ಬೆಂಗಳೂರು:ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಮೇ 20ರ ವೇಳೆಗೆ ಪ್ರಕಟಗೊಳ್ಳಲಿದೆ.
ಏಪ್ರಿಲ್ 16 ಮತ್ತು 17ರಂದು ನಡೆದ ಪರೀಕ್ಷೆಯಲ್ಲಿ ವೃತ್ತಿಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶ ಬಯಸಿ 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
11.50 ಲಕ್ಷ ಓಎಂಆರ್ ಶೀಟ್
ಪರೀಕ್ಷೆ ಬರೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಂಡು, 11.50 ಲಕ್ಷ ಓಎಂಆರ್ ಶೀಟ್‌ಗಳನ್ನು ಪರೀಕ್ಷಾ ಪ್ರಾಧಿಕಾರ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದೆ.
ಪರೀಕ್ಷೆ ಬರೆದಿರುವ ಕೇಂದ್ರ, ವಿದ್ಯಾರ್ಥಿಯ ಕೋಡ್ ಹಾಕಿದರೆ ಉತ್ತರ ಪತ್ರಿಕೆಗಳು ದೊರೆಯಲಿವೆ.
ಪರೀಕ್ಷೆಯಲ್ಲಿ ಗೊಂದಲಗಳು ನಡೆದಿವೆ ಎಂಬ ಸಂಶಯಗಳ ನಿವಾರಣೆಗೆ ಪರೀಕ್ಷಾ ಪ್ರಾಧಿಕಾರ ಇದೇ ಮೊದಲ ಬಾರಿಗೆ ಓಎಂಆರ್ ಶೀಟ್‌ಗಳನ್ನು ಬಹಿರಂಗಪಡಿಸುತ್ತಿದೆ.

ಎರಡನೇ ಪರೀಕ್ಷೆ ಫಲಿತಾಂಶ
ಮೌಲ್ಯಮಾಪನ ಕಾರ್ಯ ಪೂರ್ಣಗೊಂಡಿದ್ದರೂ ದ್ವಿತೀಯ ಪಿಯಸಿಯ ಎರಡನೇ ಪರೀಕ್ಷೆ ಫಲಿತಾಂಶ ಪ್ರಕಟಗೊಳ್ಳುವವರೆಗೂ ಪ್ರಾಧಿಕಾರ ಫಲಿತಾಂಶ ಪ್ರಕಟಿಸಲು ಸಾಧ್ಯವಿಲ್ಲ.
ಪಿಯುಸಿ ಎರಡನೇ ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳ ತೇರ್ಗಡೆ ಅಂಕಗಳನ್ನೂ ಪರಿಗಣಿಸಿ ನಂತರ ಪ್ರಾಧಿಕಾರ ಫಲಿತಾಶ ಪ್ರಕಟಿಸಲಿದೆ.
ದ್ವಿತೀಯ ಪರೀಕ್ಷೆ ಈಗಾಗಲೇ ಆರಂಭಗೊಂಡಿದ್ದು ಮೇ 8ಕ್ಕೆ ಪೂರ್ಣಗೊಳ್ಳಲಿದೆ, ಪರೀಕ್ಷೆಗಳು ಮುಗಿದ ಮರುದಿನದಿಂದಲೇ ಆಯಾ ವಿಷಯಗಳ ಮೌಲ್ಯಮಾಪನ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದ್ದು, ಮೇ ಮಧ್ಯಭಾಗದಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ.
ಕೇಂದ್ರ ಶಿಕ್ಷಣ ಸಂಸ್ಥೆಗಳ ಪರೀಕ್ಷೆ
ಈ ಫಲಿತಾಶ ಪ್ರಕಟಣೆಗೂ ಮುನ್ನ ಕೇಂದ್ರ ಶಿಕ್ಷಣ ಸಂಸ್ಥೆಗಳ ಕೋರ್ಸ್‌ಗಳಿಗೆ ನಡೆದ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟಗೊಳ್ಳಲಿದೆ, ಇದರಿಂದ ಸಿಇಟಿ ಪ್ರಾಧಿಕಾರ ತನ್ನ ಫಲಿತಾಂಶ ಪ್ರಕಟಿಸಲು ಸಾಧ್ಯವಾಗಲಿದೆ.
ಇದರ ಮಧ್ಯೆ, ಜನಿವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಪರೀಕ್ಷೆ ವಂಚಿತ ವಿದ್ಯಾರ್ಥಿಗಳಿಗೆ ಪ್ರಾಧಿಕಾರ ಯಾವ ರೀತಿ ನ್ಯಾಯ ಒದಗಿಸಲಿದೆ ಎಂದು ಕಾದು ನೋಡಬೇಕಿದೆ.
