ಬೆಂಗಳೂರು:ಬಿಜೆಪಿ ಹೇಳುವುದೊಂದು ಮಾಡುವುದು ಇನ್ನೊಂದು, ಇದೇ ಅವರ ಮುಖವಾಡ, ರೈಲ್ವೆ ಪರೀಕ್ಷೆಯಲ್ಲಿ ಮಂಗಳಸೂತ್ರ, ಜನಿವಾರ ತೆಗೆಯಲು ಹೇಳಿರುವುದು ಸರಿಯಲ್ಲ ಈ ಆದೇಶ ಹಿಂಪಡೆಯಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರ್ಮಿಕ ಸಂಕೇತಗಳಾಗಿ ಕಿವಿ ಓಲೆ, ಮೂಗುತಿ, ಮಂಗಳಸೂತ್ರ, ಜನಿವಾರ, ಉಡುದಾರ, ಹಣೆಬೊಟ್ಟು ಇವುಗಳನ್ನು ಪರಿಶೀಲಿಸಲಿ, ಆದರೆ, ತೆಗೆಸುವುದು ಸರಿಯಲ್ಲ, ಇಂತಹ ಆದೇಶ ವಿರುದ್ಧ ಜನರೇ ಪ್ರತಿಕ್ರಿಯಿಸಬೇಕು ಎಂದರು.
ಧಾರ್ಮಿಕ ಭಾವನೆಗಳಿಗೆ ಧಕ್ಕೆ
ಸಣ್ಣ, ಸಣ್ಣ ಉಪಕರಣ ಬಳಸಿ ಪರೀಕ್ಷಾ ಅಕ್ರಮ ಎಸಗಿದ ಉದಾಹರಣೆಗಳಿದ್ದು ಈ ಹಿನ್ನೆಲೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಆದೇಶಗಳನ್ನು ಜಾರಿ ಮಾಡಬಾರದು ಎಂದರು.
ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಜನಜಾಗೃತಿ ಮೂಡಿಸಿ, ಸಂವಿಧಾನ ರಕ್ಷಣೆಗೆ ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾ ಕೇಂದ್ರಗಳಲ್ಲಿ ಪ್ರದರ್ಶನ
ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಭಾಗವಹಿಸಲಿದ್ದು, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರದರ್ಶನ ನಡೆಯಲಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣವಾಗಿದ್ದು, ಇದರ ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡಬೇಕು, ನಾವು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೆಲೆ ಏರಿಕೆ ನೀತಿ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದರು.
