ಬೆಂಗಳೂರು:ಜಾತಿ ಗಣತಿ ಅಂಕಿ, ಸಂಖ್ಯೆಗಳ ಗೊಂದಲ ನಿವಾರಿಸಲು ಸಚಿವ ಸಂಪುಟದ ಉಪಸಮಿತಿ, ಇಲ್ಲವೇ ಮುಖ್ಯಕಾರ್ಯದರ್ಶಿಗಳ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆ ಬಗ್ಗೆ ನಾಳೆ ನಡೆಯುವ ವಿಶೇಷ ಮಂತ್ರಿಮಂಡಲ ಸಭೆಯಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ.
ಕಾಂತರಾಜ್ ಹಾಗೂ ಜಯಪ್ರಕಾಶ್ ಹೆಗಡೆ ಅವರುಗಳು ನೀಡಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷಾ ವರದಿ ಬಗ್ಗೆ ಚರ್ಚಿಸಿ ಸರ್ಕಾರದ ಮುಂದಿನ ನಡೆಯ ತೀರ್ಮಾನ ಕೈಗೊಳ್ಳಲೆಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಸಂಜೆ ಈ ಸಭೆ ಕರೆದಿದ್ದಾರೆ.
ಅನೇಕ ಬದಲಾವಣೆ
ಆಯೋಗ ನೀಡಿರುವ ಅಂಕಿ-ಅಂಶಗಳು ಬಯಲುಗೊಂಡ ನಂತರ ಅನೇಕ ಬದಲಾವಣೆಗಳಾಗಿವೆ, ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ ಸೇರಿದಂತೆ ಮುಂದುವರೆದ ಜಾತಿಗಳು ವರದಿಯನ್ನು ತಿರಸ್ಕರಿಸಿವೆ.
ವರದಿ ಅನುಷ್ಟಾನಕ್ಕೆ ಹೊರಟರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಈ ಸಮುದಾಯಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿರುವುದಲ್ಲದೆ, ಬೀದಿಗಿಳಿದು ಹೋರಾಟ ಮಾಡುವುದಾಗಿಯೂ ತಿಳಿಸಿವೆ.
ಇದರ ನಡುವೆ ಆಡಳಿತದಲ್ಲಿನ ವೀರಶೈವ/ಲಿಂಗಾಯತ ಸಮುದಾಯದ ಸಚಿವರು ಮತ್ತು ಶಾಸಕರು ಪ್ರತ್ಯೇಕ ಸಭೆಗಳನ್ನು ನಡೆಸಿ ತಮ್ಮ ನಿಲುವನ್ನು ಸಂಪುಟದ ಮುಂದಿಡಲು ತೀರ್ಮಾನಿಸಿದ್ದಾರೆ.
ಸಂಪುಟದ ನಿರ್ಣಯ
ಯಾರು ಏನೇ ಮಾಡಿದರೂ ಮುಖ್ಯಮಂತ್ರಿ ಅವರು ಅಂತಿಮವಾಗಿ ಯಾವ ತೀರ್ಮಾನ ಕೈಗೊಳ್ಳುತ್ತಾರೋ, ಅದೇ ಸಂಪುಟದ ನಿರ್ಣಯವಾಗಲಿದೆ.
ವರದಿ ವಿರೋಧಿಸುವ ಸಚಿವರು ಸಭೆಯಲ್ಲಿ ತಮ್ಮ ಅಭಿಪ್ರಾಯ ತಿಳಿಸಬಹುದೇ ಹೊರತು, ಹೀಗೇ ಮಾಡಿ ಎಂದು ಮುಖ್ಯಮಂತ್ರಿ ಮೇಲೆ ಒತ್ತಡ ಹೇರುವ ತಾಕತ್ತು ಇಲ್ಲ.
ಪಕ್ಷದ ವರಿಷ್ಠರ ಕಡೆ ಬೆಟ್ಟು ಮಾಡಿ, ಮುಖ್ಯಮಂತ್ರಿ, 10 ವರ್ಷಗಳಿಂದ ಗೊಂದಲಕ್ಕೆ ಸಿಲುಕಿದ್ದ ವರದಿಯನ್ನು ಬಹಿರಂಗ ಪಡಿಸಿದ್ದಾರೆ.
ವರಿಷ್ಠರ ಅಸ್ತ್ರ ಬಳಕೆ
ಮುಖ್ಯಮಂತ್ರಿ ಇಚ್ಛೆಯಂತೆ ಇದುವರೆಗೂ ಎಲ್ಲವೂ ನಡೆದಿದೆ, ನಾಳೆಯ ಸಂಪುಟ ಸಭೆಯಲ್ಲೂ ವರಿಷ್ಠರ ಅಸ್ತ್ರ ಬಳಸಿ ತಮ್ಮ ಸಹೋದ್ಯೋಗಿಗಳನ್ನು ಕಟ್ಟಿ ಹಾಕಿ, ತಾವು ಏನು ಮಾಡಬೇಕೆಂದಿದ್ದಾರೋ, ಅದೇ ತೀರ್ಮಾನ ಕೈಗೊಳ್ಳಲಿದ್ದಾರೆ.
ಮುಂದುವರೆದ ಜನಾಂಗದ ಪ್ರಭಾವೀ ಸಚಿವರು, ರಾಜಕೀಯ ಭವಿಷ್ಯದ ದೃಷ್ಟಿಯಿಂದ ವರಿಷ್ಟರನ್ನಾಗಲೀ, ಮುಖ್ಯಮಂತ್ರಿಯನ್ನಾಗಲೀ ಎದುರು ಹಾಕಿಕೊಳ್ಳಲು ಇಚ್ಛಿಸುವುದಿಲ್ಲ.
ತಮ್ಮ ಸಮುದಾಯಗಳಿಂದ ಎಷ್ಟೇ ಒತ್ತಡ ಬಂದರೂ ಯಾವ ಸಚಿವರೂ ಈ ವಿಷಯದ ಬಗ್ಗೆ ಬಹಿರಂಗ ಹೇಳಿಕೆ ನೀಡಿಲ್ಲ, ಎಲ್ಲರೂ ನಾಳಿನ ಮಂತ್ರಿಮಂಡಲ ಸಭೆ ಕಡೆಗೇ ಬೆಟ್ಟು ತೋರಿಸಿದ್ದಾರೆ.
ಸಚಿವರುಗಳ ಸಲಹೆಗಳನ್ನು ಪಡೆಯಲಿರುವ ಮುಖ್ಯಮಂತ್ರಿ ಅವರು, ವರದಿ ಅನುಷ್ಟಾನ ಸಂಬಂಧ ಮತ್ತೊಂದು ವರದಿ ತರಿಸಿಕೊಳ್ಳಲು ಒಂದು ಸಮಿತಿ ರಚಿಸಲಿದ್ದಾರೆ ಎಂಬ ದಟ್ಟ ವದಂತಿ ರಾಜಕೀಯ ವಲಯಗಳಲ್ಲಿ ಕೇಳಿಬರುತ್ತಿದೆ.
