ಬೆಂಗಳೂರು:ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷಾ ವರದಿಯ ಅಂಕಿ-ಅಂಶಗಳ ಸೋರಿಕೆಯಿಂದ ಎದುರಾದ ವಿರೋಧಕ್ಕೆ ಮಣಿದಿರುವ ರಾಜ್ಯ ಸರ್ಕಾರ ದತ್ತಾಂಶಗಳ ಮರುಪರಿಶೀಲನೆಗೆ ಮುಂದಾಗಿದೆ.
ವರದಿ ಅನುಷ್ಟಾನ ಸಂಬಂಧ ಗುರುವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂತ್ರಿಗಳಿಂದಲೇ ದತ್ತಾಂಶಗಳ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ತಜ್ಞರ ಸಮಿತಿ ರಚನೆ
ಮರುಪರಿಶೀಲನೆಗೂ ಮುನ್ನ, ಪರಿಶಿಷ್ಟ ಜಾತಿ ಹಾಗೂ ವರ್ಗದ ಒಳಮೀಸಲಾತಿ ಗೊಂದಲ ನಿವಾರಿಸಲು ತಜ್ಞರ ಸಮಿತಿ ರಚಿಸಿರುವಂತೆ ಇಲ್ಲಿಯೂ ಅದೇ ಮಾದರಿ ಅನುಸರಿಸಲು ನಿರ್ಧರಿಸಲಾಗಿದೆ.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಮುನಿಯಪ್ಪ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ಹಾಗೂ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ರಚಿಸಲಾಗಿದೆ.
ಇದೇ ಮಾನದಂಡ ಇಟ್ಟುಕೊಂಡು ಕಾಂತರಾಜ್ ವರದಿಯಲ್ಲಿನ ದತ್ತಾಂಶಗಳ ಮರುಪರಿಶೀಲನೆಗೆ ಸಚಿವ ಸಂಪುಟ ಉಪಸಮಿತಿ ರಚಿಸಿ, ಅವರಿಂದ ಶಿಫಾರಸು ಪಡೆಯಲಿದೆ.

ಗೊಂದಲಕ್ಕೆ ತಾತ್ಕಾಲಿಕ ಇತಿಶ್ರೀ
ಸಂಪುಟದ ಉಪಸಮಿತಿ ಶಿಫಾರಸಿನ ಮೇರೆಗೆ ದತ್ತಾಂಶಗಳ ಮರುಪರಿಶೀಲನೆಗೆ ಮತ್ತೊಂದು ಸಮಿತಿ ರಚಿಸುವ ಮೂಲಕ ವರದಿ ಗೊಂದಲಕ್ಕೆ ತಾತ್ಕಾಲಿಕ ಇತಿಶ್ರೀ ಹಾಡಲು ಸರ್ಕಾರ ಮುಂದಾಗಿದೆ.
ದತ್ತಾಂಶಗಳ ಬಗ್ಗೆ ಸಂಪುಟದಲ್ಲೇ ತೀವ್ರ ವಿರೋಧ ವ್ಯಕ್ತವಾಗುವುದೆಂಬ ನಿರೀಕ್ಷೆ ಇರಲಿಲ್ಲ, ಆದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಈಶ್ವರ್ ಖಂಡ್ರೆ, ಎಸ್.ಎಸ್.ಮಲ್ಲಿಕಾರ್ಜುನ್, ಶಿವಾನಂದ ಪಾಟೀಲ್ ಹಾಗೂ ಚಲುವರಾಯಸ್ವಾಮಿ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ವಿರೋಧಿಸಿ, ಗಟ್ಟಿಧ್ವನಿಯಲ್ಲಿ ವರದಿ ಒಪ್ಪದಿರುವಂತೆ ಆಗ್ರಹಪಡಿಸಿದರು.
ವರದಿ ಪರವಾಗಿ ಕೆಲವು ಸಚಿವರು ಬೆಂಬಲಿಸಿ ಮಾತನಾಡಿದರೂ, ಈ ಸಚಿವರುಗಳು ತಮಗೆ ಒದಗಿಸಿದ್ದ ದಾಖಲೆಗಳನ್ನೇ ತೋರಿಸಿ ಪ್ರತಿಭಟಿಸಿ, ಜಯಪ್ರಕಾಶ್ ಹೆಗ್ಡೆ ಅವರು ಕಾಂತರಾಜ್ ವರದಿ ಬಗ್ಗೆ ಎತ್ತಿರುವ ಆಕ್ಷೇಪಗಳನ್ನೇ ಅಸ್ತ್ರವಾಗಿಸಿಕೊಂಡು ಮುಂದಿನ ಕ್ರಮಗಳಿಗೆ ತಾತ್ಕಾಲಿಕ ತಡೆ ಒಡ್ಡಿದರು.
ಮುಖ್ಯಮಂತ್ರಿ ಸಮಜಾಯಿಷಿ
ಈ ಸಂದರ್ಭದಲ್ಲಿ ಮಧ್ಯೆಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ವರದಿ ಜಾರಿ ಮಾಡುವಂತೆ ಸೂಚಿಸಿದ್ದು, ಸಣ್ಣ-ಪುಟ್ಟ ದೋಷಗಳಿದ್ದರೆ ಸರಿಪಡಿಸಿಕೊಳ್ಳೋಣ ಎಂದು ಸಮಜಾಯಿಷಿಗೆ ಮುಂದಾದರು.
ತಕ್ಷಣವೇ ಶಿವಕುಮಾರ್ ಮಧ್ಯೆಪ್ರವೇಶಿಸಿ, ಮೀಸಲಾತಿ ಕಲ್ಪಿಸಲು ನಮ್ಮ ವಿರೋಧ ಇಲ್ಲ, ಕೇವಲ ಒಕ್ಕಲಿಗ, ವೀರಶೈವ/ಲಿಂಗಾಯತ ಸಮುದಾಯದ ಅಂಕಿ-ಅಂಶಗಳಷ್ಟೇ ಅಲ್ಲ, ಇತರೆ ಸಮುದಾಯಗಳಿಂದಲೂ ಅಂಕಿ-ಸಂಖ್ಯೆಗೆ ಅಪಸ್ವರ ಎದ್ದಿದೆ, ನಾವು ದುಡುಕಿದರೆ, ಈ ಹಿಂದೆ ಮೊಯಿಲಿ ನೇತೃತ್ವದಲ್ಲಿ ವಿಧಾನಸಭಾ ಚುನಾವಣೆ ಎದುರಿಸಿದಾಗ ಪಕ್ಷಕ್ಕೆ ಆದ ಸ್ಥಿತಿಯೇ ಬರಲಿದೆ.
ಮೀಸಲಾತಿ ಕಲ್ಪಿಸುವ ವಿಷಯದಲ್ಲಿ ಪಕ್ಷದ ನಿಲುವಿನಲ್ಲಿ ಬದಲಾವಣೆ ಇಲ್ಲ, ಆದರೆ, ಹೆಗ್ಡೆ ಅವರೇ ಹೇಳಿರುವಂತೆ ತಪ್ಪುಗಳನ್ನು ತಿದ್ದಿ ಎಲ್ಲರಿಗೂ ನ್ಯಾಯ ಕೊಡಿಸೋಣ.

ಒಳಮೀಸಲಾತಿ ಮಾನದಂಡ
ದತ್ತಾಂಶ ಮರುಪರಿಶೀಲನೆ ಆಗದಹೊರತು ವರದಿ ಅನುಷ್ಟಾನ ಸಾಧ್ಯವಿಲ್ಲ, ಒಳಮೀಸಲಾತಿಗೆ ಯಾವ ರೀತಿ ಮಾನದಂಡ ಅನುಸರಿಸಿದ್ದಿರೋ ಅದನ್ನೇ ಇಲ್ಲಿಯೂ ಅನುಸರಿಸಿ ನಂತರ ಸರ್ಕಾರ ತೀರ್ಮಾನಿಸಲಿ ಎಂದು ಗಟ್ಟಿಧ್ವನಿಯಲ್ಲಿ ಹೇಳಿದರು.
ಉಪಮುಖ್ಯಮಂತ್ರಿ ಸೇರಿದಂತೆ ಕೆಲವು ಸಚಿವರು ವ್ಯಕ್ತಪಡಿಸಿದ ನಿಲುವಿಗೇ ಅಂಟಿಕೊಂಡಿದ್ದರಿಂದ ಮಂತ್ರಿಮಂಡಲದಲ್ಲೇ ವರದಿಗೆ ಭಿನ್ನಾಭಿಪ್ರಾಯ ವ್ಯಕ್ತವಾದಾಗ ಮಧ್ಯೆ ಪ್ರವೇಶಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಮತ್ತೊಂದು ಸಭೆ ಮಾಡೋಣ, ಆ ಸಭೆಗೆ ಬರುವ ಮುನ್ನ ಸಚಿವರುಗಳು ಲಿಖಿತ ವರದಿ ನೀಡಲಿ ನಂತರ ಯಾವ ಸಮಾಜಕ್ಕೂ ಅನ್ಯಾಯವಾಗದಂತೆ ತೀರ್ಮಾನ ಕೈಗೊಳ್ಳೋಣ ಎಂದು ವಿಷಯ ತಿಳಿಗೊಳಿಸಿದರು.
