ಬೆಂಗಳೂರು:ಜಾತಿ ಗಣತಿ ಸಮೀಕ್ಷಾ ವರದಿಗೆ ಹಲವು ಸಮುದಾಯಗಳ ವಿರೋಧದ ನಡುವೆಯೇ ಸಂಪುಟದ ಸಚಿವರಲ್ಲೂ ಬಣಗಳ ರೂಪ ಪಡೆದಿದೆ.
ವರದಿ ಅಂಕಿ-ಅಂಶ ಬಹಿರಂಗಗೊಳ್ಳುತ್ತಿದ್ದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್, ಗಣತಿ ಗ್ಯಾರಂಟಿ ರಾಜ್ಯದಲ್ಲಿ ಅಲ್ಲೋಲ-ಕಲ್ಲೋಲ ಎಬ್ಬಿಸಲು ಹೂಡಿದ ಷಡ್ಯಂತ್ರ ಎಂದು ಟೀಕಿಸಿದ್ದಾರೆ.
ಮರೆಮಾಚಿದ ವಾಸ್ತವ ಅಂಕಿ-ಅಂಶ
ವಾಸ್ತವ ಅಂಕಿ-ಅಂಶಗಳನ್ನು ಮರೆಮಾಚಿ ಒಕ್ಕಲಿಗ ಮತ್ತು ವೀರಶೈವ/ಲಿಂಗಾಯತ ಸಮುದಾಯದ ಜನಸಂಖ್ಯೆಯನ್ನು ಕಡಿತಗೊಳಿಸಿ ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ಮಾಡಿದೆ.
ವರದಿ ಅನುಷ್ಟಾನಕ್ಕೆ ಅವಕಾಶ ನೀಡುವುದಿಲ್ಲ, ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಒಕ್ಕಲಿಗ ಸಮುದಾಯದ ಮುಖಂಡರು ಬಹಿರಂಗವಾಗಿ ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಿದ್ದಂತೆ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಪಕ್ಷಾತೀತವಾಗಿ ತಮ್ಮ ಸಮಾಜದ ಜನಪ್ರತಿನಿಧಿಗಳು ಮತ್ತು ಮುಖಂಡರ ಸಭೆ ಕರೆದಿದ್ದಾರೆ.
ಒಕ್ಕಲಿಗರ ಸಂಘ ಒಪ್ಪುವುದಿಲ್ಲ
ಇದರ ನಡುವೆ ರಾಜ್ಯ ಒಕ್ಕಲಿಗರ ಸಂಘ ಕಾಂತರಾಜ್ ವರದಿಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ.
ಸುಳ್ಳು ಅಂಕಿ-ಅಂಶಗಳ ಮೂಲಕ ಸಮಯದಾಯವನ್ನು ಒಡೆಯುವ ಮತ್ತು ಕುಗ್ಗಿಸುವ ಕೆಲಸ ಸರ್ಕಾರದಿಂದ ನಡೆದಿದೆ ಎಂದು ಆರೋಪಿಸಿರುವುದಲ್ಲದೆ, ವರದಿ ಅನುಷ್ಟಾನಕ್ಕೆ ಮುಂದಾದರೆ, ಎಲ್ಲಾ ಅನಾಹುತಗಳಿಗೂ ನೀವೇ ಕಾರಣರಾಗುತ್ತೀರಿ ಎಂದು ಎಚ್ಚರಿಸಿದೆ.
ಕುಮಾರಸ್ವಾಮಿ, ಸದಾನಂದಗೌಡ ಹಾಗೂ ಅಶೋಕ್ ನೀಡಿರುವ ಹೇಳಿಕೆಯಲ್ಲಿ, ನಾವು ಮೀಸಲಾತಿ ವಿರೋಧಿಗಳಲ್ಲ, ಅಂಕಿ-ಅಂಶಗಳ ಲೆಕ್ಕ ತಪ್ಪಾಗಿದೆ, ಒಕ್ಕಲಿಗ, ಲಿಂಗಾಯತ ಸಂಖ್ಯೆ ಕಡಿಮೆ ಮಾಡಿ, ಮತ್ತೊಂದು ಸಮುದಾಯದ ವಾಸ್ತವಿಕ ಸಂಖ್ಯೆಯನ್ನು ತಪ್ಪಾಗಿ ಹಿಗ್ಗಿಸುವ ತಂತ್ರ ನಡೆದಿದೆ.
ಸಿದ್ದರಾಮಯ್ಯ ಕಿವುಡುತನ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಪ್ರಯತ್ನಗಳನ್ನು ನಮ್ಮ ಸಮುದಾಯ ಒಪ್ಪುವುದಿಲ್ಲ, ಮೊದಲಿನಿಂದಲೂ ಇದು ಅವೈಜ್ಞಾನಿಕ ವರದಿ ಎಂಬುದಾಗಿ ಹೇಳುತ್ತಾ ಬಂದಿದ್ದರೂ, ಅವರು ಕಿವುಡಾಗಿ ವರ್ತಿಸುತ್ತಾ ಬಂದಿದ್ದಾರೆ.
ಸಿದ್ದರಾಮಯ್ಯ ಹೀಗೇ ಮುಂದುವರೆದರೆ, ಅವರ ಅಧಿಕಾರದ ಕೊನೆ ದಿನಗಳನ್ನು ಎಣಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈಗ ತಮ್ಮ ಪಕ್ಷದಲ್ಲಿ ತಮಗೊಬ್ಬ ಸ್ಫರ್ಧಿ ಇದ್ದಾರೆ ಎಂಬ ಕಾರಣಕ್ಕೆ, ನಿಮ್ಮ ವೈಯಕ್ತಿಕ ಪ್ರತಿಷ್ಠೆಗೆ ಇಡೀ ಸಮಾಜವನ್ನು ಏಕೆ ಬಲಿ ಕೊಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ದುರಹಂಕಾರ ಪ್ರವೃತ್ತಿ
ಸಿದ್ದರಾಮಯ್ಯ ಅವರ ದುರಹಂಕಾರ ಪ್ರವೃತ್ತಿ ಒಂದು ಸಮಾಜದ ಮೇಲಿನ ಗದಾ ಪ್ರಹಾರವಾಗಿದ್ದು, ಇದನ್ನು ಎಂದಿಗೂ ಸಹಿಸುವುದಿಲ್ಲ ಎಂದಿದ್ದಾರೆ.
ಕಾಂತರಾಜ್ ಹಾಗೂ ಜಯಪ್ರಕಾಶ್ ವರದಿ ವಿರೋಧಿಸಿ ಜನಸಮುದಾಯದಲ್ಲಿ ಬೇಗುದಿ ಹೆಚ್ಚುತ್ತಿದ್ದಂತೆ ಒಕ್ಕಲಿಗ ಹಾಗೂ ವೀರಶೈವ/ಲಿಂಗಾಯತ ಶಾಸಕರು ಪ್ರತ್ಯೇಕವಾಗಿ ಸಭೆಗಳನ್ನು ಮಾಡಿದ್ದಾರೆ.
ಇದರ ನಡುವೆ ವರದಿ ಬಗ್ಗೆ ಚರ್ಚಿಸಿ, ಮುಂದಿನ ತೀರ್ಮಾನ ಕೈಗೊಳ್ಳಲು, ಮುಖ್ಯಮಂತ್ರಿ, ಗುರುವಾರ ಸಂಜೆ ವಿಶೇಷ ಸಚಿವ ಸಂಪುಟ ಸಭೆ ಕರೆದಿದ್ದಾರೆ.
