ಬೆಂಗಳೂರು:ವಿಧಾನಸಭಾಧ್ಯಕ್ಷರು ಆಡಳಿತ ಪಕ್ಷದ ಕೈಗೊಂಬೆಯಾಗಿ ವರ್ತಿಸಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಒತ್ತಾಯಿಸಿದ್ದಾರೆ.
ಬಿಜೆಪಿಯ 18 ಶಾಸಕರ ಅಮಾನತು ತಮ್ಮೊಬ್ಬರ ತೀರ್ಮಾನ ಅಲ್ಲ ಎಂಬುದಾಗಿ ಮಂಗಳೂರಿನಲ್ಲಿ ಸ್ಪೀಕರ್ ಯು.ಟಿ.ಖಾದರ್ ಹೇಳಿಕೆ ನೀಡಿರುವುದು ಆಡಳಿತ ಪಕ್ಷದ ಕೈಗೊಂಬೆ ಎಂಬುದಕ್ಕೆ ಸಾಕ್ಷಿಯಾಗಿದೆ.

ನಿರ್ಧಾರದಿಂದ ಹಿಂದೆ ಸರಿಯಬೇಕು
ಆಡಳಿತ ಪಕ್ಷಕ್ಕೆ ಮನವರಿಕೆ ಮಾಡುವ ಮೂಲಕ ಸ್ಪೀಕರ್ ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.
ಇದಕ್ಕೂ ಮುನ್ನ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಶಾಸಕರ ನಿಯೋಗ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ಪಕ್ಷದ 18 ಶಾಸಕರನ್ನು ವಿಧಾನಸಭೆ ಕಲಾಪದಿಂದ 6 ತಿಂಗಳು ಅಮಾನತು ಮಾಡಿರುವ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿ, ಸರ್ಕಾರಕ್ಕೆ ಬುದ್ಧಿ ಹೇಳಬೇಕೆಂದು ಕೋರಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ರಾಜ್ಯ ಸರ್ಕಾರದ ಸಂವಿಧಾನ ವಿರೋಧಿ ನಡೆಗೆ ಸ್ಪೀಕರ್ ಬೆಂಬಲ ಕೊಡಬಾರದು, ಬಿಜೆಪಿಯ 18 ಶಾಸಕರ ಅಮಾನತು ಹಿಂಪಡೆಯುವಂತೆ ಹಲವಾರು ಬಾರಿ ಭೇಟಿ ಮಾಡಿ ಮನವಿ ಮಾಡಿದರೂ ಅಮಾನತು ವಾಪಸು ಹಿಂಪಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಅವಿವೇಕತನದ ಹೇಳಿಕೆ
ಕಾಶ್ಮೀರದ ಪುಲ್ವಾಮಾದಲ್ಲಿ ಕರ್ನಾಟಕದವರೂ ಸೇರಿದಂತೆ ಭಾರತದ 26 ಪ್ರವಾಸಿಗರ ಹತ್ಯೆ ಮಾಡಿದ ಪಾಕಿಸ್ತಾನದ ಭಯೋತ್ಪಾದಕರ ಕೃತ್ಯಕ್ಕೆ ಪ್ರತೀಕಾರವಾಗಿ ಆ ದೇಶದ ಮೇಲೆ ಯುದ್ಧ ಮಾಡಬಾರದೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಅವಿವೇಕತನದ ಮಾತು.
ಪಾಕಿಸ್ತಾನದ ವಿರುದ್ಧ ಯುದ್ಧ ಬೇಡ ಎಂಬ ಮುಖ್ಯಮಂತ್ರಿ ಹೇಳಿಕೆಗೆ ಸಚಿವರಾದ ಆರ್.ಬಿ.ತಿಮ್ಮಾಪುರ, ಸಂತೋಷ್ ಲಾಡ್ ಬೆಂಬಲ ನೀಡುವ ಧಾಟಿಯಲ್ಲಿ ಮಾತನಾಡಿದ್ದಾರೆ.
ಭಯೋತ್ಪಾದನಾ ದಾಳಿಗೆ ಪ್ರತೀಕಾರವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ಬೆಂಬಲ ಕೊಡುವುದಾಗಿ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ದೇಶದ ಪರ ನಿಲ್ಲಬೇಕು
ಪಾಕ್ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಅಗತ್ಯ ಎಂಬುದಾಗಿ ಕಾಂಗ್ರೆಸ್ಸಿನ ಹಿರಿಯ ಸಂಸದ ಶಶಿ ತರೂರ್ ಸಹಾ ಹೇಳಿರುವುದನ್ನು ಮುಖ್ಯಮಂತ್ರಿ ಮತ್ತು ಅವರ ಸಚಿವ ಸಂಪುಟದ ಸದಸ್ಯರು ಅರ್ಥ ಮಾಡಿಕೊಳ್ಳಬೇಕು, ಅವಿವೇಕತನದ ಹೇಳಿಕೆ ಬಿಟ್ಟು ದೇಶದ ಪರವಾಗಿ ನಿಲ್ಲಬೇಕು ಎಂದು ಆಗ್ರಹಿಸಿದರು.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಶಾಸಕರ ಅಮಾನತು ಸಂವಿಧಾನ ಬಾಹಿರ ಎಂಬ ಬಗ್ಗೆ ರಾಜ್ಯಪಾಲರ ಗಮನ ಸೆಳೆದಿದ್ದೇವೆ, ಸ್ಪೀಕರ್ ಜೊತೆ ಮಾತನಾಡುವುದಾಗಿ ಹಾಗೂ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದಾರೆ ಎಂದರು.
ರೈಲ್ವೆ ನೇಮಕಾತಿ ಪರೀಕ್ಷೆ ವೇಳೆ ತಾಳಿ ಮತ್ತು ಜನಿವಾರದ ಉಲ್ಲೇಖ ಮಾಡಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಜೊತೆ ಮಾತನಾಡಿದ್ದೇವೆ, ರೈಲ್ವೆ ಸಚಿವರು ಇಂತಹ ಕ್ರಮ ಕೈಗೊಳ್ಳದಂತೆ ಸೂಚಿಸಿದ್ದಾರೆಂಬ ವಿವರ ನೀಡಿದ್ದಾರೆ ಎಂದರು.
