ಅವತ್ತು ಮಾಜಿ ಪ್ರಧಾನಿ ಇಂದಿರಾಗಾಂಧಿ ತಮ್ಮ ಪುತ್ರ ಸಂಜಯ್ ಗಾಂಧಿ ಅವರೊಂದಿಗೆ ಕರ್ನಾಟಕಕ್ಕೆ ಬಂದರು, ರಾಜಕೀಯವಾಗಿ ಬಸವಳಿದಿದ್ದ ಅವರಿಗೆ ತುರ್ತು ವಿಶ್ರಾಂತಿ ಬೇಕೆನಿಸಿತ್ತು.
ಹೀಗಾಗಿ ಪಕ್ಷದ ಸುಭದ್ರ ನೆಲೆಯಾಗಿದ್ದ ಕರ್ನಾಟಕಕ್ಕೆ ಬಂದ ಅವರು ಕೊಡಗು ಜಿಲ್ಲೆಯಲ್ಲಿದ್ದ ಕಾಂಗ್ರೆಸ್ ನಾಯಕರೊಬ್ಬರ ಎಸ್ಟೇಟ್‌ನಲ್ಲಿ ಉಳಿದುಕೊಂಡರು.
ಅಷ್ಟೊತ್ತಿಗಾಗಲೇ 1977ರ ಲೋಕಸಭಾ ಚುನಾವಣೆ ಮುಗಿದು ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡಿತ್ತು, ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳು ಕಾಂಗ್ರೆಸ್ಸಿಗೆ 144 ಕ್ಷೇತ್ರಗಳಲ್ಲಿ ಗೆಲುವು ದಕ್ಕಿಸಿಕೊಟ್ಟಿದ್ದರೆ, ಉತ್ತರ ಭಾರತ, ಮಧ್ಯ ಭಾರತದ ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾತಿಹೀನ ಸೋಲು ಅನುಭವಿಸಿತ್ತು.
ಈ ಸೋಲಿನ ಪರಿಣಾಮ ಹೇಗಿತ್ತೆಂದರೆ ತಮ್ಮ ರಾಜಕೀಯ ಭವಿಷ್ಯ ತಳಕಚ್ಚಿತು, ಇನ್ನು ಮೇಲೇಳುವುದು ಕಷ್ಟ ಅಂತ ಇಂದಿರಾಗಾಂಧಿ ಭಾವಿಸಿದ್ದರು.
ಇಂತಹ ಸಂದರ್ಭದಲ್ಲೇ ಅವರಿಗೆ ಕಂಡಿದ್ದು ಕರ್ನಾಟಕ, ಹೀಗಾಗಿ ಇಲ್ಲಿಗೆ ಬಂದವರು ಕೊಡಗು ಜಿಲ್ಲೆಯಲ್ಲಿರುವ ಹಿರಿಯ ಕಾಂಗ್ರೆಸ್ ನಾಯಕರೊಬ್ಬರ ಎಸ್ಟೇಟಿನಲ್ಲಿ ವಿಶ್ರಾಂತಿಗೆ ಅಂತ ಉಳಿದುಕೊಂಡರು.
ಇಂತಹ ದಿನಗಳಲ್ಲೇ ಒಮ್ಮೆ ಇಂದಿರಾಗಾಂಧಿಯವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ದೇವರಾಜ ಅರಸರು ಒಂದು ಸಲಹೆ ನೀಡಿದರು.

’ಮೇಡಂ, ಇಲ್ಲೇ ಪಕ್ಕದ ಜಿಲ್ಲೆಯಲ್ಲಿ ಮರಿದೇವರೊಬ್ಬರಿದ್ದಾರೆ, ವಯಸ್ಸಿನಲ್ಲಿ ತುಂಬ ಚಿಕ್ಕವರು, ಅದರೆ ಜ್ಯೋತಿಷ್ಯ ಹೇಳುವುದರಲ್ಲಿ ಪ್ರಕಾಂಡ ಪಂಡಿತರು, ಹೀಗಾಗಿ ನೀವೊಮ್ಮೆ ಅವರನ್ನು ಭೇಟಿ ಮಾಡಿದರೆ ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ದೊರೆಯಬಹುದು’ ಎಂದರು.
ಎಷ್ಟೇ ಆದರೂ ಇಂದಿರಾಗಾಂಧಿ ಅವರಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪಾರ ನಂಬಿಕೆ, ಹೀಗಾಗಿ ದೇವರಾಜ ಅರಸರು ಈ ಪ್ರಸ್ತಾಪವಿಡುತ್ತಿದ್ದಂತೆಯೇ ’ಓ,ಯಾಕಾಗಬಾರದು ನೋಡೋಣ’ ಎಂದರು.
ಸರಿ, ಇದಾದ ಮರುದಿನವೇ ಅರಸರು ಪಕ್ಕದ ಜಿಲ್ಲೆಗೆ ಇಂದಿರಾಗಾಂಧಿ ಅವರನ್ನು ಕರೆದುಕೊಂಡು ಹೋದರು.
ಹೀಗೆ ಹೋದವರಿಗೆ ಎದುರಾಗಿದ್ದು ತುಂಬ ಚಿಕ್ಕ ವಯಸ್ಸಿನ ಯುವಕ, ಆದರೆ ಇಂದಿರಾಗಾಂಧಿಯವರ ಜಾತಕವನ್ನು ಕೂಲಂಕಷವಾಗಿ ಪರಿಶೀಲಿಸಿದ ಆ ಮರಿದೇವರು, ’ನೀವು ಯೋಚಿಸುವ ಅಗತ್ಯವಿಲ್ಲ, ಇನ್ನು ಕೆಲವೇ ದಿನಗಳಲ್ಲಿ ನೀವು ರಾಜಕೀಯ ಪುನರ್ಜನ್ಮ ಪಡೆಯುತ್ತೀರಿ ಅಂತ ಹೇಳಿದ್ದಲ್ಲದೆ, ಇದಕ್ಕೆ ಹೇಗೆ ಅವಕಾಶವಾಗಲಿದೆ ಅಂತ ಒಗಟೊಂದನ್ನು ಹೇಳಿ ಕಳಿಸಿದರು.
ಹೀಗೆ ಅವರು ಹೇಳಿದ್ದನ್ನು ಕೇಳಿ ವಾಪಸ್ಸು ಬರುವಾಗ ದೇವರಾಜ ಅರಸರು ಆ ಒಗಟಿನ ಸ್ವರೂಪವನ್ನು ಬಿಡಿಸಲು ಯತ್ನಿಸಿದ್ದಲ್ಲದೆ ಆ ಸಂಬಂಧ ಹಲವರ ಜತೆ ಚರ್ಚಿಸಿ, ಈ ಒಗಟಿನ ಅರ್ಥವೇನಿರಬಹುದು ಅಂತ ಸಮಾಲೋಚಿಸಿದರು.
ಈ ಸಂದರ್ಭದಲ್ಲಿ ಅವರಿಗೆ ಚಿಕ್ಕಮಗಳೂರು ಎಂಬ ಉತ್ತರ ದೊರಕಿದೆ, ಅದೇಕೆ ಹಾಗೆ, ಅಂತ ತುಂಬ ಯೋಚಿಸಿದ ಮೇಲೆ, ಚಿಕ್ಕಮಗಳೂರಿನಿಂದ ಲೋಕಸಭೆಗೆ ಸ್ಪರ್ಧಿಸಿದರೆ ಇಂದಿರಾಗಾಂಧಿ ಗೆಲ್ಲುತ್ತಾರೆ, ರಾಜಕೀಯ ಪುನರ್ಜನ್ಮ ಪಡೆಯುತ್ತಾರೆ ಎಂಬ ತೀರ್ಮಾನಕ್ಕೆ ಬಂದರು.

ಇದಾದ ನಂತರ ಇಂದಿರಾಗಾಂಧಿಯವರಿಗೆ ಈ ಕುರಿತು ಹೇಳಿದರೆ ಅವರು ತಕ್ಷಣ ಸಹಮತ ವ್ಯಕ್ತಪಡಿಸಿದರು.
ಯಾವಾಗ ಇಂದಿರಾಗಾಂಧಿ ಒಪ್ಪಿಗೆ ನೀಡಿದರೋ, ಇದಾದ ನಂತರ ಆ ಕ್ಷೇತ್ರದಲ್ಲಿ ಗೆದ್ದು ಸಂಸದರಾಗಿದ್ದ ಡಿ.ಬಿ.ಚಂದ್ರೇಗೌಡರ ಕೈಲಿ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಾಯಿತು, ಹೀಗೆ ಅವರ ರಾಜೀನಾಮೆಯಿಂದ ತೆರವಾದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆ ಕಣಕ್ಕಿಳಿದ ಇಂದಿರಾಗಾಂಧಿ ನಿರಾಯಾಸವಾಗಿ ಜಯ ಗಳಿಸಿದರು.
ಮುಂದೆ ತಾವು ಬದುಕಿರುವವರೆಗೂ ಇಂದಿರಾಗಾಂಧಿ ಅವರು ತಮಗೆ ಭವಿಷ್ಯ ಹೇಳಿದ ಮರಿದೇವರ ಬಗ್ಗೆ ಬಹಳ ಭಕ್ತಿಯಿಂದ ನಡೆದುಕೊಂಡರು.
ಇನ್ನು ಅರಸರಾದರೂ ಅಷ್ಟೇ, ಮರಿದೇವರು ಇದ್ದ ಮಠಕ್ಕೆ ದೊಡ್ಡ ಪ್ರಮಾಣದ ದರಖಾಸ್ತು ಭೂಮಿಯನ್ನು ಮಂಜೂರು ಮಾಡಿಕೊಟ್ಟು, ಆ ಮಠಕ್ಕೆ ಬರುವ ಭಕ್ತಾದಿಗಳಿಗೆ ಭೋಜನಾಲಯ ಕಟ್ಟಲು ನೆರವು ನೀಡಿದರು.
ಅರಸರು ಅಧ್ಯಕ್ಷರಾದ ಕತೆ ಇದು
ಕಾಂಗ್ರೆಸ್ ಪಕ್ಷ ರಾಷ್ಟ್ರ ಮಟ್ಟದಲ್ಲಿ ವಿಭಜನೆಯಾದ ನಂತರ (1969) ಒಂದು ಬಣದ ನಾಯಕಿಯಾಗಿದ್ದ ಇಂದಿರಾಗಾಂಧಿ ವಿವಿಧ ರಾಜ್ಯಗಳಲ್ಲಿ ನಾಯಕರನ್ನು ಹುಡುಕತೊಡಗಿದರು.
ಅದರ ಪ್ರಕಾರ ಕರ್ನಾಟಕದಲ್ಲಿ ಅವರ ಹುಡುಕಾಟಕ್ಕೆ ಸಿಕ್ಕವರು ಕೊಲ್ಲೂರು ಮಲ್ಲಪ್ಪ, ಕುರುಬ ಸಮುದಾಯದ ನಾಯಕರಾಗಿದ್ದ ಕೊಲ್ಲೂರು ಮಲ್ಲಪ್ಪ ತಮ್ಮ ಕಾಂಗ್ರೆಸ್(ಆರ್) ಬಣಕ್ಕೆ ಅಧ್ಯಕ್ಷರಾದರೆ ಬೆಸ್ಟು ಅಂತ ಇಂದಿರಾಗಾಂಧಿ ನಿರ್ಧರಿಸಿದರು.

ಹಾಗಂತಲೇ ಒಂದು ದಿನ ಕೊಲ್ಲೂರು ಮಲ್ಲಪ್ಪನವರನ್ನು ಸಂಪರ್ಕಿಸಿದ ಅವರು, ’ರಾಜ್ಯದಲ್ಲಿ ನೀವು ಅಧ್ಯಕ್ಷರಾಗಿ, ಚುನಾವಣೆಯಲ್ಲಿ ಪಕ್ಷ ಗೆದ್ದರೆ ನೀವು ಮುಖ್ಯಮಂತ್ರಿಯಾಗುತ್ತೀರಿ’ ಎಂದರು.
ಆದರೆ ಇಂದಿರಾಗಾಂಧಿಯವರ ಕೋರಿಕೆಯನ್ನು ನಯವಾಗಿ ತಿರಸ್ಕರಿಸಿದ ಕೊಲ್ಲೂರು ಮಲ್ಲಪ್ಪನವರು, ’ಈ ಜಾಗಕ್ಕೆ ನನ್ನನ್ನು ತರಬೇಡಿ, ಬದಲಿಗೆ ಹಿಂದುಳಿದ ಸಮುದಾಯದಿಂದ ಬಂದ ದೇವರಾಜ ಅರಸರನ್ನು ಅಧ್ಯಕ್ಷರನ್ನಾಗಿ ಮಾಡಿ, ಪಕ್ಷಕ್ಕೂ ಅನುಕೂಲವಾಗುತ್ತದೆ’ ಅಂತ ಸಲಹೆ ನೀಡಿದರು.
ಯಾವಾಗ ಕೊಲ್ಲೂರು ಮಲ್ಲಪ್ಪ ಅವರಂತಹ ಪವರ್‌ಫುಲ್ ಲೀಡರ್ರೇ ಅರಸರ ಹೆಸರನ್ನು ಸೂಚಿಸಿದರೋ, ಆಗ ಇಂದಿರಾಗಾಂಧಿ ಮರುಯೋಚನೆ ಮಾಡಲಿಲ್ಲ.
ಮುಂದೆ ರಾಜ್ಯದಲ್ಲಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್(ಆರ್) ಅಧ್ಯಕ್ಷರಾದ ಅರಸರು ಇತಿಹಾಸ ಬರೆದರು, ಸಾಮಾಜಿಕ ಕ್ರಾಂತಿಯ ಹರಿಕಾರ ಅನ್ನಿಸಿಕೊಂಡರು.
ಹೆಗಡೆ ಬೆನ್ನಿಗೆ ನಿಂತ ಧರ್ಮಾಧಿಕಾರಿ
ಇನ್ನು 1983ರಲ್ಲಿ ಕರ್ನಾಟಕ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ನೋಡಿತಲ್ಲ, ಆ ಸಂದರ್ಭದಲ್ಲಿ ಹಲವರು ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿ ಕಾಣಿಸಿಕೊಂಡರು.
ಇದಕ್ಕಿದ್ದ ಬಹುಮುಖ್ಯ ಕಾರಣವೆಂದರೆ ಮೀಸಳ್ ಭಾಜಿ ಫಲಿತಾಂಶ, ಅವತ್ತು ಕಾಂಗ್ರೆಸ್‌ಗೆ ವಿರುದ್ಧವಾಗಿದ್ದ ಜನತಾಪಕ್ಷ ಮತ್ತು ಕ್ರಾಂತಿರಂಗದಿಂದ ಒಟ್ಟು 95 ಮಂದಿ ಗೆದ್ದಿದ್ದರು.

ಆದರೆ ಇಷ್ಟು ಸ್ಥಾನಗಳನ್ನಿಟ್ಟುಕೊಂಡು ಸರ್ಕಾರ ರಚಿಸುವುದು ಸಾಧ್ಯವಿಲ್ಲದ್ದರಿಂದ 18 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಮತ್ತು 22 ಕ್ಷೇತ್ರಗಳಲ್ಲಿ ಗೆಲುವು ಗಳಿಸಿದ ಪಕ್ಷೇತರರ ಪೈಕಿ ಹಲವರ ಬೆಂಬಲ ಪಡೆಯುವುದು ಅನಿವಾರ್ಯವಾಗಿತ್ತು.
ಇದು ಒಂದು ಕಡೆಗಾದರೆ ಮತ್ತೊಂದು ಕಡೆ ಸಿಎಂ ಗದ್ದುಗೆಗೇರಲು ಹಲವು ನಾಯಕರು ತುದಿಗಾಲಿನಲ್ಲಿ ನಿಂತಿದ್ದರು, ಈ ಪೈಕಿ ಕ್ರಾಂತಿರಂಗದ ನೆಲೆಯಿಂದ ಬಂಗಾರಪ್ಪ, ಜನತಾ ಪಕ್ಷದ ನೆಲೆಯಿಂದ ದೇವೇಗೌಡ, ಎಸ್.ಆರ್.ಬೊಮ್ಮಾಯಿ ಕಾಣಿಸಿಕೊಂಡರೆ ಇನ್ನೂ ಜಲಚರ ಅಬ್ದುಲ್ ನಜೀರ್ ಸಾಬ್ ಅವರನ್ನು ಸಿಎಂ ಹುದ್ದೆಯಲ್ಲಿ ನೋಡಲು ಬಯಸಿದ್ದರು.
ಹೀಗೆ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ಶುರುವಾದ ನಂತರ ಸರ್ವ ಸಮ್ಮತ ಅಭ್ಯರ್ಥಿಯೊಬ್ಬರನ್ನು ಹುಡುಕಲು ಸರ್ಕಸ್ ನಡೆಯಬೇಕಲ್ಲ.
ಹೀಗಾಗಿ ಈ ಜವಾಬ್ದಾರಿಯನ್ನು ಜನತಾಪಕ್ಷದ ನಾಯಕ ರಾಮಕೃಷ್ಣ ಹೆಗಡೆ ಬರಸೆಳೆದು ತಮ್ಮ ಮಡಿಲಿಗೆ ಹಾಕಿಕೊಂಡರು.
ಹೀಗಾಗಿ ಸಿಎಂ ಕ್ಯಾಂಡಿಡೇಟ್ ಅನ್ನು ಆಯ್ಕೆ ಮಾಡಲು ಹೆಗಡೆಯವರ ನಿವಾಸದಲ್ಲೇ ಹೆಚ್ಚು ಸಭೆಗಳು ನಡೆಯತೊಡಗಿದವು, ಇಂತಹ ಸಂದರ್ಭದಲ್ಲೇ ಒಮ್ಮೆ ಹೆಗಡೆಯವರ ಮನೆಯಲ್ಲಿ ಮೀಟಿಂಗು ನಡೆಯುವಾಗ ಚೀಟಿಯೊಂದನ್ನು ಕಳಿಸಿದ ಪ್ರಮುಖರೊಬ್ಬರು, ’ನೀವು ಅಬ್ದುಲ್ ನಜೀರ್ ಸಾಬ್ ಸಿಎಂ ಕ್ಯಾಂಡಿಡೇಟ್ ಆಗಿ ಎಮರ್ಜ್ ಅಗುವಂತೆ ಮಾಡಿ’ ಎಂದು ಸೂಚಿಸಿದ್ದರು.
ಕುತೂಹಲದ ಸಂಗತಿಯೆಂದರೆ ಮೀಟಿಂಗಿನ ನಡುವೆ ತಮ್ಮ ಆಪ್ತ ಕಾರ್ಯದರ್ಶಿ ತಂದುಕೊಟ್ಟ ಆ ಚೀಟಿಯನ್ನು ನೋಡಿದ ಹೆಗಡೆಯವರು ಮಹಡಿಯಿಂದ ಕೆಳಗಿಳಿದು ಬಂದರು, ಹೀಗೆ ಬಂದವರು ಚೀಟಿ ತಂದುಕೊಟ್ಟವರ ಬಳಿ, ’ನಾನು ನಜೀರ್ ಸಾಬ್ ಅವರ ಪರವಾದ ಅಭಿಪ್ರಾಯ ಹೊರಹೊಮ್ಮಿಸಲು ಯತ್ನಿಸುತ್ತಿದ್ದೇನೆ’ ಅಂತ ಭರವಸೆ ಕೊಟ್ಟು ಕಳಿಸಿದರು.

ಆದರೆ ನೋಡ ನೋಡುತ್ತಿದ್ದಂತೆಯೇ ಚಿತ್ರ ಬದಲಾಯಿತು, ದೇವೇಗೌಡರು ಸಿಎಂ ಆಗಿ ಬಿಟ್ಟರೇ, ಅಂತ ಬೊಮ್ಮಾಯಿ, ಬೊಮ್ಮಾಯಿ ಆಗಿ ಬಿಟ್ಟರೆ ಅಂತ ದೇವೇಗೌಡರು, ಮೆಲ್ಲಗೆ ಹೆಗಡೆ ಪರ ವಾಲಿದರು, ಯಂಗ್ ಟರ್ಕ್ ಖ್ಯಾತಿಯ ಚಂದ್ರಶೇಖರ್ ಕೂಡಾ ಇದಕ್ಕೆ ಪಾಲು ಕೊಟ್ಟಿದ್ದರು.
ಆದರೆ ಕ್ರಾಂತಿರಂಗ, ಜನತಾಪಕ್ಷ ಸೇರಿ ಸರ್ಕಾರ ರಚನೆ ಮಾಡಲು ಸಾಧ್ಯವಿರಲಿಲ್ಲವಲ್ಲ, ಇದ್ದುದರಲ್ಲಿ ಪಕ್ಷೇತರರು ಜತೆ ನಿಲ್ಲುವುದು ಖಚಿತವಾಗಿದ್ದರೂ ಹದಿನೆಂಟು ಶಾಸಕರ ಬಲ ಹೊಂದಿದ್ದ ಬಿಜೆಪಿ ಬೆಂಬಲ ಯಾರಿಗೆ ಎಂಬ ಪ್ರಶ್ನೆ ಬಂದಾಗ ಆ ಪಕ್ಷದ ರಾಷ್ಟ್ರೀಯ ನಾಯಕ ವಾಜಪೇಯಿ ಅವರು, ’ಹೆಗಡೆ ಸಿಎಂ ಆಗುವುದಾದರೆ ಮಾತ್ರ ಸರ್ಕಾರಕ್ಕೆ ನಮ್ಮ ಬೆಂಬಲ’ ಅಂತ ಮೆಸೇಜು ಕೊಟ್ಟರು.
ಅಂದ ಹಾಗೆ ಕರ್ನಾಟಕದ ಕಾಂಗ್ರೆಸ್ಸೇತರ ನಾಯಕರ ಪೈಕಿ ವಾಜಪೇಯಿ ಅವರಿಗೆ ತುಂಬ ಪರಿಚಿತರಾಗಿದ್ದವರು ರಾಮಕೃಷ್ಣ ಹೆಗಡೆ, ತುರ್ತುಸ್ಥಿತಿಯ ಕಾಲದಿಂದ ಹಿಡಿದು ಹಲವು ಸಂದರ್ಭಗಳಲ್ಲಿ ಅವರು ಹೆಗಡೆಯವರ ಜತೆ ಒಡನಾಡಿದ್ದರು.
ಆದರೆ, ಇಷ್ಟಾದರೂ ಅವರು ಹೆಗಡೆಯವರ ಪರ ಗಟ್ಟಿಯಾಗಿ ನಿಲ್ಲಲು ಕರ್ನಾಟಕದ ಧರ್ಮಾಧಿಕಾರಿಯೊಬ್ಬರು ಕಾರಣರಾಗಿದ್ದರು, ಕಾಂಗ್ರೆಸ್ಸೇತರ ಸರ್ಕಾರ ಇಲ್ಲಿ ಭದ್ರವಾಗಿ ನೆಲೆಯೂರಬೇಕು ಎಂದರೆ ರಾಮಕೃಷ್ಣ ಹೆಗಡೆ ಅದರ ನೇತೃತ್ವ ವಹಿಸಬೇಕು ಅಂತ ಈ ಧರ್ಮಾಧಿಕಾರಿಗಳು ಹೇಳಿದ್ದರಿಂದ ವಾಜಪೇಯಿ ದುಸರಾ ಮಾತನಾಡದೆ ಹೆಗಡೆಯವರ ಪರವಾಗಿ ನಿಂತಿದ್ದರು.
ಪರಿಣಾಮ ಬಂಗಾರಪ್ಪ, ನಜೀರ್ ಸಾಬ್, ದೇವೇಗೌಡ, ಬೊಮ್ಮಾಯಿ ಅವರೆಲ್ಲ ಸಿಎಂ ಹುದ್ದೆಯ ರೇಸಿನಿಂದ ಹೊರಬಿದ್ದು, ಹೆಗಡೆ ಸಿಂಹಾಸನವೇರಿದರು.
ರೇಸಿಗೆ ಬಂದ ಏಕೈಕ ಮುಸ್ಲಿಂ ನಾಯಕ
ಇನ್ನು ಕರ್ನಾಟಕದ ಸಿಎಂ ಹುದ್ದೆಯ ರೇಸಿನಲ್ಲಿ ಕಾಣಿಸಿಕೊಂಡ ಏಕೈಕ ಮುಸ್ಲಿಂ ನಾಯಕ ಅಬ್ದುಲ್ ನಜೀರ್ ಸಾಬ್, ಅವರನ್ನು ಕಂಡರೆ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರಿಗೆ ಬಹಳ ಗೌರವ.

ಕರ್ನಾಟಕದಲ್ಲಿ ಅಧಿಕಾರ ಹಿಡಿದ ಮೊದಲ ಕಾಂಗ್ರೆಸ್ಸೇತರ ಸರ್ಕಾರದ ಪಾಲಿಗೆ ಟಾನಿಕ್ ಆಗಿದ್ದ ನಜೀರ್ ಸಾಬ್ ಅವರು, ಪಂಚಾಯತ್ ರಾಜ್ ವ್ಯವಸ್ಥೆಗೆ ನೀಡಿದ ಕಾಣಿಕೆಯಿಂದ ಪ್ರಧಾನಿ ರಾಜೀವ್ ಗಾಂಧಿಯವರ ಗಮನ ಸೆಳೆದಿದ್ದರು.
ಮುಂದೆ ಸ್ಥಳೀಯ ಸಂಸ್ಥೆಗಳಿಗೆ ಸಂವಿಧಾನಾತ್ಮಕ ರಕ್ಷಣೆ ನೀಡಲು 64 ಮತ್ತು 65ನೇ ಕಾಯ್ದೆಗೆ ತಿದ್ದುಪಡಿ ತರಲು ನಜೀರ್ ಸಾಬ್ ಅವರಿಂದಲೇ ಪ್ರೇರಣೆ ಪಡೆದಿದ್ದ ರಾಜೀವ್ ಗಾಂಧಿ, ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಲು ಮುಂದಾದರು.
ಆದರೆ ಅವರು ಇಂತಹ ತೀರ್ಮಾನಕ್ಕೆ ಬರುವ ವೇಳೆಗಾಗಲೇ ನಜೀರ್ ಸಾಬ್ ಅವರ ಆರೋಗ್ಯ ಹದಗೆಟ್ಟಿತ್ತು.
ಆದರೆ ಇಷ್ಟಾದರೂ ರಾಜೀವ್ ಗಾಂಧಿಯವರು ತಮ್ಮ ಸಹಕಾರ ಕೋರಿದಾಗ ನಜೀರ್ ಸಾಬ್ ಇಲ್ಲ ಅನ್ನಲಿಲ್ಲ, ಹಾಗಂತ ಇಂತಹ ಸಹಕಾರ ನೀಡಲು ದಿಲ್ಲಿಗೆ ಹಾರಿಹೋಗುವ ಸ್ಥಿತಿಯಲ್ಲೂ ಅವರು ಇರಲಿಲ್ಲ.
ಆದರೆ, ವಿಷಯ ತಿಳಿದ ರಾಜೀವ್ ಗಾಂಧಿ ಅವರು ತಮ್ಮ ಜತೆಯಲ್ಲೇ ಇದ್ದ ಸಲ್ಮಾನ್ ಖುರ್ಷಿದ್ ಮತ್ತು ಮಣಿಶಂಕರ್ ಅಯ್ಯರ್ ಅವರನ್ನು ಕರ್ನಾಟಕಕ್ಕೆ ಕಳಿಸಿದರು.
ಹೀಗೆ ರಾಜೀವ್ ಗಾಂಧಿಯವರ ಸೂಚನೆಯಂತೆ ಕರ್ನಾಟಕಕ್ಕೆ ಬಂದ ಈ ಇಬ್ಬರು ನಾಯಕರು ನಾಲ್ಕು ದಿನ ಸತತವಾಗಿ ನಜೀರ್ ಸಾಬ್ ಹೇಳಿದ್ದನ್ನು ಬರೆದುಕೊಂಡು ದಿಲ್ಲಿಗೆ ಹೋದರು.

ಮುಂದೆ ಸ್ಥಳೀಯ ಸಂಸ್ಥೆಗಳಿಗೆ ಸಂವಿಧಾನಾತ್ಮಕ ರಕ್ಷಣೆ ನೀಡುವ ಈ ತಿದ್ದುಪಡಿ ಕಾಯ್ದೆಯನ್ನು ರೂಪಿಸಿದರೂ, ಅದನ್ನು ಜಾರಿಗೆ ತರಲು ರಾಜೀವ್ ಗಾಂಧಿಯವರಿಗೆ ಸಾಧ್ಯವಾಗಲಿಲ್ಲ, ಕಾರಣ, ರಾಜಕೀಯ ಸ್ಥಿತ್ಯಂತರಗಳ ನಡುವೆ ಅವರ ಸರ್ಕಾರ ಉರುಳಿತ್ತು.
ಆದರೆ ಅದನ್ನೇ ಮುಂದಿಟ್ಟುಕೊಂಡ ಪಿ.ವಿ.ನರಸಿಂಹರಾವ್, ತಾವು ಪ್ರಧಾನಿಯಾಗಿದ್ದ ಕಾಲದಲ್ಲಿ 74ನೇ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದರು.
ಹೀಗೆ ಕ್ರಾಂತಿಕಾರಿ ಚಿಂತನೆಗಳ ಮೂಲಕ ಕರ್ನಾಟಕದ ಸಿಎಂ ಹುದ್ದೆಯ ರೇಸಿಗೆ ಬಂದಿದ್ದ ಏಕೈಕ ಮುಸ್ಲಿಂ ನಾಯಕ ನಜೀರ್ ಸಾಬ್ ಎಂಬುದು ಈಗ ಇತಿಹಾಸ.
ಆರ್.ಟಿ.ವಿಠ್ಠಲಮೂರ್ತಿ
