ಬೆಂಗಳೂರು:ಹಿಂದುಳಿದವರ ಹೆಸರಿನಲ್ಲಿ ತಮ್ಮ ಸಮುದಾಯಕ್ಕೆ ಅತೀ ಹೆಚ್ಚು ಪಾಲು ಬೆಣ್ಣೆ ತಿನ್ನಿಸಿ, ಬೇರೆಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಮ ಹಾಕಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
2ಎ ಪ್ರವರ್ಗದಲ್ಲಿ ಅತಿ ಹೆಚ್ಚು ಬೆಣ್ಣೆ ತಿಂದಿರುವವರು ಯಾರೆಂಬ ಕುರಿತು ಶ್ವೇತಪತ್ರ ಹೊರಡಿಸಿ, ಅತೀ ಹಿಂದುಳಿದ 2ಎ ಪ್ರವರ್ಗದಲ್ಲಿ ಸಿಂಹ ಪಾಲು ಯಾರು ಪಡೆದಿದ್ದಾರೆ ಎಂಬ ದಾಖಲೆಗಳನ್ನು ಬಹಿರಂಗ ಪಡಿಸುವಂತೆ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.
ಹೆಚ್ಚು ನುಂಗಿದವರು ಯಾರು
ಈ ಸಂಬಂಧ ಟ್ವೀಟ್ ಮಾಡಿರುವ ಕುಮಾರಸ್ವಾಮಿ, 2ಎ ಪ್ರವರ್ಗದಲ್ಲಿ 101 ಜಾತಿಗಳಿವೆ, 15% ಮೀಸಲು ಪಾಲು ಇದೆ, ಹೆಚ್ಚು ನುಂಗಿದವರು ಯಾರು ದೇವರು.., ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ಕಳೆದ 20 ವರ್ಷಗಳಲ್ಲಿ ಎ, ಬಿ, ಸಿ, ಡಿ ಗ್ರೂಪ್‌ಗಳಲ್ಲಿ ನಡೆದಿರುವ ನೇಮಕಾತಿ, ವೃತ್ತಿಪರ ಕೋರ್ಸ್ ಪ್ರವೇಶ ಇನ್ನಿತರ ಎಲ್ಲಾ ಸೌಲಭ್ಯಗಳ ಅಂಕಿ-ಅಂಶಗಳು ಸುಳ್ಳು ಹೇಳುತ್ತವೆಯೇ.
2ಎ ಪ್ರವರ್ಗದಲ್ಲಿ ಇರುವ ಮೀಸಲಾತಿಯ ಬಹುತೇಕ ಸೌಲಭ್ಯವನ್ನು ಒಂದು ಸಮುದಾಯಕ್ಕೆ ಬಿಟ್ಟು ಉಳಿದ 100 ಜಾತಿಗಳು ಉದ್ಯೋಗ, ಶೈಕ್ಷಣಿಕ ಹಾಗೂ ಉಳಿದ ವಿಚಾರಗಳಲ್ಲಿ ತಮ್ಮ ಪಾಲನ್ನು ಪಡೆದುಕೊಳ್ಳದೆ, ಲಿಂಗಾಯತ, ಒಕ್ಕಲಿಗರನ್ನು ಏಕೆ ದ್ವೇಷಿಸುತ್ತೀರಿ.
ನಿಮ್ಮ ಹಕ್ಕು ಪಡೆದುಕೊಳ್ಳಿ
ಸರ್ಕಾರದಲ್ಲೇ ಎಲ್ಲಾ ದಾಖಲೆಗಳು ಮತ್ತು ಅಂಕಿ-ಅಂಶಗಳಿವೆ, ಅದನ್ನು ತಿಳಿದು, ನೀವು ಹೋರಾಟಕ್ಕಿಳಿದು, ನಿಮ್ಮ ಹಕ್ಕು ಪಡೆದುಕೊಳ್ಳಿ ಎಂದು ಪ್ರವರ್ಗದಲ್ಲಿನ 100 ಜಾತಿಗಳಿಗೆ ಕಿವಿಮಾತು ಹೇಳಿದ್ದಾರೆ.
ವೀರಶೈವ/ಲಿಂಗಾಯತ ಮತ್ತು ಒಕ್ಕಲಿಗರ ಕಡೆ ಬೆರಳು ತೋರಿಸಿ, ನಿಮ್ಮ ಮೂಗಿಗೆ ಬೆಣ್ಣೆ ಕೊಸರು ಸವರುತ್ತಿದ್ದಾರೆ, ನಿಮ್ಮ ನ್ಯಾಯಯುತ ಪಾಲಿನಲ್ಲಿ ಸಿಂಹ ಪಾಲು ಕಬಳಿಸಿದ್ದು ಯಾರೆಂದು ಗೊತ್ತಿದೆ, ಆದರೂ ಏಕೆ ಸುಮ್ಮನಿದ್ದೀರಿ ಎಂದು ಹಿಂದುಳಿದ ಜಾತಿಗಳ ಮುಖಂಡರನ್ನು ಪ್ರಶ್ನಿಸಿದ್ದಾರೆ.
ಲಿಂಗಾಯತರು, ಒಕ್ಕಲಿಗರನ್ನು ಬೈದರೆ ನಿಮ್ಮ ಹೊಟ್ಟೆ ತುಂಬುವುದೇ, ನಿಮ್ಮ ಮಕ್ಕಳಿಗೆ ನ್ಯಾಯ ಸಿಗುವುದೇ, ಈಗಲಾದರೂ ಅರ್ಥ ಮಾಡಿಕೊಂಡು ನಿಮ್ಮ ಹಕ್ಕಿಗಾಗಿ ಹೋರಾಟ ಮಾಡಿ.
ಮಲ್ಲೇಶ್ವರದ ಸಿಇಟಿ ಸೆಲ್‌ನಲ್ಲಿ ಎಲ್ಲ ದಾಖಲೆಗಳಿವೆ, ಅವುಗಳನ್ನು ಒಮ್ಮೆ ಪರಿಶೀಲಿಸಿ ಎಂದು ಈ ಪ್ರವರ್ಗದ ಉಳಿದ 100 ಜಾತಿಗಳಿಗೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
