ಬೆಂಗಳೂರು:ರಾಷ್ಟ್ರವ್ಯಾಪಿ ಸದ್ದು ಮಾಡಿದ್ದ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರ ಹನಿಟ್ರ್ಯಾಪ್ ಆರೋಪದಲ್ಲಿ ಸತ್ಯಾಂಶ ಇಲ್ಲ ಎಂದು ಸಿಐಡಿ ಪೋಲಿಸರು ಪ್ರಕರಣಕ್ಕೆ ತೆರೆ ಎಳೆದಿದ್ದಾರೆ.
ಸಿಐಡಿ ವಿಭಾಗದ ಡಿಜಿಪಿ ಡಾ.ಎಂ.ಎ.ಸಲೀಂ, ಪ್ರಕರಣದ ತನಿಖೆ ನಡೆಸಿ, ಆರೋಪ ಸಾಬೀತುಪಡಿಸುವ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ, ಆರೋಪಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಅಗತ್ಯವಿಲ್ಲ ಎಂದು ರಾಜ್ಯ ಪೋಲಿಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಮನವಿ ಮೇರೆಗೆ ತನಿಖೆ
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಮಾಡಿದ ಮನವಿ ಮೇರೆಗೆ ಪ್ರಕರಣದ ತನಿಖೆ ನಡೆಸುವಂತೆ ಪೋಲಿಸ್ ಮಹಾನಿರ್ದೇಶಕರಿಗೆ ಆದೇಶ ಮಾಡಿದ್ದರು.
ಗೃಹ ಸಚಿವರ ಆದೇಶದ ಮೇರೆಗೆ ಪೋಲಿಸ್ ಮಹಾನಿರ್ದೇಶಕರು, ಆರೋಪಕ್ಕೆ ಸಂಬಂಧಿಸಿದಂತೆ ಸತ್ಯಾಸತ್ಯತೆ ಅರಿತು ಮುಂದಿನ ಕ್ರಮಕ್ಕೆ ಸಿಐಡಿಗೆ ವಹಿಸಿದ್ದರು.
ಪ್ರಕರಣದ ಆರೋಪದ ಬಗ್ಗೆ ಸಚಿವರೂ ಸೇರಿದಂತೆ ಅವರ ಆಪ್ತ ಸಿಬ್ಬಂದಿ ಗನ್‌ಮ್ಯಾನ್ ಅವರುಗಳ ವಿಚಾರಣೆಯನ್ನು ಸಿಐಡಿ ನಡೆಸಿತು.
ದಾಖಲೆ ಒದಗಿಸಲಿಲ್ಲ
ಈ ವೇಳೆ ಸಚಿವರೂ ಸೇರಿದಂತೆ ಯಾರೂ ಹನಿಟ್ರ್ಯಾಪ್‌ಗೆ ಸಂಬಂಧಿಸಿದಂತೆ ಸ್ಪಷ್ಟ ಚಿತ್ರಣವನ್ನೂ ನೀಡಲಿಲ್ಲ, ದಾಖಲೆಯನ್ನೂ ಒದಗಿಸಲಿಲ್ಲ.
ಜೊತೆಗೆ ಸಚಿವರ ಸರ್ಕಾರಿ ನಿವಾಸದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ಸಂದರ್ಭದಲ್ಲೂ ಆರೋಪಕ್ಕೆ ಸಂಬಂಧಿಸಿದ ವ್ಯಕ್ತಿಗಳು ಕಂಡುಬಂದಿಲ್ಲ.
ಈ ಹಿನ್ನೆಲೆಯಲ್ಲಿ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಿಲ್ಲ ಹಾಗೂ ಹೆಚ್ಚಿನ ತನಿಖೆ ಅಗತ್ಯವಿಲ್ಲ ಎಂಬ ಮಾಹಿತಿ ನೀಡಿದ್ದಾರೆ.
ಸರ್ಕಾರಕ್ಕೆ ಮುಜುಗರ
ಹನಿಟ್ರ್ಯಾಪ್ ಮೂಲಕ ತಮ್ಮನ್ನು ಹಣಿಯಲು ಪ್ರಯತ್ನ ನಡೆದಿತ್ತೆಂದು ರಾಜಣ್ಣ, ವಿಧಾಸಭೆಯಲ್ಲೇ ಹೇಳಿಕೆ ನೀಡಿ, ಆಡಳಿತ ಪಕ್ಷ ಮತ್ತು ಸರ್ಕಾರವನ್ನೇ ಮುಜುಗರಕ್ಕೆ ಸಿಲುಕಿಸಿದ್ದರು.
ಅಷ್ಟೇ ಅಲ್ಲ, ಮುಂದುವರೆದು, ನನ್ನೊಬ್ಬನದೇ ಅಲ್ಲ, ವಿಧಾನಸಭೆಯಲ್ಲಿನ ಆಡಳಿತ ಪಕ್ಷದವರಷ್ಟೇ ಅಲ್ಲದೆ, ವಿರೋಧ ಪಕ್ಷ ಹಾಗೂ ದೆಹಲಿ ನಾಯಕರೂ ಸೇರಿದಂತೆ 48 ಗಣ್ಯರು ಹನಿಟ್ರ್ಯಾಪ್‌ಗೆ ಸಿಲುಕಿದ್ದಾರೆ ಎಂದಿದ್ದರು.
ಹನಿಟ್ರ್ಯಾಪ್‌ಗೆ ಸಂಬಂಧಿಸಿದಂತೆ ತಮ್ಮ ಬಳಿ ದಾಖಲೆಗಳಿದ್ದು, ಸೂಕ್ತ ಸಂದರ್ಭದಲ್ಲಿ ಬಹಿರಂಗ ಪಡಿಸುವುದಾಗಿ, ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ದೂರು ನೀಡುವುದಾಗಿಯೂ ಹೇಳಿದ್ದರು.

ಸದನದಲ್ಲೇ ಡಾ.ಪರಮೇಶ್ವರ್ ಹೇಳಿಕೆ
ಆರೋಪ ವೇಳೆ ಸದನದಲ್ಲೇ ಇದ್ದ ಗೃಹ ಸಚಿವ ಡಾ.ಪರಮೇಶ್ವರ್, ಸಚಿವ ರಾಜಣ್ಣ ದೂರು ನೀಡಿದರೆ ತನಿಖೆ ನಡೆಸಿ ಹನಿಟ್ರ್ಯಾಪ್ ತಂಡವನ್ನು ಬಗ್ಗುಬಡಿಯುವುದಾಗಿ ತಿಳಿಸಿದ್ದರು.
ಈ ಮಾತುಗಳನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಾ ಪುನರುಚ್ಛರಿಸಿದ್ದರು.
ರಾಜಣ್ಣ ಹೇಳಿಕೆ ಸಂಸತ್‌ನ ಉಭಯ ಸದನಗಳಲ್ಲೂ ಚರ್ಚೆಗೆ ಗ್ರಾಸವಾಯಿತಲ್ಲದೆ, ವಿಷಯ ಸುಪ್ರೀಂ ಕೋರ್ಟ್ ಮೆಟ್ಟಿಲೂ ಏರಿತ್ತು.
ಕಾಂಗ್ರೆಸ್ ವರಿಷ್ಠರ ಮಧ್ಯೆಪ್ರವೇಶ
ಹನಿಟ್ರ್ಯಾಪ್ ಪ್ರಕರಣ ಪಕ್ಷಕ್ಕೆ ಮಜುಗರ ಉಂಟು ಮಾಡುತ್ತಿದೆ ಎಂಬುದನ್ನು ಅರಿತ ಕಾಂಗ್ರೆಸ್ ವರಿಷ್ಠರು ಮಧ್ಯೆ ಪ್ರವೇಶ ಮಾಡಿ ಮುಖ್ಯಮಂತ್ರಿ ಹಾಗೂ ಸಹಕಾರಿ ಸಚಿವರೊಂದಿಗೆ ಸಮಾಲೋಚನೆ ನಡೆಸಿದರು.
ವರಿಷ್ಠರು ಮಧ್ಯೆಪ್ರವೇಶಿಸುತ್ತಿದ್ದಂತೆ ರಾಜಣ್ಣ ತಮ್ಮ ನಿಲುವನ್ನು ಬದಲಾವಣೆ ಮಾಡಿಕೊಂಡಿದ್ದಲ್ಲದೆ, ಪ್ರಕರಣದ ತನಿಖೆಗೆ ದೂರನ್ನೂ ನೀಡಲಿಲ್ಲ, ಸರ್ಕಾರಕ್ಕೆ ಕೇವಲ ಮನವಿ ಮಾತ್ರ ಸಲ್ಲಿಸಿ, ಅದನ್ನು ಮುಂದುವರೆಸದೆ ಕೈಬಿಟ್ಟರು.
