ಬೆಂಗಳೂರು:ಮಾಧ್ಯಮಗಳಲ್ಲಿ ಪ್ರಕಟವಾದ ಜಾತಿ ಗಣತಿ ವರದಿಯಲ್ಲಿನ ಅಂಕಿ-ಅಂಶಗಳು ಎನ್ನಲಾದ ವಿವರಗಳನ್ನು ಗಮನಿಸಿದರೆ, ಇದು ಜಾತಿ ಗಣತಿಯೋ.. ದ್ವೇಷ ಗಣತಿಯೋ ಎಂಬ ಅನುಮಾನ ಕಾಡುತ್ತದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ ಜಾತಿ ಗಣತಿ ವರದಿ ವಿರೋಧಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಈಗ ಯೂ-ಟರ್ನ್ ಹೊಡೆದಿರುವುದು ಆಶ್ಚರ್ಯ ಮೂಡಿಸಿದೆ.
ಒಕ್ಕಲಿಗ ಸಮುದಾಯ
ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ ಸೇರಿದಂತೆ ಹಳೆ ಮೈಸೂರು ಜಿಲ್ಲೆಗಳಲ್ಲಿ ವಾಸಿಸುವ ಒಕ್ಕಲಿಗ ಸಮುದಾಯದ ಸಂಖ್ಯೆ ಎಷ್ಟು ಎಂದು ಪ್ರಶ್ನಿಸಿದ್ದಾರೆ.
ಜಾತಿ ಗಣತಿ ಎಂಬ ಗಜಪ್ರಸವ ಕಥನಕ್ಕೆ ಸಂಪುಟ ಸಭೆಯಲ್ಲಿ ಶಾಸ್ತ್ರೋಕ್ತವಾಗಿ ಅರಿಶಿಣ, ಕಂಕುಮ ಬಳಿದು, ಬೆಂಕಿ ಕಡ್ಡಿ ಹೊತ್ತಿಸಲಾಗಿದೆ ಎಂದಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಜಾತಿ ಗಣತಿಯದ್ದು ಎನ್ನಲಾದ ಅಂಕಿ-ಅಂಶಗಳು ಎಲ್ಲೆಡೆ ಹರಿದಾಡುತ್ತಿವೆ, ಯಾವುದೋ ಅಜ್ಞಾತ ಕೈ ಇದನ್ನು ವ್ಯವಸ್ಥಿತವಾಗಿ ತೇಲಿಬಿಟ್ಟಿದೆ, ಒಕ್ಕಲಿಗ ಸಮಾಜಕ್ಕೆ ಸೇರಿದ ಅಂಕಿ-ಸಂಖ್ಯೆ ಅಷ್ಟೇ ಅಲ್ಲದೆ, ವೀರಶೈವ/ಲಿಂಗಾಯತ ಮತ್ತು ಇನ್ನಿತರ ಸಮುದಾಯಗಳ ಜನಸಂಖ್ಯೆ ಅಂಕಿ-ಅಂಶಗಳೂ ಅಚ್ಚರಿ ಹುಟ್ಟಿಸಿವೆ ಎಂದಿದ್ದಾರೆ.
ಹೂಡಿದ ಷಡ್ಯಂತ್ರ್ಯವೇ
ರಾಜ್ಯದಲ್ಲಿ ಈ ಗಣತಿ ಗ್ಯಾರಂಟಿ ಅಲ್ಲೋಲ ಕಲ್ಲೋಲ ಎಬ್ಬಿಸಲು ಹೂಡಿದ ಷಡ್ಯಂತ್ರ್ಯವೇ ಅಥವಾ ಅಗತ್ಯ ಸಾಮಗ್ರಿಗಳ ಸರಣಿ ದರ ಏರಿಕೆ, ಸಾಲು ಸಾಲು ಭ್ರಷ್ಟ ಹಗರಣಗಳ ಮುಜುಗರದಿಂದ ಮುಖ ಮುಚ್ಚಿಕೊಳ್ಳಲು, ಜನರ ಗಮನ ಬೇರೆಡೆಗೆ ಹೊರಳಿಸಲು ಸರ್ಕಾರ ರೂಪಿಸಿದ ಸಂಚೇ ಎಂಬ ಶಂಕೆ ಇದೆ.
ಇಡೀ ರಾಜ್ಯ ಜಾತಿ, ಮತಗಳ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದ್ದರೆ, ಕಾಂಗ್ರೆಸ್ ಸರ್ಕಾರದ ಈ ನಡೆ, ಕೆಲವು ನಿರ್ದಿಷ್ಟ ಸಮುದಾಯಗಳ ಮೇಲೆ ರಾಜಕೀಯ, ಸಾಮಾಜಿಕ ಹಗೆತನ ಸಾಧಿಸುವ ಮುಂದುವರಿದ ಅಧ್ಯಾಯವಾಗಿದೆ.
ಮುಖ್ಯಮಂತ್ರಿ ಕುರ್ಚಿ ಹತ್ತಲು ಚಾತಕ ಪಕ್ಷಿಯಂತೆ ನಿದ್ದೆಗೆಟ್ಟು, ’ಒಂದ್ ಸಲ ನಂಗೂ ಪೆನ್ನು, ಪೇಪರ್ ಕೊಡಿ’ ಎಂದು ಸಮುದಾಯದ ಮುಂದೆ ಮಂಡಿಯೂರಿ ಗೋಗರೆದ ವ್ಯಕ್ತಿ, ಷಡ್ಯಂತ್ರ್ಯ ವರದಿಗೆ ಶಿರಬಾಗಿ ಸಮ್ಮತಿಸಿಸುವರೇ.
ನಾಲಿಗೆ ಬದಲಿಸಿದವರು
ಹಿಂದೊಮ್ಮೆ ನಾಡಪ್ರಭು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಷೀಣದನಿಯಲ್ಲಿ ಜಾತಿ ಗಣತಿ ವರದಿ ವಿರೋಧಿಸಿದ್ದವರು ಈಗ ನಾಲಿಗೆ ಬದಲಿಸಿದ್ದಾರೆ.
’ನಾನು ಒಂದು ನ್ಯಾಷನಲ್ ಪಾರ್ಟಿ ಸ್ಟೇಟ್ ಪ್ರೆಸಿಡೆಂಟ್ ಕಣ್ರೀ.., ನಂಗೆ ಎಲ್ರೂ ಸಮಾನ, ಈಗಷ್ಟೇ ಕಣ್ ತೆರೆದಿದ್ದೇವೆ, ಗಣತಿಗೆ ಯಾರ ವಿರೋಧವೂ ಇಲ್ಲ, ವಿರೋಧವಾದ್ರೂ ಯಾಕಿರುತ್ತೆ ಹೇಳಿ’ ಎನ್ನುವ ಮೂಲಕ ಸುದ್ದಿಗಾರರನ್ನೇ ತಳ್ಳಿಕೊಂಡು ಪಲಾಯನಗೈದರಲ್ಲಾ.
ಇವರಿಗೆ ಪೆನ್ನು, ಪೇಪರ್ ಕೊಟ್ಟ ಪಾಪಕ್ಕೆ ಒಕ್ಕಲಿಗ ಸಮಾಜ ಬೆಲೆ ತೆರುತ್ತಿದೆ, ಕುರ್ಚಿ ದುರಾಸೆಗೆ ಈ ವ್ಯಕ್ತಿ ಅದೇ ಪೆನ್ನಿನಲ್ಲಿ ಸಮಾಜದ ಮರಣ ಶಾಸನ ಬರೆಯುತ್ತಿದ್ದಾರೆ.
ಈ ವರದಿಗೆ ನನ್ನ ಒಪ್ಪಿಗೆ ಇಲ್ಲ, ಅನ್ಯಾಯದ ವಿರುದ್ಧ ಹೋರಾಟಕ್ಕೆ ನಾನು ಸಿದ್ಧ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.
