿದೆ.

ಜನಸಾಮಾನ್ಯರ ಮೇಲೆ ಬರೆ
ಪೆಟ್ರೋಲ್, ಡೀಸೆಲ್‌ನಿಂದ ಈಗ ನೀರಿನ ದರವನ್ನೂ ಹೆಚ್ಚಿಸಿ ಜನಸಾಮಾನ್ಯರ ಮೇಲೆ ಬರೆ ಹಾಕಿದೆ.
ಇವರ ಆಡಳಿತದಲ್ಲಿ ಬಡವರು, ರೈತರು ಬದುಕಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜನ ಬೀದಿಗಿಳಿದು ಹೋರಾಟ ಮಾಡದಿದ್ದರೆ ಮುಂದೊಂದು ದಿನ ಉಸಿರಾಡುವ ಗಾಳಿಗೂ ತೆರಿಗೆ ವಿಧಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
