ಮೈಸೂರು:ಕೇಂದ್ರ ಸರ್ಕಾರದ ಸೂಚನೆಯಂತೆ ಕರ್ನಾಟಕದಲ್ಲಿ ಇರಬಹುದಾದ ಪಾಕಿಸ್ತಾನಿ ಪ್ರಜೆಗಳ ಮಾಹಿತಿ ಕಲೆಹಾಕಿ, ಅವರನ್ನು ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಪಾಕಿಸ್ತಾನಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಮಾಹಿತಿ ಇದ್ದು, ಈ ಬಗ್ಗೆ ವಿವರ ಪಡೆಯಲಾಗುವುದು ಎಂದರು.

ಬಿಗಿ ಭದ್ರತೆ ಒದಗಿಸಬೇಕಿತ್ತು
ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ಘಟನೆಗೆ ಸಂಬಂಧಿಸಿದಂತೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸ್ಥಳಗಳಿಗೆ ಬಿಗಿ ಭದ್ರತೆ ಒದಗಿಸಬೇಕಿತ್ತು.
ಹಿಂದೆ ಪುಲ್ವಾಮಾದಲ್ಲಿಯೂ 40 ಯೋಧರು ಪ್ರಾಣ ಕಳೆದುಕೊಂಡಿದ್ದರು, ಆಗಲೂ ಭದ್ರತಾ ವೈಫಲ್ಯವಾಗಿದೆ, ಕೇಂದ್ರವನ್ನು ನಂಬಿ ಪ್ರವಾಸಿಗರು ಹೋಗಿದ್ದರು, ಈಗ ಯಾವುದೇ ಕ್ರಮ ಕೈಗೊಂಡರೂ, ಪ್ರಾಣ ಕಳೆದುಕೊಂಡ 26 ಜನ ಮತ್ತೆ ಬದುಕಿ ಬರಲು ಸಾಧ್ಯವೇ, ಕಾಶ್ಮೀರದಲ್ಲಿ ಸಿಲುಕಿದ್ದ ಎಲ್ಲ ಕನ್ನಡಿಗರನ್ನು ಸಚಿವ ಸಂತೋಷ್ ಲಾಡ್ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತಂದಿದ್ದಾರೆ.
ಯುದ್ಧ ಸಾರುವ ಅಗತ್ಯವಿಲ್ಲ
ಉಗ್ರರ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಮೇಲೆ ಯುದ್ಧ ಸಾರುವ ಅಗತ್ಯವಿಲ್ಲ, ಕಾಶ್ಮೀರ ಪ್ರದೇಶದಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲು ಕ್ರಮ ಕೈಗೊಳ್ಳಬೇಕು, ನಾವು ಯುದ್ಧದ ಪರ ಇಲ್ಲ, ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಕೇಂದ್ರ ಸರ್ಕಾರ ಭದ್ರತೆ ಹೆಚ್ಚಿಸಬೇಕು.
ಕಾಶ್ಮೀರ ಉಗ್ರರ ದಾಳಿಗೆ ಸಂಬಂಧಿಸಿದಂತೆ ಕರೆಯಲಾಗಿದ್ದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಹಾಜರಿರಬೇಕಿತ್ತು, ಆದರೆ, ಅವರಿಗೆ ಬಿಹಾರದ ಚುನಾವಣಾ ಪ್ರಚಾರವೇ ಮುಖ್ಯವೆಂದು ಕಾಣುತ್ತದೆ, ಪ್ರಧಾನಿ ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದರು.
