ಬೆಂಗಳೂರು:ನಾಯಕತ್ವ ಬದಲಾವಣೆ, ಹನಿಟ್ರ್ಯಾಪ್, ಬೆಲೆ ಏರಿಕೆಯಂತಹ ವಿಚಾರಗಳು ತಮ್ಮ ಕುರ್ಚಿಗೆ ಧಕ್ಕೆ ತಂದಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಗಣತಿ ಹೆಲ್ಮೆಟ್ ಧರಿಸಿದ್ದಾರೆಂದು ರಾಜ್ಯ ಬಿಜೆಪಿ ಕಟುವಾಗಿ ಟೀಕಿಸಿದೆ.
ಮುಸ್ಲೀಮರು ರಾಜ್ಯದಲ್ಲಿ ಅತಿದೊಡ್ಡ ಸಮುದಾಯ ಎಂಬುದಾಗಿ ಬಿಂಬಿಸಿ, ಹಿಂದೂಗಳನ್ನು ಜಾತಿ ಹೆಸರಲ್ಲಿ ಛಿದ್ರಗೊಳಿಸಿ, ಮುಸ್ಲೀಮರನ್ನು ಪೋಷಿಸಿ, ಕಾಂಗ್ರೆಸ್ ಮತಬ್ಯಾಂಕ್ ಭದ್ರಗೊಳಿಸುವ ಕೆಲಸಕ್ಕೆ ವ್ಯವಸ್ಥಿತ ಸಂಚು ನಡೆಸಿದ್ದಾರೆ.
ಯಾವ ಬದ್ಧತೆಯೂ ಇದ್ದಂತಿಲ್ಲ
ಈಗಿನ ಲೆಕ್ಕಾಚಾರ ಗಮನಸಿದರೆ, ಸಿದ್ದರಾಮಯ್ಯ ಅವರಿಗೆ ಸಮೀಕ್ಷಾ ವರದಿ ಅನುಷ್ಟಾನಗೊಳಿಸುವ ಯಾವ ಬದ್ಧತೆಯೂ ಇದ್ದಂತಿಲ್ಲ.
ಜಾತಿಗಳ ಸಂಖ್ಯಾಬಲ ಪ್ರದರ್ಶನಕ್ಕೆ ಇಡುವ ಮೂಲಕ ಮೀಸಲಾತಿ ವಂಚಿತರು, ಅದನ್ನು ಅತಿಯಾಗಿ ಭಕ್ಷಿಸಿದ ಹಿಂದುಳಿದ ಜಾತಿಗಳು, ಮೀಸಲಾತಿ ಹೆಚ್ಚಳದ ಅನಿವಾರ್ಯತೆ ಇತ್ಯಾದಿ ವಿಚಾರಗಳು ಚರ್ಚೆ ಆಗುವುದು ಮುಖ್ಯಮಂತ್ರಿ ಅವರಿಗೆ ಬೇಕಿಲ್ಲ ಎಂದಿದೆ.
ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಹಾಗೂ ಶಾಸಕ ಸುನೀಲ್ ಕುಮಾರ್ ಈ ಕುರಿತು ಸರಣಿ ಟ್ವೀಟ್ ಮಾಡಿ, ಜಾತಿ ಗಣತಿ ವರದಿ ಹೆಸರಲ್ಲಿ ವಿಶೇಷ ಕ್ಯಾಬಿನೆಟ್, ಸಂಪುಟ ಉಪಸಮಿತಿ ರಚಿಸಿ ಒಂದಷ್ಟು ಕಾಲಹರಣ ಮಾಡುವುದು ಸಿದ್ದರಾಮಯ್ಯ ಅವರ ಸದ್ಯದ ಲೆಕ್ಕಾಚಾರವಾಗಿದೆ.
ಲಾಭ ಏನೆಂಬ ಚರ್ಚೆ ಮಾಡಿ
ಸ್ವಯಂ ಘೋಷಿತ ಹಿಂದುಳಿದ ವರ್ಗಗಳ ಛಾಂಪಿಯನ್ ಸಿದ್ದರಾಮಯ್ಯನವರೇ, ಜಾತಿ ಗಣತಿ ವರದಿಯಿಂದ ಹಿಂದುಳಿದ ವರ್ಗದರಿಗೆ ಆಗುವ ಲಾಭ ಏನೆಂಬ ಬಗ್ಗೆ ಮೊದಲು ಚರ್ಚೆ ಮಾಡಿ.
ವರದಿಯಿಂದ ಸಮಾಜದ ಮೇಲೆ ಉಂಟಾಗುವ ಪರಿಣಾಮ ಏನೆಂಬುದು ವಿಶ್ಲೇಷಣೆಗೆ ಒಳಪಡಬೇಕು, ವರದಿಯ ವೈಜ್ಞಾನಿಕತೆ ಹಾಗೂ ಪ್ರಸ್ತುತತೆಯ ತುರ್ತು ಅಧ್ಯಯನಕ್ಕೆ ವಿಧಾನಮಂಡಲದ ಉಭಯ ಸದನಗಳ ಜಂಟಿ ಸದನ ಸಮಿತಿ ರಚನೆ ಮಾಡಿ, ಸುಮ್ಮನೇ ಗಾಳಿಯಲ್ಲಿ ಗುಂಡು ಹೊಡೆಯಬೇಡಿ ಎಂದಿದ್ದಾರೆ.
