ಮೂಡದ ಒಮ್ಮತ; ಮತ್ತೊಮ್ಮೆ ಸಂಪುಟ ಸಭೆ ಮುಂದೂಡಿಕೆ
ಬೆಂಗಳೂರು : ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನೀಡಿರುವ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಗಣತಿಯ ವರದಿ ಕುರಿತಂತೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪರ ಮತ್ತು ವಿರೋಧದ ಅಭಿಪ್ರಾಯಗಳು ತೀವ್ರ ಸ್ವರೂಪ ಪಡೆದುಕೊಂಡ ಪರಿಣಾಮ ಯಾವುದೇ ತೀರ್ಮಾನ ಕೈಗೊಂಡಿಲ್ಲ.
ವರದಿ ಅನುಷ್ಠಾನ ಕುರಿತಂತೆ ಸಮಗ್ರ ಚರ್ಚೆಗೆ ಮತ್ತೊಂದು ಬಾರಿ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಬಹುತೇಕ ಮೇ 2 ರಂದು ಇದಕ್ಕಾಗಿ ವಿಶೇಷ ಸಂಪುಟ ಸಭೆ ನಡೆಯುವ ಸಾಧ್ಯತೆ ಇದೆ.
ವರದಿ ಅನುಷ್ಠಾನ ಕುರಿತಂತೆ ಇಂದು ಕರೆಯಲಾಗಿದ್ದ ವಿಶೇಷ ಸಂಪುಟ ಸಭೆಯಲ್ಲಿ ವರದಿಯ ಬಗ್ಗೆ ಎಲ್ಲಾ ಮಂತ್ರಿಗಳು ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ಸೇರಿದ ಮಂತ್ರಿಗಳು ವರದಿಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಅಂಕಿ- ಅಂಶಗಳು ಗೊಂದಲದಿಂದ ಕೂಡಿದ್ದು ಇದನ್ನು ತಿರಸ್ಕರಿಸಿ ಮತ್ತೊಂದು ಸಮೀಕ್ಷೆ ನಡೆಸಲು ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ ಹಿಂದುಳಿದ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳಿಗೆ ಸೇರಿದ ಮಂತ್ರಿಗಳು ಸದ್ಯಕ್ಕೆ ಈ ವರದಿಯನ್ನು ಅಂಗೀಕರಿಸಬೇಕು. ವರದಿಯ ಶಿಫಾರಸುಗಳನ್ನು ಆದರಿಸಿ ಹಿಂದುಳಿದ ವರ್ಗಗಳಿಗೆ ನೀಡಲಾಗುತ್ತಿರುವ ಮೀಸಲಾತಿಯ ಪ್ರಮಾಣವನ್ನು ಹೆಚ್ಚಳ ಮಾಡಲು ಅವಕಾಶ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇದಕ್ಕಾಗಿ ಸಂವಿಧಾನದ ಒಂಬತ್ತನೇ ಶೆಡ್ಯೂಲ್ ನಲ್ಲಿ ತಿದ್ದುಪಡಿ ಮಾಡಲು ಆಗ್ರಹಿಸಿ ನಿರ್ಣಯ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಒಂದು ಹಂತದಲ್ಲಿ ಏರು ಧ್ವನಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವರದಿಯಲ್ಲಿ ನೀಡಿರುವ ಕೆಲವು ಅಂಶಗಳು ಗೊಂದಲಕ್ಕೆ ಕಾರಣವಾಗಿವೆ. ಒಂದೊಂದು ಪುಟದಲ್ಲಿ ಒಂದೊಂದು ರೀತಿಯ ವಿವರಗಳು ಇವೆ. ಆರ್ಥಿಕ ಅಸಮಾನತೆಯ ಕುರಿತು ಸಮೀಕ್ಷೆ ನಡೆಸಿ ಆಯೋಗ ನೀಡಿರುವ ವರದಿ ತುಂಬಾ ಗೊಂದಲದಿಂದ ಕೂಡಿದೆ ಎಂದು ಹೇಳಿದ್ದಾರೆ.
ಕಾಂತರಾಜು ನೇತೃತ್ವದ ಆಯೋಗ ನಡೆಸಿದ ಸಮೀಕ್ಷೆಯ ದತ್ತಾಂಶಗಳನ್ನು ಆದರಿಸಿ, ಜಯಪ್ರಕಾಶ್ ಹೆಗಡೆ ನೇತೃತ್ವದ ಆಯೋಗ ವರದಿ ತಯಾರಿಸಿದೆ. ಈ ವೇಳೆ ಜಯಪ್ರಕಾಶ್ ಹೆಗಡೆ ಆರ್ಥಿಕ ಅಸಮಾನತೆ ತಿಳಿಯಲು ಸಿದ್ಧಪಡಿಸಿರುವ ಪ್ರಶ್ನಾವಳಿಗಳ ಬಗ್ಗೆ ತಮ್ಮ ವರದಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು ಎಂದು ಗೊತ್ತಾಗಿದೆ.
ಪ್ರಮುಖ ಜಾತಿಗಳ ಉಪಜಾತಿಗಳನ್ನು ವಿವರಗಳನ್ನು ಸಂಗ್ರಹಿಸುವಲ್ಲಿ ಆಯೋಗ ಸೂಕ್ತ ಮಾನದಂಡಗಳನ್ನು ಪರಿಗಣಿಸಿಲ್ಲ ಮನೆ ಮನೆ ಸಮೀಕ್ಷೆ ನಡೆಸಿ ನೀಡಿರುವ ಅಂಕಿ- ಅಂಶ ಮತ್ತು ವರದಿಯ ದತ್ತಾಂಶದ ಅಂಕಿ- ಅಂಶಗಳಲ್ಲಿ ವ್ಯತ್ಯಾಸವಿದೆ ಎಂಬುದನ್ನು ವಿವರವಾಗಿ ಸಭೆಯ ಗಮನಕ್ಕೆ ತಂದರು ಎಂದು ಮೂಲಗಳು ತಿಳಿಸಿವೆ.
ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ವರದಿಯಲ್ಲಿನ ಬಹುತೇಕ ಅಂಶಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ಯಾರು ಸಮೀಕ್ಷೆಗೆ ವಿರೋಧವಿಲ್ಲ. ಆದರೆ ಈ ವರದಿಯಲ್ಲಿನ ಅಂಶಗಳನ್ನು ಒಪ್ಪಲು ಸಾಧ್ಯವಿಲ್ಲ. ಇದನ್ನು ಸರ್ಕಾರ ಒಪ್ಪಿದರೆ ದೊಡ್ಡ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಹೀಗಾಗಿ ಮರು ಸಮೀಕ್ಷೆಗೆ ನಿರ್ಧಾರ ತೆಗೆದುಕೊಳ್ಳುವುದು ಉಚಿತವಾಗಿದೆ ಎಂದು ಹೇಳಿದರೆನ್ನಲಾಗಿದೆ.
ಈ ವೇಳೆ ಮಾತನಾಡಿದ ಕಾರ್ಮಿಕ ಮಂತ್ರಿ ಸಂತೋಷ್ ಲಾಡ್ ಅವರು, ನೀವು ಹೇಳುತ್ತಿರುವ ಅಭಿಪ್ರಾಯ ಮೇಲ್ನೋಟಕ್ಕೆ ಸೂಕ್ತವೆನಿಸುತ್ತದೆ. ಆದರೆ ಅದೇ ಕಾರಣಕ್ಕೆ ವರದಿಯನ್ನು ತಿರಸ್ಕರಿಸುವುದು ಸರಿಯಲ್ಲ. ಅದರ ಬದಲಿಗೆ ಹಿರಿಯ ಅಧಿಕಾರಿಗಳು ಮತ್ತು ಸಾಮಾಜಿಕ ತಜ್ಞರ ಸಮಿತಿಯೊಂದನ್ನು ರಚನೆ ಮಾಡಿ ವರದಿಯ ಬಗ್ಗೆ ಅಧ್ಯಯನ ಮಾಡಲು ತಿಳಿಸೋಣ. ಅವರ ಅಭಿಪ್ರಾಯವನ್ನು ಆಧರಿಸಿ ಮತ್ತೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಬಹುದಾಗಿದೆ ಎಂದು ಹೇಳಿದರೆ, ಇನ್ನು ಕೆಲ ಮಂತ್ರಿಗಳು ತಾವು ಇನ್ನೂ ವರದಿಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿಲ್ಲ. ಅದಕ್ಕೆ ಇನ್ನಷ್ಟು ಸಮಯಾವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.
ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಮಂತ್ರಿಗಳು ಮತ್ತೊಮ್ಮೆ ವರದಿಯ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಿ ಲಿಖಿತ ಅಭಿಪ್ರಾಯದೊಂದಿಗೆ ಮುಂದಿನ ಸಂಪುಟ ಸಭೆಗೆ ಬನ್ನಿ. ಅಲ್ಲಿ ಎಲ್ಲವನ್ನು ಕೂಲಂಕುಶವಾಗಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳೋಣ ಎಂದು ಸಲಹೆ ಮಾಡಿದ ಹಿನ್ನೆಲೆಯಲ್ಲಿ ಸಂಪುಟ ಯಾವುದೇ ತೀರ್ಮಾನ ಕೈಗೊಳ್ಳದೆ ಮುಂದೂಡಲ್ಪಟ್ಟಿದೆ.
ಮೇ 2ಕ್ಕೆ ಸಂಪುಟ ಸಭೆ
ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಕೆ. ಪಾಟೀಲ್, ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಆರ್ಥಿಕ ಗಣತಿಯ ವರದಿ ಕುರಿತಂತೆ ಇಂದಿನ ಸಂಪುಟ ಸಭೆಯಲ್ಲಿ ಸಮಗ್ರ ಚರ್ಚೆ ನಡೆಯಿತಾದರೂ ಯಾವುದೇ ತೀರ್ಮಾನ ತೆಗೆದುಕೊಳ್ಳಲಿಲ್ಲ ಎಂದು ತಿಳಿಸಿದರು.
ಸಂಪುಟ ಸಭೆಯಲ್ಲಿ ಎಲ್ಲ ಸಚಿವರು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಮತ್ತಷ್ಟು ವಿವರಗಳನ್ನು ನೀಡಬೇಕು ಎಂಬ ನಿಲುವು ಹೊಂದಿದ್ದಾರೆ. ಹೀಗಾಗಿ ಮತ್ತೊಮ್ಮೆ ಈ ಬಗ್ಗೆ ಚರ್ಚಿಸಲು ಸಂಪುಟ ಸಭೆ ಸೇರಬೇಕು ಎಂದು ನಿರ್ಧರಿಸಲಾಗಿದೆ. ಆ ಸಭೆಯಲ್ಲಿ ಮತ್ತೊಮ್ಮೆ ಸಮಗ್ರವಾಗಿ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಮುಂದಿನ ಸಂಪುಟ ಸಭೆ ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಆ ಪ್ರದೇಶಕ್ಕೆ ಸಂಬಂಧಪಟ್ಟ ವಿಷಯಗಳ ಕುರಿತು ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ ಹೀಗಾಗಿ ಆ ಸಭೆಯಲ್ಲಿ ಈ ವರದಿ ಕುರಿತು ಯಾವುದೇ ಚರ್ಚೆ ನಡೆಯುವುದಿಲ್ಲ ಎಂದು ತಿಳಿಸಿದರು.
ಈ ಸಂಪುಟ ಸಭೆ ಮುಗಿದ ನಂತರ ಬಹುತೇಕ ಮೇ 2 ರಂದು ಬೆಂಗಳೂರಿನಲ್ಲಿ ವಿಶೇಷ ಸಂಪುಟ ಸಭೆ ನಡೆಸಿ ಈ ವರದಿ ಕುರಿತು ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು ಎಂದು ಹೇಳಿದರು.
